ಹೊಸದಿಲ್ಲಿ : ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಭಾರತದ ಮೊದಲ ಗಗನಯಾನಿ ಮತ್ತು ವಾಯುಪಡೆ ಕ್ಯಾಪ್ಟನ್ ಶುಭಾಂಶು ಶುಕ್ಲಾ ತವರಿಗೆ ಮರಳಿದ್ದು, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಶುಭಾಂಶು ಸಾಧನೆಗೆ ದೇಶವೇ ಹೆಮ್ಮೆ ಪಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಇಸ್ರೋ ಗಗನಯಾನಿ ಸಮವಸ್ತ್ರ ಧರಿಸಿಕೊಂಡು ಬಂದಿದ್ದ ಶುಕ್ಲಾರನ್ನು ಪ್ರಧಾನಿ ಮೋದಿ ಹಸ್ತಲಾಘವ ಮತ್ತು ಅಪ್ಪುಗೆಯೊಂದಿಗೆ ತಮ್ಮ ಕಚೇರಿಗೆ ಸ್ವಾಗತಿಸಿದರು. ಜೂ.25ರಿಂದ ಜು.15ರವರೆಗೆ ಸ್ಪೇಸ್ ಎಕ್ಸ್ ಮತ್ತು ಆಕ್ಸಿಯಂ ಸ್ಪೇಸ್ ಕಂಪನಿಗಳ ಸಹಯೋಗದಲ್ಲಿ ಆಕ್ಸಿಯಂ-4 ಬಾಹ್ಯಾಕಾಶ ಯೋಜನೆ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ ಎಸ್) ಶುಕ್ಲಾ ಭೇಟಿ ನೀಡಿದ್ದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆಹಿಡಿಯಲಾದ ಭೂಮಿಯ ವಿವಿಧ ಚಿತ್ರಗಳನ್ನು ಪ್ರಧಾನಿ ಮೋದಿಯವರಿಗೆ ಟ್ಯಾಬ್ಲೆಟ್ ಕಂಪ್ಯೂಟರ್ ನಲ್ಲಿ ಶುಕ್ಲಾ ಪ್ರದರ್ಶಿಸಿದ್ದಾರೆ.
ಶುಭಾಂಶು ಶುಕ್ಲಾರೋಂದಿಗೆ ಅತ್ಯುತ್ತಮ ಮಾತುಕತೆ ನಡೆದಿದೆ. ಅಂತರಿಕ್ಷದಲ್ಲಿನ ಅನುಭವ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿ, ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆ ಸೇರಿದಂತೆ ಹಲವು ವಿಷಯಗಳ ಕುರಿತು ನಾವು ಚರ್ಚೆ ನಡೆಸಿದೆವು. ಶುಭಾಂಶು ಸಾಧನೆಗೆ ಭಾರತ ಹೆಮ್ಮೆ ಪಡುತ್ತದೆ.
- ನರೇಂದ್ರ ಮೋದಿ, ಪ್ರಧಾನಿ

