ಬೆಂಗಳೂರು: ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಸತತ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸುವ ಕ್ಷಣವನ್ನು ಐತಿಹಾಸಿಕ ಎಂದು ಬಣ್ಣಿಸಿರುವ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು, ಎನ್‌ಡಿಎ ಸರ್ಕಾರಕ್ಕೆ ಹೃದಯಪೂರ್ವಕ ಶುಭಾಶಯ ಕೋರಿದ್ದಾರೆ.
ಈ ಹಿಂದೆಯೂ ಹೇಳಿದಂತೆ ಭಗವಂತನ ವಿಶೇಷ ಕೃಪೆ ತಮ್ಮ ಮೇಲಿದೆ. ಭಗವಂತನ ಕೃಪೆಯೊಂದಿಗೆ ಮುಂದಿನ ದಿನಗಳಲ್ಲೂ ಕಳೆದೊಂದು ದಶಕದಂತೆ ಸಂಪೂರ್ಣ ಸಮರ್ಪಣಾ ಭಾವದೊಂ ದಿಗೆ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೀರೆಂದು ನಂಬಿದ್ದೇನೆ ಎಂದು ಮೋದಿ ಅವರಿಗೆ ಭಾನುವಾರ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಬಹಳ ಇಷ್ಟವಿದ್ದರೂ ದಿಲ್ಲಿವರೆಗೆ ಬರಲು ಆರೋಗ್ಯ ಸಹಕರಿಸದ ಕಾರಣ ಸಾಧ್ಯವಾಗುತ್ತಿಲ್ಲ. ಎನ್‌ಡಿಎಗೆ ನಮ್ಮ ಪಕ್ಷ ಜಾತ್ಯತೀತ ಜನತಾ ದಳದಿಂದ ಸಂಪೂರ್ಣ ಬೆಂಬಲವಿದೆ. ಎನ್‌ಡಿಎ ಸದಸ್ಯನಾಗಿ ಎಲ್ಲರ ಜೊತೆಗೆ, ಎಲ್ಲರ ವಿಕಾಸ ಎಂಬ ತಮ್ಮ ಘೋಷವಾಕ್ಯವನ್ನು ಅನುಷ್ಠಾನಗೊಳಿಸಲು ತಮಗೆ ಸಹಕರಿಸುತ್ತೇನೆ. ನಮ್ಮ ಪಕ್ಷಕ್ಕೆ ಸಚಿವ ಸಂಪುಟ ಸ್ಥಾನ ನೀಡಿರುವುದಕ್ಕೆ ಧನ್ಯವಾದಗಳು. ಸಂಪೂರ್ಣ ಬದ್ಧತೆಯೊಂದಿಗೆ ದೇಶದ ಜನರ ಸೇವೆ ಮಾಡುತ್ತೇವೆ ಎಂದು ಪತ್ರದಲ್ಲಿ ದೇವೇಗೌಡರು ಭರವಸೆ ನೀಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಗಳ ಫಲಿತಾಂಶ ಆಸಕ್ತಿದಾಯಕವಾಗಿದ್ದು, ಭಾರತದ ಪ್ರಜಾಪ್ರಭುತ್ವದ ವಿಶಿಷ್ಟತೆಯನ್ನು ಸಾಬೀತುಪಡಿಸಿದೆ. ನೀವು ನಿಜವಾದ ಪ್ರಜಾಪ್ರಭುತ್ವವಾದಿ ಎಂದು ಸಾಬೀತು ಮಾಡಿದೆ ಎಂದಿದ್ದಾರೆ.