ಅಮರಾವತಿ : ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕನಸಿನ ಅಮರಾವತಿ ರಾಜಧಾನಿ ಯೋಜನೆಗೆ ಶುಕ್ರವಾರ ಪುನರ್‌ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ದೇವತೆಗಳ ರಾಜಧಾನಿ ಈಗ ರಾಜ್ಯ ರಾಜಧಾನಿಯಾಗಿದೆ. ಸ್ವರ್ಣ ಆಂಧ್ರ ನಿರ್ಮಾಣ ಮಾಡುವುದರೊಂದಿಗೆ ವಿಕಸಿತ ಭಾರತ ನಿರ್ಮಾಣದ ದೃಷ್ಟಿಕೋನ ಉತ್ತೇಜಿಸುವ ದೈವಿಕ ಸೂಚನೆಯಂತಿದೆ. ನಾನು ಕೇವಲ ಒಂದು ನಗರವನ್ನು ನೋಡುತ್ತಿಲ್ಲ, ಇಲ್ಲಿ ಕನಸು ನನಸಾಗಿದ್ದನ್ನು ನೋಡಿದ್ದೇನೆ. ಹೊಸ ಅಮರಾವತಿಯಿಂದ ಹೊಸ ಆಂಧ್ರ ನಿರ್ಮಾಣ. ಆಂಧ್ರ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು. ಈ ವೇಳೆ ಅಮರಾವತಿ ಮತ್ತು ಭೌದ್ಧ ಮತ ನಡುವಿನ ಶಾಂತಿಯ ಸಂಬಂಧವನ್ನೂ ಉಲ್ಲೇಖಿಸಿದರು.
ತೆಲುಗಿನಲ್ಲೇ ಮಾತನಾಡಲು ಆರಂಭಿಸಿದ ಪ್ರಧಾನಿ ಮೋದಿ, ಆಂಧ್ರ ಪ್ರದೇಶದ ಹಿಂದು ಸಂಸ್ಕೃತಿ ಮತ್ತು ಶ್ರೀ ದುರ್ಗಾ ಭವಾನಿ ದೇವಿಗೆ ನಮಿಸಿದರು. ಅಮರಾವತಿ ರಾಜಧಾನಿ ಯೋಜನೆ ಒಟ್ಟು 58,000 ಕೋಟಿ ರೂ ಮೌಲ್ಯದ ಯೋಜನೆಯಾಗಿದ್ದು, ಇದರಲ್ಲಿ ಐಟಿ ಹಬ್ ನಿರ್ಮಾಣ, ಗ್ರೀನ್ ಎನರ್ಜಿ ಉತ್ಪಾದನೆ, ಕ್ಲೀನ್ ಇಂಡಸ್ಟ್ರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡಿದೆ.
ನಿಮ್ಮೊಂದಿಗೆ ನಾವಿದ್ದೇವೆ : ಪವನ್, ಸಿಎಂ
ಪಹಲ್ಗಾಮ್ ಉಗ್ರ ದಾಳಿ ಇತಿಹಾಸದಲ್ಲೇ ಕರಾಳ ದೇಶದ ದಿನಗಳಲ್ಲೊಂದು. ಕಾಶ್ಮೀರದಲ್ಲಿ ರಕ್ತ ಹರಿದಿದೆ. ಸಂತ್ರಸ್ತರ ನೋವನ್ನು ನಾವು ನೋಡಿದ್ದೇವೆ. ಪ್ರಧಾನಿ ಸಂಪೂರ್ಣ ಭಾರ ಹೊತ್ತು ದೇಶ ನಡೆಸುತ್ತಿದ್ದಾರೆ ಎಂದು ಪವನ್ ಹೇಳಿದರು. ನಾವು ನಿಮ್ಮೊಂದಿಗಿದ್ದೇವೆ, ಆಂಧ್ರದ 5 ಕೋಟಿ ಜನ ಮತ್ತು ದೇಶವೇ ನಿಮ್ಮೊಂದಿಗಿದ್ದೇವೆ ಎಂದು ನಾಯ್ಡು ಹೇಳಿದರು.

