Home » ಹನೂಮಾನ್ ಜನ್ಮೋತ್ಸವ
 

ಹನೂಮಾನ್ ಜನ್ಮೋತ್ಸವ

by Kundapur Xpress
Spread the love

ನಾನು, ನಾನಿಲ್ಲದಿದ್ದರೆ..!? ನನ್ನಿಂದ, ನನ್ನ ಸಂಸಾರ, ನನ್ನ ಕುಟುಂಬ, ನನ್ನ ಸಮಾಜ ಇತ್ಯಾದಿಗಳ ಮಾಯೆ,ಅಹಂನಿಂದ ಕೂಡಿದ ನಮ್ಮ ಮುಂದೆ, ನಾನು ನನ್ನದು ಎಂಬುದೇನೂ ಇಲ್ಲದ ನಿಸ್ವಾರ್ಥಿ ರಾಮಭಕ್ತ ಹನೂಮಂತನ ಜೀವನ ಮಾದರಿಯಾಗುತ್ತದೆ.
ಹನೂಮಾನ್ ಜನ್ಮೋತ್ಸವ ಕೇವಲ ಆಚರಣೆಯಲ್ಲ – ಇದು ಆಧ್ಯಾತ್ಮಿಕ ಚಿಂತನೆ ಮತ್ತು ಆಂತರಿಕ ಶಕ್ತಿಯ ನವೀಕರಣದ ದಿನ. ಭಕ್ತರು ಉಪವಾಸ ಆಚರಿಸುತ್ತಾರೆ, ಹನೂಮಾನ್ ಚಾಲೀಸಾ ಪಠಿಸುತ್ತಾರೆ, ಸುಂದರ ಕಾಂಡದ ಪಠಣ ಮಾಡುತ್ತಾರೆ ಮತ್ತು ಹನೂಮಂತನ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಮತ್ತು ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ, ವಿಶೇಷವಾಗಿ ಬೂಂದಿ ಮತ್ತು ಬೆಲ್ಲ.
ಹನೂಮಂತ ಅಷ್ಟ ಚಿರಂಜೀವಿಗಳಲ್ಲಿ ಒಬ್ಬನು. ಹಿಂದೂ ಧರ್ಮಗ್ರಂಥಗಳ ಪ್ರಕಾರ ಹನೂಮಂತ ಇನ್ನೂ ಭೂಮಿಯ ಮೇಲೆ ಜೀವಂತವಾಗಿದ್ದಾನೆ. ಅವನು ಅಮರ.. ಅದಕ್ಕಾಗೇ ಹನೂಮಾನ್ ಜಯಂತಿ ಎನ್ನದೆ ಜನ್ಮೋತ್ಸವ ಎನ್ನಲಾಗುತ್ತದೆ.

ರಾವಣಾಸುರ ಇಳಿರಾತ್ರಿಯಲ್ಲಿ ಅಶೋಕವನಕ್ಕೆ ಬೊಂಬಾಳ ದೀವಿಗೆ ಹಿಡಿದು, ಸರ್ವಾಲಂಕಾರಭೂಷಿತನಾಗಿ ಬಂದು, ಸೀತೆಯನ್ನು ತನ್ನವಳನ್ನಾಗಿಸುವ ಪ್ರಯತ್ನ ನಡೆಸುತ್ತಿರುತ್ತಾನೆ. ಅಲ್ಲೇ ಮರದ ಕೊಂಬೆಯೊಂದರಲ್ಲಿ ಅಣುರೂಪಿಯಾಗಿ ಕುಳಿತ ಹನುಮ, ಕೋಪದಿಂದ ಅವುಡುಗಚ್ಚುತ್ತಾ… ಯಾರಿಂದಾದರೂ ಕತ್ತಿ ಎಳೆದು ಅವನ ಶಿರಚ್ಛೇದನ ಮಾಡುವ ಭರದಲ್ಲಿದ್ದಾಗ, ಏನಾಯ್ತು !? ಮಂಡೋದರಿ ರಾವಣನ ಕೈಹಿಡಿದು ನಿಲ್ಲಿಸುತ್ತಾಳೆ. ಇದು ಸಾಮಾನ್ಯ ಎಲ್ಲರಿಗೂ ತಿಳಿದ ವಿಚಾರ. ಆದರೆ ಆಗ ಹನುಮನ ಒಳಮನಸ್ಸಿಗೆ ಬಂದ ಚಿಂತನೆ ಏನು ? “ಅರೇ…ನಾನು ಇಲ್ಲಿ ಇಲ್ಲದಿದ್ದರೆ ಸೀತಮ್ಮನನ್ನು ಕಾಪಾಡುವವರು ಯಾರು ಎಂದುಕೊಂಡಿದ್ದೆ. ಬಹುಶಃ ಇದು ನನ್ನ ಭ್ರಮೆ. ಭಗವಂತನ ಇಚ್ಛೆ ಹೇಗುಂಟು ? ಅದನ್ನು ಆತ ಯಾರಿಂದಾದರೂ ಮಾಡಿಸುತ್ತಾನೆ. ಯಾರಿಂದಲಾದರೂ ಅದು ಆಗಿಯೇ ಆಗುತ್ತದೆ. “ನಾನು ಎಂಬುದು ನನ್ನ ಅಹಂನ ಇನ್ನೊಂದು ರೂಪ”. ಇದು ಹನುಮನ ಚಿಂತನೆ.

ಮುಂದೆ, ತ್ರಿಜಟೆ ಸೀತೆಯಲ್ಲಿ, ಅವಳನ್ನು ಸಮಾಧಾನ ಪಡಿಸುತ್ತಾ…. “ಕಪಿಯೊಂದು ಲಂಕೆಯನ್ನು ಸುಡುವುದನ್ನು ನಾ ಕನಸಲ್ಲಿ ಕಂಡೆ” ಎನ್ನುತ್ತಾಳೆ. ಅರೆಅರೇ…! ಇದೇನು ರಾಮನು ನನಗೆ ಹೀಗೆ ಹೇಳಿಲ್ಲವಲ್ಲ , ನಾನು ಇದನ್ನು ಮಾಡಬಲ್ಲೆನೇ..?! ಎಂದು ಯೋಚಿಸುತ್ತಾನೆ ಹನುಮ.
ಮುಂದೆ ಏನಾಯ್ತು ನೋಡಿ. ವಿಭೀಷಣನ ನೀತಿಯಿಂದಾಗಿ ರಾವಣನು ಹನೂಮಂತನ ಬಾಲಕ್ಕೆ ಬೆಂಕಿ ಕೊಡುವ ಹುಚ್ಚು ಸಾಹಸವನ್ನು ಕೈಗೊಳ್ಳುತ್ತಾನೆ. “ಓಹೋ, ಇದು ಭಗವಂತ ಆ ತ್ರಿಜಟೆಯ ಬಾಯಿಯಿಂದ ಹೇಳಿಸಿದ ಮಾತೇ…!?” ಎಂದು ಆಶ್ಚರ್ಯಗೊಳ್ಳುತ್ತಾನೆ ಹನುಮ.
ಮುಂದೆ ಲಂಕಾದಹನವಾಯಿತು, ರಾವಣನಿಗೆ ರಾಮನ ಸೇನೆಯ ಪರಾಕ್ರಮದ ಅರಿವಾಯಿತು. ಸೀತೆಗೆ ಹನುಮನಿಂದ ಅಭಯ ದೊರಕಿತು. ಜೊತೆಗೆ ಚೂಡಾಮಣಿಯು ದೊರಕಿತು. ಕಥೆ ಎಲ್ಲರಿಗೂ ತಿಳಿದಿರುವಂಥದ್ದೆ. ಆದರೆ, ಇಲ್ಲಿರುವ ಹನುಮನ ಮನೋಭಾವ, ಕರ್ಮಫಲತ್ಯಾಗ, ಅಹಂರಹಿತ ಮನೋಧರ್ಮ ಎಂದೆಂದೂ ನಮ್ಮಲ್ಲಿ ಇರಬೇಕು ಎಂದಲ್ಲವೇ ನಾವು ಯೋಚಿಸುವುದು…? ಹೀಗೆ ಹನುಮನು ಜ್ಞಾನದಲ್ಲೂ ಪರಾಕ್ರಮದಲ್ಲೂ ದೈವಭಕ್ತಿಯಲ್ಲೂ ಪರಮ ಶ್ರೇಷ್ಠನಾಗಿದ್ದರೂ ಎಲ್ಲಿಯೂ ಇದು ನಾನು ಮಾಡಿದ್ದು, ನಾನು ಇಲ್ಲದಿದ್ದರೆ ಇದು ಹೀಗೆ ಆಗುತ್ತಿರಲಿಲ್ಲ ಎಂದು, ಎಂದೆಂದಿಗೂ ತಿಳಿದುಕೊಂಡವನಲ್ಲ ಎಂಬುದೇ ಅವನ ಶ್ರೇಷ್ಠ ವ್ಯಕ್ತಿತ್ವದ ಮೂಲಗುಣ.

ನಾವೆಲ್ಲ ಇಂದು ಹನುಮಜಯಂತಿಯ ಸಂದರ್ಭದಲ್ಲಿ, ಆ ಪರಮಾತ್ಮನಲ್ಲಿ ಬೇಡಿಕೊಳ್ಳಬೇಕಾದ ವಿಚಾರ: “ಹನುಮಾ..! ನಿನ್ನಂತೆ ನನ್ನ ಹೃದಯದಲ್ಲಿ ಭಕ್ತಿ ನೆಲೆನಿಲ್ಲಲಿ. ಅಲ್ಲಿ ಅಹಂಗೆ ಅವಕಾಶವೇ ಇಲ್ಲದಂತಾಗಲಿ”. ಅಲ್ಲವೇ ? ಹಾಗಲ್ಲವೇ ? ಅದಕ್ಕೆ ರಾಮ ತನ್ನ ಮುಂದಿನ ಅವತಾರವಾದ ಕೃಷ್ಣಾವತಾರದಲ್ಲಿ ಗರುಡ, ಸತ್ಯಭಾಮ, ಭೀಮ, ಅರ್ಜುನ ಇವರೆಲ್ಲರ ಗರ್ವಭಂಗಕ್ಕೆ ಈತನನ್ನೇ ಬಳಸಿಕೊಂಡದ್ದು. ನಮ್ಮ ಪುಣ್ಯತಮ ದೇಶದಲ್ಲಿ ಗಲ್ಲಿಗೊಂದು ಹಳ್ಳಿಗೊಂದು ಮೂಲೆಮೂಲೆಗೆ, ಸಂದುಗೊಂದಿಗೆ ಹನುಮನ ಗುಡಿಗಳಿವೆ. ಆದರೆ, ರಾಮನ ಮಂದಿರ ಅಷ್ಟೊಂದು ಇಲ್ಲ. ಏಕೆಂದರೆ, “ಎಲ್ಲಿ ಹನುಮನೋ ಅಲ್ಲಿ ರಾಮ”. ಇಂತಹ ಹನುಮ ತನ್ನ ಬಾಳಿನ ಪ್ರತಿಯೊಂದು ಆಯಾಮದಲ್ಲೂ ತನಗರಿವಿಲ್ಲದೆ, ಆದರ್ಶ ವ್ಯಕ್ತಿತ್ವವನ್ನು ಪ್ರಕಟಿಸುತ್ತಾ ಬೆಳೆಯುತ್ತಾನೆ. ಜ್ಞಾನಿ, ವಾಕ್ಪಟುತ್ವದೊಂದಿಗೆ ಮಿತ ಭಾಷಿತ್ವ, ಮುಂದಾಲೋಚನೆ, ವ್ಯಾಕರಣಶಾಸ್ತ್ರವನ್ನು ಬಲ್ಲವ, ಭಕ್ತಾಗ್ರೇಸರ, ಚಿರಂಜೀವಿ, ಬ್ರಹ್ಮಚಾರಿ, ರಾಮದಾಸನು ಎಂದೆಂದಿಗೂ ಅಮರನು, ಅಭೇದ್ಯನು, ಅಜೇಯನು.

ಪ್ರಸ್ತುತ ನಮ್ಮ ಸಮಾಜದ ಸಮಸ್ಯೆಗಳಿಗೆಲ್ಲ ಹನೂಮಂತನ ನಡೆಯು ಉತ್ತರವಾಗುತ್ತದೆ. ಏಕೆಂದರೆ ನಮ್ಮ ಶಕ್ತಿಯ ಅರಿವು ನಮಗೆ ಇಲ್ಲ. ಅದರ ಅರಿವಿಲ್ಲದೆ ಬಳಲುತ್ತಿರುವ ಈ ಯುವಶಕ್ತಿಗೆ ಜಾಂಬವನಂತಹ ಹಿರಿತಲೆಗಳ ಮಾರ್ಗದರ್ಶನದ ಅಗತ್ಯವಿದೆ. ಕೇಳಿಸಿಕೊಂಡು ಅಂತೆಯೇ ನಡೆಯುವ ಮಾನಸಿಕ ಪಕ್ವತೆ, ಯುವಜನರ ಅವಶ್ಯ ಬೆಳವಣಿಗೆಯೂ ಆಗಿದೆ.
ಭಕ್ತಿಯೇ ಹನೂಮಂತನ ಶಕ್ತಿ. ಆಂತರ್ಯದಲ್ಲಿ ಉದಿಸಿದ ಈ ರಾಮಭಕ್ತಿ ಹೃದಯಗಹ್ವರದಲ್ಲಿ ಸದಾ ಮಾರ್ದನಿಸಿಕೊಳ್ಳುತ್ತಿರುವಾಗ, ಅಲ್ಲೇ ರಾಮ ನೆಲೆ ನಿಲ್ಲದಿರಲು ಹೇಗೆ ಸಾಧ್ಯ ಹೇಳಿ..!? ಈ ಸುಂದರ ಹನುಮನನ್ನು ಧ್ಯಾನಿಸುತ್ತಾ ಅವನು ತೋರಿದ ರಾಜಪಥದಲ್ಲಿ ಸಾಗೋಣ.

ಜಯ ಹನುಮಾನ ಜ್ಞಾನ ಗುಣಸಾಗರ
ಜಯ ಕಪೀಶ ತಿಹು ಲೋಕ ಉಜಾಗರ
ರಾಮದೂತ ಅತುಲಿತ ಬಲ ಧಾಮಾ
ಅಂಜನಿಪುತ್ರ ಪವನ ಸುತನಾಮಾ
*ಮನೋಜವಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ
ವಾತಾತ್ಮಜಂ ವಾನರ ಯೂಥ ಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ*

ಶ್ರೀರಾಮನ ಆಶೀರ್ವಾದವನ್ನು ಬೇಡುತ್ತಾ…. ಈ ರಾಮದಾಸನ ಹೃನ್ಮಂದಿರದಲ್ಲಿ ನೆಲೆನಿಂತ ರಾಮನಾಮ ನಮ್ಮಲ್ಲೂ ನಲಿದಾಡಲಿ.

“ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ
ರಾಮಾ.. ರಾಮಾ.. ರಾಮಾ.. ರಾಮಾ”
ಜಯ್ ಹನೂಮಾನ್
ಜಯ್ ಶ್ರೀರಾಮ್
ಶ್ರೀ ಹನುಮಂತನ ಆಶೀರ್ವಾದ ಸದಾ ನಿಮ್ಮೊಂದಿಗಿರಲಿ.
ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ.
ಸ್ವರ್ಣ ಕುಂದಾಪುರ
ಆಪ್ತ ಸಮಾಲೋಚಕರು

 

Related Articles

error: Content is protected !!