ಕೋಲ್ಕತಾ : ಆಪರೇಷನ್ ಸಿಂದೂರ ಮುಗಿದಿಲ್ಲ, ಉಗ್ರ ಪೋಷಕರ ವಿರುದ್ಧ ನಮ್ಮ ದೇಶ ನಿರ್ಣಾಯಕ ಕ್ರಮ ಕೈಗೊಳ್ಳಲಿದೆ. ಈಗಾಗಲೇ ನಾವು ಪಾಕಿಸ್ತಾನದೊಳಗೆ ನುಗ್ಗಿ 3 ಬಾರಿ ದಾಳಿ ನಡೆಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಪರೇಷನ್ ಸಿಂದೂರ ಬಳಿಕ ಇದೇ ಮೊದಲ ಬಾರಿಗೆ ಪಶ್ಚಿಮ ಬಂಗಾಳದ ಅಲಿಪುರ್‌ದ್ವಾರ್‌ನಲ್ಲಿ ಗುರುವಾರ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಭಾರತೀಯ ಮಹಿಳೆಯರ ಘನತೆಗೆ ಅವಮಾನ ಮಾಡಿದ ಉಗ್ರರ ದಾರ್ಷ್ಟ್ಯಕ್ಕೆ ನಮ್ಮ ಸೇನಾಪಡೆ ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಿದರು.
ಬಂಗಾಳದ ಈ ಭೂಮಿಯಲ್ಲಿ ನಿಂತು ನಾನು 140 ಕೋಟಿ ಭಾರತೀಯರ ಪರ ಘೋಷಿಸುತ್ತಿದ್ದೇನೆ. ಆಪರೇಷನ್ ಸಿಂದೂರ ಇನ್ನೂ ಮುಗಿದಿಲ್ಲ. ಏ.22ರಂದು ಪಹಲ್ಲಾಂ ದಾಳಿ ಮೂಲಕ ಉಗ್ರರು ತೋರಿದ ಬರ್ಬರತೆ ಕುರಿತು ಪಶ್ಚಿಮ ಬಂಗಾಳದಲ್ಲೂ ತೀವ್ರ ಆಕ್ರೋಶ ಮನೆ ಮಾಡಿದೆ. ನಿಮ್ಮೊಳಗಿನ ಸಿಟ್ಟು ನಾನು ಅರ್ಥಮಾಡಿಕೊಳ್ಳಬಲ್ಲೆ. ಭಯೋತ್ಪಾದಕರು ನಮ್ಮ ಸಹೋದರಿಯರ ಸಿಂದೂರ ಅಳಿಸುವ ದಾರ್ಷ್ಟ್ಯ ಮೆರೆದರು. ನಮ್ಮ ಯೋಧರು ಅವರಿಗೆ ಸಿಂದೂರದ ಶಕ್ತಿ ಏನೆಂದು ತೋರಿಸಿದರು ಎಂದರು.
ಪಹಲ್ಲಾಂ ದಾಳಿ ಬಳಿಕ ಇನ್ನು ಮುಂದೆ ನಮ್ಮ ನೆಲದಲ್ಲಿ ಯಾವುದೇ ಉಗ್ರ ದಾಳಿ ನಡೆದರೆ ಅದಕ್ಕೆ ಭಯೋತ್ಪಾದಕರು ಸೂಕ್ತ ಬೆಲೆ ತೆರಬೇಕಾದೀತು ಎಂಬ ಸಂದೇಶವನ್ನು ಇಡೀ ವಿಶ್ವ ಸಮುದಾಯಕ್ಕೆ ಭಾರತ ರವಾನಿಸಿದೆ. ನಾವು ಅವರ ಮನೆಗೆ ಮೂರು ಬಾರಿ (ಸರ್ಜಿಕಲ್ ಸ್ಟೈಕ್, ಬಾಲಾಕೋಟ್ ದಾಳಿ ಮತ್ತು ಆಪರೇಷನ್ ಸಿಂದೂರ) ಪ್ರವೇಶಿಸಿ ದಾಳಿ ಮಾಡಿದ್ದೇವೆ ಎಂಬುದನ್ನು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

