ವಾಷಿಂಗ್ಟನ್ : ಇಡೀ ವಿಶ್ವವೇ ಕುತೂಹಲದಿಂದ ಗಮನಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆ ಮಂಗಳವಾರ (ಭಾರತೀಯ ಕಾಲಮಾನ ಸಂಜೆ 4.30ಕ್ಕೆ) ಆರಂಭವಾಗಿದೆ. ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು ರೋಚಕ ಫಲಿತಾಂಶ ನಿರೀಕ್ಷಿಸಲಾಗಿದೆ. ಫಲಿತಾಂಶ ಸ್ಪಷ್ಟಗೊಳ್ಳಲು ಇನ್ನೂ 1-2 ದಿನ ಹಿಡಿಯುವ ನಿರೀಕ್ಷೆ ಇದೆ.
ಸುಮಾರು 24 ಕೋಟಿ ಮತದಾರರು ಮತದಾನದ ಹಕ್ಕು ಪಡೆದಿದ್ದು, ಇ- ಮೇಲ್ ಮೂಲಕ ಮತದಾನಕ್ಕೆ ಮೊದಲೇ ಅವಕಾಶ ಇದ್ದ ಕಾರಣ ಈಗಾಗಲೇ ಸುಮಾರು 9 ಕೋಟಿ ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ. ಮತದಾನದ ಅಂತಿಮ ದಿನವಾದ ಮಂಗಳವಾರ ಇನ್ನೂ ಕೋಟ್ಯಂತರ ಮಂದಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾವಣೆ ಮಾಡುವ ಸಾಧ್ಯತೆ ಇದೆ. ಹೆಚ್ಚಿನ ಪೈಪೋಟಿ ಇರುವ ಕಾರಣ ಭಾರಿ ಪ್ರಮಾಣದ ಮತದಾನ ನಿರೀಕ್ಷಿಸಲಾಗಿದೆ. ಅಲ್ಲದೆ, ಅಮೆರಿಕದಲ್ಲಿ ಇವಿಎಂ ಇಲ್ಲ. ಮತಪತ್ರಗಳ ಮೂಲಕ ಮತದಾನ ನಡೆಯುವ ಕಾರಣ ಮತ ಎಣಿಕೆ ವಿಳಂಬ ಆಗುವ ಸಾಧ್ಯತೆ ಇದೆ. ಆದರೂ 1-2 ದಿನದಲ್ಲಿ ಯಾರು ಮುನ್ನಡೆಯಲ್ಲಿದ್ದಾರೆ ಎಂಬ ಟ್ರೆಂಡ್ ತಿಳಿದು ಬರುವ ನಿರೀಕ್ಷೆಯಿದೆ.