ಕೊಲಂಬೊ : ಒಮಾನ್ ಕರಾವಳಿಯಲ್ಲಿ ತೈಲ ಸಾಗಣೆ ಹಡಗು ಮಗುಚಿಬಿದ್ದು ನಾಪತ್ತೆಯಾಗಿದ್ದವರ ಪೈಕಿ 8 ಭಾರತೀಯರು ಸೇರಿದಂತೆ 9 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ದುರಂತದಲ್ಲಿ 13 ಭಾರತೀಯರು ಸೇರಿದಂತೆ 16 ಸಿಬ್ಬಂದಿ ನಾಪತ್ತೆಯಾಗಿದ್ದರು. ಇತರ ಮೂವರು ಸಿಬ್ಬಂದಿ ಶ್ರೀಲಂಕಾದವರಾಗಿದ್ದಾರೆ. ಪ್ರೆಸ್ಟೀಜ್ ಫಾಲ್ಕನ್‌ನ ಸಿಬ್ಬಂದಿ 13 ಭಾರತೀಯ ಪ್ರಜೆಗಳು ಮತ್ತು ಮೂವರು ಶ್ರೀಲಂಕಾದವರನ್ನು ಒಳಗೊಂಡಿತ್ತು ಎಂದು ಒಮಾನಿ ಕೇಂದ್ರವು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಒಮಾನ್‌ನ ಡುಕ್ಸ್‌ನ ಬಂದರಿನಿಂದ 25 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಮುಳುಗಿದೆ. ಪ್ರೆಸ್ಟೀಜ್ ಫಾಲ್ಕನ್ ಹೆಸರಿನ ಹಡಗನ್ನು 2007 ರಲ್ಲಿ ನಿರ್ಮಾಣ ಮಾಡಿದ್ದು 117 ಮೀಟರ್ ಉದ್ದವಿದೆ. ನಾಪತ್ತೆಯಾಗಿರುವ ಸಿಬ್ಬಂದಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಭಾರತೀಯ ನೌಕಾಪಡೆಯು ಈ ಪ್ರದೇಶದಲ್ಲಿ ನಿಯೋಜಿಸಲಾದ ಯುದ್ಧನೌಕೆ ಮತ್ತು ವಿಚಕ್ಷಣ ವಿಮಾನವು ಕಾರ್ಯಾಚರಣೆಗೆ ಸಹಾಯ ಮಾಡುತ್ತಿದೆ ಎಂದು ನೌಕಾಪಡೆ ತಿಳಿಸಿದೆ.