ಡಮಾಸ್ಕಸ್ : ಮಧ್ಯಪ್ರಾಚ್ಯ ಇಸ್ಲಾಮಿಕ್ ದೇಶ ಸಿರಿಯಾದಲ್ಲಿ 14 ವರ್ಷಗಳಿಂದ ನಡೆಯುತ್ತಿದ್ದ ಹಾಗೂ 5 ಲಕ್ಷ ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಅಂತರ್ಯುದ್ದ ತಾರ್ಕಿಕ ಅಂತ್ಯದ ಘಟ್ಟಕ್ಕೆ ತಲುಪಿದ್ದು, ದೇಶದ ಅಧ್ಯಕ್ಷರಾಗಿದ್ದ ಸರ್ವಾಧಿಕಾರಿ ಬಷರ್ ಅಲ್ ಅಸಾದ್ ದೇಶ ಬಿಟ್ಟು ಭಾನುವಾರ ನಸುಕಿನಲ್ಲಿ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದಾರೆ. ಈ ಮೂಲಕ ಅಸಾದ್ ಅವರ 24 ವರ್ಷದ ಆಳ್ವಿಕೆ ಹಾಗೂ ಅವರ ಕುಟುಂಬದ 50 ವರ್ಷದ ಆಳ್ವಿಕೆ ಅಂತ್ಯಗೊಂಡಿದೆ.
ಅಲ್‌ಖೈದಾ ಬೆಂಬಲಿತ ಹಯಾತ್ ತರ್ ಅಲ್-ಶಾಮ್ (ಎಚ್ ಟಿಎಸ್) ಎಂಬ ಉಗ್ರ ಸಂಘಟನೆಯ ನಾಯಕ ಅಬು ಮೊಹಮ್ಮದ್ ಅಲ್-ಗೋಲಾನಿ ಕಳೆದ 2011ರಿಂದ ಅಸಾದ್ ಸರ್ವಾ ಧಿಕಾರದ ವಿರುದ್ಧದ ದಂಗೆಯ ನೇತೃತ್ವ ವಹಿಸಿದ್ದ ಈ ದಂಗೆ ಸುಮಾರು ಒಂದೂವರೆ ದಶಕಗಳ ಬಳಿಕ ಫಲ ನೀಡಿದ್ದು, ರಾಜಧಾನಿ ಡಮಾಸ್ಕಸ್ ಬಂಡುಕೋರರ ವಶಕ್ಕೆ ಬಂದಿದೆ. ಅಧ್ಯಕ್ಷೀಯ ಅರಮನೆಯನ್ನೂ ಬಂಡುಕೋ ರರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ
ದೇಶದ ಹಾಲಿ ಪ್ರಧಾನಿ ಮೊಹಮ್ಮದ್ ಆಲ್-ಜಲಾಲಿ ಅವರನ್ನು ಸದ್ಯದ ಮಟ್ಟಿಗೆ ಅಧಿಕಾರ ಹಸ್ತಾಂತರ ಪೂರ್ಣಗೊಳ್ಳುವ ಪ್ರಕ್ರಿಯೆವರೆಗೆ ಮುಂದುವರಿಯಲು ಉಗ್ರ ನಾಯಕ ಗೋಲಾನಿ ಸೂಚಿಸಿದ್ದಾನೆ ಹಾಗೂ ಅಧಿಕಾರ ಹಸ್ತಾಂತರಕ್ಕೆ ಪ್ರಾಧಿಕಾರ ರಚಿಸಲು ತಾಕೀತು ಮಾಡಿದ್ದಾನೆ. ಇದರ ಬೆನ್ನಲ್ಲೇ ಮಾತನಾಡಿರುವ ಗೋಲಾನಿ, ‘ಬಂಡುಕೋರರಿಗೆ ನಾನು ಅಧಿಕಾರ ಹಸ್ತಾಂತರಿಸಲು ಸಿದ್ಧ ಎಂದಿದ್ದು ಮುಂದೆ ಚುನಾವಣೆ ನಡೆಯಲಿ ಎಂಬ ಮನವಿಯನ್ನೂ ಮಾಡಿದ್ದಾರೆ
ಅರಮನೆ ಲೂಟಿ
ಸಿರಿಯಾ ಅಧ್ಯಕ್ಷ ಬಷರ್ ಆಲ್ ಅಸಾದ್ ದಂಗೆಗೆ ಬೆಚ್ಚಿ ದೇಶ ಬಿಟ್ಟು ಓಡಿ ಹೋದ ಕಾರಣ ಅವರ ಅರಮನೆಗೆ ನುಗ್ಗಿದ ಜನರು, ಅವರ ಮನೆಯಲ್ಲಿನ ಸಿಕ್ಕ ಸಿಕ್ಕ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ತಟ್ಟೆ, ಲೋಟ, ಪ್ಲೇಟ್‌ಗಳು, ಹೂಜಿಗ ಗಳನ್ನೂ ಹೊತ್ತೊಯ್ದಿದ್ದಾರೆ. ಐಷಾರಾಮಿ ಕೋಣೆಗಳಿಗೆ ನುಗ್ಗಿ ಕುರ್ಚಿ, ಹಾಸಿಗೆಯ ಮೇಲೆ ಕುಳಿತು, ಮಲಗಿ ಸಂಭ್ರಮಿಸಿದ್ದಾರೆ. ಬಾಂಗ್ಲಾದೇಶ, ಶ್ರೀಲಂಕಾದಲ್ಲಿ ದಂಗೆಯಾದಾಗಲೂ ಇದೇ ರೀತಿಯ ಚಿತ್ರಣ ಕಂಡುಬಂದಿತ್ತು