ಅಯೋಧ್ಯೆ : ಶತ ಶತಮಾನಗಳ ಹೋರಾಟದ ನಂತರ ರಾಮನಗರಿ ತನ್ನ ಪ್ರಾಚೀನ ವೈಭವ ಮರಳಿ ಪಡೆಯುವತ್ತ ಸಾಗುತ್ತಿದೆ. ಜನ್ಮಭೂಮಿ ರಾಮ ಮಂದಿರದಲ್ಲಿ ಬಾಲ ರೂಪದ ರಾಮಲಲಾನ ನಂತರ, ಇದೀಗ ರಾಜಾ ರಾಮನ ಸಹಿತ ರಾಮ ದರ್ಬಾರ್‌ನ ಪ್ರಾಣಪ್ರತಿಷ್ಠೆ ಪೂರ್ಣಗೊಂಡಿದೆ.
ತ್ರೇತಾಯುಗದಲ್ಲಿ ಮಹರ್ಷಿ ವಶಿಷ್ಠರು ಪ್ರಾರಂಭಿಸಿದ ಸಂಪ್ರದಾಯವನ್ನು ಪುನರುಜ್ಜಿವನಗೊಳಿಸಲು ರಾಜಾ ರಾಮನ ಪ್ರಾಣಪ್ರತಿಷ್ಠೆಯ ಸಮಾರಂಭ ಅದ್ದೂರಿಯಾಗಿ ಮಾಡಲಾಯಿತು. ಗಂಗಾವತರಣ ದಿನವಾದ ಗುರುವಾರ ಅಭಿಜಿತ್ ಮುಹೂರ್ತದಲ್ಲಿ ಜನ್ಮಭೂಮಿ ಸಂಕೀರ್ಣದ ರಾಮ ಮಂದಿರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ರಾಮ ದರ್ಬಾರ್ನನ ಪ್ರಾಣಪ್ರತಿಷ್ಠೆ ಸಂಪನ್ನವಾಯಿತು
ಬರೋಬ್ಬರಿ 496 ವರ್ಷಗಳ ಬಳಿಕ ಕಳೆದ ವರ್ಷ ಜನವರಿ 22ರಂದು ರಾಮಲಲಾನ ಪ್ರಾಣಪ್ರತಿಷ್ಠೆ ನೆರವೇರಿತ್ತು. ಅದಾಗಿ 498 ದಿನಗಳ ಬಳಿಕ ರಾಜಾರಾಮನ ಪ್ರಾಣ ಪ್ರತಿಷ್ಠೆಯಾಗಿದೆ. ರಾಮ ದರ್ಬಾರ್ ಜೊತೆಗೆ ಮಂದಿರದ ಪಾರ್ಕೋಟದಲ್ಲಿ ನಿರ್ಮಿಸಲಾದ ಆರು ಮಂದಿರಗಳಲ್ಲಿ ಶಿವ, ಗಣಪತಿ, ಹನುಮಾನ್, ಸೂರ್ಯ ದೇವ, ದೇವಿ ಭಗವತಿ, ದೇವಿ ಅನ್ನಪೂರ್ಣೆಯ ವಿಗ್ರಹಗಳಿಗೂ ಪ್ರಾಣಪ್ರತಿಷ್ಠೆಯು ಜರುಗಿತು. ಪಾರ್ಕೋಟದ ನೈಋತ್ಯದಲ್ಲಿ ಶೇಷಾವತಾರ (ನಾಗದೇವರು) ಮಂದಿರದಲ್ಲೂ ಪ್ರಾಣಪ್ರತಿಷ್ಠೆ ನಡೆದಿದೆ. ಮಂದಿರದ ಮೊದಲ ಮಹಡಿಯಲ್ಲಿರುವ ರಾಮ ದರ್ಬಾರ್‌ನಲ್ಲಿ ಶ್ರೀರಾಮನು ಸೀತಾದೇವಿ ಮತ್ತು ಸಹೋದರರಾದ ಲಕ್ಷ್ಮಣ, ಭರತ, ಶತ್ರುಘ್ನ ಹಾಗೂ ತನ್ನ ಬಂಟ ಆಂಜನೇಯರೊಂದಿಗೆ ವಿರಾಜಮಾನನಾಗಿದ್ದಾನೆ.

