ಗಾಂಧಿನಗರ : ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಮಾತು ಕೇಳಿದ್ದರೆ ಇಂದು ಕಾಶ್ಮೀರ ವಿಷಯ.ಇತ್ಯರ್ಥ ಆಗಿರುತ್ತಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಪಟೇಲ್ ಕಠಿಣ ನಿಲುವು ತಳೆದಿದ್ದರು, ದೇಶ ವಿಭಜನೆ ಬಳಿಕ ನಡೆದ ಪಾಕ್ ಜತೆಗಿನ ಮೊದಲ ಯುದ್ಧದ ವೇಳೆ ಪಿಒಕೆ ವಾಪಸ್ ಆಗುವವರೆಗೆ ಸೇನಾ ಕಾರ್ಯಾಚರಣೆ ನಿಲ್ಲಿಸಬಾರದು ಎಂಬುದು ಅವರ ನಿಲುವಾಗಿತ್ತು. ಆದರೆ, ಆಗಿನ ನಾಯಕತ್ವ ಅದನ್ನು ನಿರ್ಲಕ್ಷಿಸಿತು ಎಂದು ನೆಹರೂ ಹೆಸರೆತ್ತದೆ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಗುಜರಾತ್‌ನ ಗಾಂಧಿನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶವಿಭಜನೆ ಮತ್ತು ಕಾಶ್ಮೀರ ಸಂಘರ್ಷಕ್ಕೆ ನೇರ ಸಂಬಂಧ ಕಲ್ಪಿಸಿದ ಮೋದಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಬೆನ್ನಿಗೆ ನಿಂತು ಪಾಕ್ ಆಕ್ರಮಿತ ಕಾಶ್ಮೀರವನ್ನು ಮರುವಶಪಡಿಸಿಕೊಳ್ಳಬಹುದಾಗಿದ್ದ ಬಹುದೊಡ್ಡ ಅವಕಾಶವೊಂದು ಭಾರತದ ಕೈಯಿಂದ ತಪ್ಪಿ ಹೋಯಿತು ಎಂದು ಹೇಳಿದರು.
1947ರಲ್ಲಿ ದೇಶವನ್ನು 3 ಭಾಗಗಳಾಗಿ ವಿಭಜಿಸಲಾಯಿತು. ಅದೇ ರಾತ್ರಿ ಕಾಶ್ಮೀರದ ಮೇಲೆ ಮೊದಲ ಉಗ್ರ ದಾಳಿ ನಡೆಯಿತು. ಮುಜಾ ಹಿದೀನ್‌ಗಳ ಹೆಸರಲ್ಲಿ ಉಗ್ರರ ಬಳಸಿ ಭಾರತದ ಭಾಗವೊಂದನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿತು. ಆಗಲೇ ಈ ಉಗ್ರರನ್ನು ನಿರ್ನಾಮ ಮಾಡಿದ್ದರೆ ಈಗ ಕಾಶ್ಮೀರದ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಪಾಕ್ ಆಕ್ರಮಿತ ಕಾಶ್ಮೀರ ಮರುವಶವಾಗುವವರೆಗೂ ನಮ್ಮ ಸೇನೆ ವಿರಮಿಸಬಾರದು ಎಂಬುದು ಆಗ ಸರ್ದಾರ್ ಪಟೇಲ್ ನಿಲುವಾಗಿತ್ತು. ಆದರೆ, ಅವರ ಮಾತು ಕೇಳದೆ ಕದನ ವಿರಾಮ ಘೋಷಿಸಲಾಯಿತು. ಆ ಬಳಿಕ 75 ವರ್ಷಗಳಿಂದ ನಾವು ಭಯೋತ್ಪಾದನೆಯನ್ನು ಎದುರಿಸುತ್ತಾ ಬರುತ್ತಿದ್ದೇವೆ. ಪಹಲ್ಗಾಮ್ ದಾಳಿ ಅದಕ್ಕೊಂದು ಉದಾಹರಣೆ ಎಂದು ಮೋದಿ ಹೇಳಿದರು.

