ಚೆನ್ನೈ : ವಿಶ್ವದ ಅತಿ ಕಿರಿಯ ಚೆಸ್ ಚಾಂಪಿಯನ್ ಎನಿಸಿಕೊಂಡಿರುವ ಡಿ.ಗುಕೇಶ್ ಸೋಮವಾರ ಚೆನ್ನೈಗೆ ಆಗಮಿಸಿದ್ದು, ಅದ್ಧೂರಿ ಸ್ವಾಗತ ಲಭಿಸಿತು.
ತಮ್ಮ ಪೋಷಕರ ಜೊತೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ 18 ವರ್ಷದ ಗುಕೇಶ್‌ರನ್ನು ಶಾಲಾ ಮಕ್ಕಳು, ಅಭಿಮಾನಿಗಳು ಗುಕೇಶ್‌ರ ಭಾವಚಿತ್ರವಿರುವ ಕಾರ್ಡ್ ಹಿಡಿದು, ಜೈಕಾರ ಕೂಗಿ ಸ್ವಾಗತಿಸಿದರು. ತಮಿಳುನಾಡು ಕ್ರೀಡಾ ಇಲಾಖೆ ಅಧಿಕಾರಿಗಳು ಹಾಗೂ ಗುಕೇಶ್ ಕಲಿತ ಶಾಲೆಯ ಪದಾಧಿಕಾರಿಗಳು ಬೃಹತ್ ಗಾತ್ರದ ಹೂಹಾರ ಹಾಕಿ ಸನ್ಮಾನ ಮಾಡಿದರು.
ವಿಮಾನ ನಿಲ್ದಾಣದ ಹೊರಗೆ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಗುಕೇಶ್ ರನ್ನು ಸ್ವಾಗತಿಸಿದರು. ಬಳಿಕ, ತಮ್ಮ ಫೋಟೋಗಳನ್ನು ಅಂಟಿಸಿ ವಿಶೇಷವಾಗಿ ತಯಾರಿಸಿದ್ದ ಕಾರಿನಲ್ಲೇ ಗುಕೇಶ್ ತಮ್ಮ ಮನೆಗೆ ತೆರಳಿದರು.
ಇಂದು ಸನ್ಮಾನ :
ಮಂಗಳವಾರ ಚೆನ್ನೈನ ವಲ್ಲಾಜಾಹ್ ರಸ್ತೆಯಲ್ಲಿರುವ ಸಭಾಂಗಣದಲ್ಲಿ ಬೃಹತ್ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ಇದಕ್ಕೂ ಮುನ್ನ ಬೃಹತ್ ಪರೇಡ್ ಮೂಲಕ ಅವರು ಸಭಾಂಗಣಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.