ಹೊಸದಿಲ್ಲಿ : ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ಭಾರತೀಯ ಸೇನೆ ನಡೆಸಿದ ಅಪರೇಶನ್ ಸಿಂದೂರವನ್ನು ಅದರ ರಾಜಕೀಯ ಮಿಲಿಟರಿ ಉದ್ದೇಶಗಳನ್ನು ಸಾಧಿಸಿದ ನಂತರ ನಿಲ್ಲಿಸಲಾಗಿದೆ ಇದು ಐತಿಹಾಸಿಕ ಸೇನಾ ಕ್ರಮವಾಗಿದ್ದು, ಭಯೋತ್ಪಾದನೆ ವಿರುದ್ಧದ ನಮ್ಮ ನೀತಿ ಪರಿಣಾಮಕಾರಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಆಪರೇಷನ್ ಸಿಂದೂರ ಕುರಿತ 16 ಗಂಟೆಗಳ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾರ್ಯಾಚರಣೆ ನಿಲ್ಲಿಸುವ ನಿರ್ಧಾರವನ್ನು ಯಾವುದೇ ಒತ್ತಡದಿಂದ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಂತೆಯೇ ಪಾಕಿಸ್ತಾನದ ಯಾವುದೇ ದುಸ್ಸಾಹಸ ಅದರ ಪುನರಾರಂಭಕ್ಕೆ ಕಾರಣ ವಾಗಬಹುದು ಎಂದು ಎಚ್ಚರಿಸಿದರು.
ತ್ವರಿತ- ಪರಿಣಾಮಕಾರಿ ದಾಳಿ :
ಪಹಲ್ದಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂದೂರ ಕುರಿತ ವಿಶೇಷ ಚರ್ಚೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಅವರು, 22 ನಿಮಿಷಗಳ ಕಾರ್ಯಾಚರಣೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದ ಒಂಬತ್ತು ಉದ್ದೇಶಿತ ಭಯೋತ್ಪಾದಕ ತಾಣಗಳಲ್ಲಿ ಏಳನ್ನು ಯಶಸ್ವಿಯಾಗಿ ನಾಶಪಡಿಸಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆದ ಈ ದಾಳಿಯಲ್ಲಿ ನಾಗರಿಕರ ಸಾವು ನೋವು ಸಂಭವಿಸದಂತೆ ಎಚ್ಚರವಹಿಸಲಾಗಿತ್ತು. ಆದರೆ, ಭಯೋತ್ಪಾದಕರಿಗೆ ಗರಿಷ್ಠ ಹಾನಿಯಾಗುವಂತೆ ಮಾಡಲು ಸೇನೆ ಪ್ರತಿಯೊಂದು ಅಂಶವನ್ನೂ ಅಧ್ಯಯನ ಮಾಡಿದೆ ಎಂದು ತಿಳಿಸಿದರು

