ಡಮಾಸ್ಕಸ್ : ಸಿರಿಯಾದಲ್ಲಿ ಅಧ್ಯಕ್ಷ ಬಷರ್‌ಅಲ್ ಅಸಾದ್ ಸರ್ಕಾರ ಪತನ ಹೊಂದಿದ ಒಂದು ದಿನದ ಬಳಿಕವೂ ‘ಬಂಡುಕೋರರ ನೇತೃತ್ವದಲ್ಲಿ ಯಾವುದೇ ಹೊಸ ಸರ್ಕಾರ ಸ್ಥಾಪನೆ ಆಗಿಲ್ಲ. ಪ್ರಧಾನಿ ಮೊಹಮ್ಮದ್ ಘಾಜಿ ಜಲಾಲಿ ಅವರು ಸದ್ಯಕ್ಕೆ ದೇಶದ ಉಸ್ತುವಾರಿ ಹೊತ್ತಿದ್ದು ಅವರ ನೇತೃತ್ವದಲ್ಲೇ ಸರ್ಕಾರದ ಎಲ್ಲ ಕಾರ್ಯಕಲಾಪಗಳು ನಡೆಯುತ್ತಿವೆ.
ಈ ನಡುವೆ ದಂಗೆಯ ನೇತೃತ್ವ ಹೊತ್ತಿದ್ದ ಅಲ್ ಖೈದಾ ಬೆಂಬಲಿತ ಬಂಡುಕೋರ ನಾಯಕ ಅಬು ಮೊಹಮ್ಮದ್ ಅಲ್ ಗೋಲಾನಿ ಆಪ್ತರು ಮಾತನಾಡಿ, ‘ಸಿರಿಯಾದಲ್ಲಿ ಜನಪ್ರತಿನಿಧಿಗಳನ್ನು ಹೊಂದಿದ ಹಾಗೂ ಧಾರ್ಮಿಕ ಸಹಿಷ್ಣು ಸರ್ಕಾರ ರಚನೆ ಆಗಲಿದೆ’ ಎಂದಿದ್ದಾರೆ. ಅಲ್ಲದೆ, ಇತರ ಕೆಲವು ಇಸ್ಲಾಮಿಕ್ ದೇಶಗಳಂತೆ ಮಹಿಳೆಯರ ಉಡುಪಿನ ಮೇಲೆ ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಪ್ರಧಾನಿ ಜಲಾಲಿ ಮಾತನಾಡಿ ಬಂಡುಕೋರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದ್ಯಕ್ಕೆ ಸರ್ಕಾರ ನಡೆಸುತ್ತಿದ್ದೇನೆ. ಸೋಮವಾರ ಸಿರಿಯಾ ಸಂಪೂರ್ಣ ಸಹಜ ಸ್ಥಿತಿಗೆ ಬಂದಿದೆ’ ಎಂದಿದ್ದಾರೆ