ಕರ್ನಾಟಕದ ಕರಾವಳಿ ಭಾಗದ ಸೊಬಗಿನಲ್ಲಿ ನೆಲೆಸಿರುವ ಶ್ರೀ ಕುಂದೇಶ್ವರ ದೇವಸ್ಥಾನ ಕುಂದಾಪುರ ಪಟ್ಟಣದ ಹೃದಯಭಾಗದಲ್ಲಿದ್ದು ನಿಮಗೆಲ್ಲರಿಗೂ ಭಕ್ತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಅದ್ಭುತ ಸಂಗಮವಾಗಿ ಕಾಣಸಿಗುತ್ತದೆ. ಪಂಚಗಂಗಾವಳಿ ನದಿಯ ತೀರದ ಸಮೀಪದಲ್ಲಿರುವ ಈ ಪವಿತ್ರ ಕ್ಷೇತ್ರವು ಶತಮಾನಗಳಿಂದ ಭಕ್ತರ ಆರಾಧನೆಯ ಕೇಂದ್ರವಾಗಿದ್ದು, ಇಂದಿಗೂ ಅದೇ ದೈವಿಕ ಸ್ಪಂದನವನ್ನು ಹೊತ್ತಿದೆ. ನಗರ ಮಧ್ಯದಲ್ಲಿದ್ದರೂ ಇಲ್ಲಿ ಪ್ರವೇಶಿಸಿದ ಕ್ಷಣದಿಂದಲೇ ಮನಸ್ಸಿನಲ್ಲಿ ಶಾಂತವಾತಾವರಣ , ಆಧ್ಯಾತ್ಮ ಮನೋಭಾವ ನಿಮ್ಮನ್ನು ಆವರಿಸುತ್ತದೆ.
ಕುಂದೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಪೌರಾಣಿಕ ಹಿನ್ನೆಲೆ ಅತ್ಯಂತ ಅಧ್ಬುತವಾಗಿದೆ. ಪುರಾಣಗಳ ಪ್ರಕಾರ ಪರಶುರಾಮನು ಸಮುದ್ರವನ್ನು ಹಿಂದಕ್ಕೆ ಸರಿಸಿ ಕರಾವಳಿ ಕರ್ನಾಟಕವನ್ನು ಸೃಷ್ಟಿಸಿದ ನಂತರ ಈ ಪ್ರದೇಶವನ್ನು ಪವಿತ್ರಗೊಳಿಸಲು ಶಿವನನ್ನು ಇಲ್ಲಿ ಪ್ರತಿಷ್ಠಾಪಿಸಿದನೆಂದು ಹೇಳಲಾಗುತ್ತದೆ. ಮತ್ತೊಂದು ಪ್ರಸಿದ್ಧ ನಂಬಿಕೆಯ ಪ್ರಕಾರ ಇಲ್ಲಿ ಇರುವ ಶಿವಲಿಂಗವು ಸ್ವಯಂಭೂವಾಗಿದ್ದು, ಅದು ಭೂಮಿಯಿಂದಲೇ ಸ್ವತಃ ಹೊರಬಂದ ದೈವಿಕ ಚಿಹ್ನೆಯಾಗಿದೆ ಎಂದು ಹೇಳಲಾಗುತ್ತದೆ. ಕೆಲವು ಸ್ಥಳೀಯ ಕಥೆಗಳ ಪ್ರಕಾರ ದೇವತೆಗಳು ಮತ್ತು ಋಷಿಗಳು ಇಲ್ಲಿ ತಪಸ್ಸು ಮಾಡಿ ಶಿವನ ಅನುಗ್ರಹವನ್ನು ಪಡೆದಿದ್ದಾರೆ. ಈ ಪೌರಾಣಿಕ ಕಥೆಗಳು ದೇವಸ್ಥಾನದ ದೈವಿಕತೆಯನ್ನು ಮತ್ತಷ್ಟು ಗಾಢಗೊಳಿಸುತ್ತದೆ.
ಈ ದೇವಸ್ಥಾನವು ಸುಮಾರು ಸಾವಿರ ವರ್ಷಗಳ ಐತಿಹಾಸಿಕತೆಯನ್ನು ಹೊಂದಿದೆ. ಅಲೂಪ ವಂಶದ ರಾಜನಾದ ಕುಂದವರ್ಮನು ೯ ರಿಂದ ೧೦ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದನೆಂಬ ನಂಬಿಕೆ ಇದೆ. “ಕುಂದಾಪುರ” ಎಂಬ ಪಟ್ಟಣದ ಹೆಸರು ಕೂಡ ಕುಂದೇಶ್ವರನಿಂದಲೇ ಬಂದಿತೆಂದು ಸ್ಥಳೀಯರು ನಂಬುತ್ತಾರೆ. ಪ್ರಾಚೀನ ಕಾಲದಲ್ಲಿ ಈ ದೇವಸ್ಥಾನವು ಕರಾವಳಿ ಭಾಗದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದ್ದು, ಅನೇಕ ರಾಜವಂಶಗಳು ಮತ್ತು ಸ್ಥಳೀಯ ಆಡಳಿತಗಾರರು ಇದರ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಕಾಲಕ್ರಮೇಣ ಅನೇಕ ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ, ದೇವಾಲಯದ ಮೂಲ ಆಧ್ಯಾತ್ಮಿಕತೆ ಮತ್ತು ಪವಿತ್ರತೆ ಎಂದಿಗೂ ಕುಗ್ಗಿಲ್ಲ.
ದೇವಾಲಯದ ಪ್ರಧಾನ ದೇವತೆ ಶಿವನು ಇಲ್ಲಿ ಶ್ರೀ ಕುಂದೇಶ್ವರ ಸ್ವಾಮಿ ರೂಪದಲ್ಲಿ ಪೂಜಿಸಲ್ಪಡುತ್ತಾನೆ. ಗರ್ಭಗುಡಿಯಲ್ಲಿ ಇರುವ ಶಿವಲಿಂಗವು ಸುಮಾರು ನಾಲ್ಕು ಅಡಿ ಎತ್ತರದ ಕಪ್ಪು ಕಲ್ಲಿನಿಂದ ನಿರ್ಮಿತವಾಗಿದ್ದು,ರುದ್ರಾಕ್ಷಿ ಶಿಲೆಯಿಂದ ಮಾಡಲಾಗಿದೆ.ಅದರ ಒಂದು ಭಾಗ ಭೂಮಿಯೊಳಗೆ ನೆಲಸಿರುವುದು ಅತ್ಯಂತ ವಿಶಿಷ್ಟವಾಗಿದೆ. ದೇವಾಲಯದ ಸುತ್ತಲಿನ ವಾತಾವರಣವು ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಗೆ ಸೂಕ್ತವಾಗಿದೆ.
ಕುಂದೇಶ್ವರ ದೇವಸ್ಥಾನದ ವಾಸ್ತುಶಿಲ್ಪವು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಶೈಲಿಯಲ್ಲಿದ್ದು, ದ್ರಾವಿಡ ಶೈಲಿಯ ಪ್ರಭಾವವನ್ನು ಸ್ಪಷ್ಟವಾಗಿ ಕಾಣಬಹುದು. ಗರ್ಭಗುಡಿ, ನವರಂಗ ಮಂಟಪ ಮತ್ತು ಪ್ರದಕ್ಷಿಣಾ ಪಥವು ದೇವಾಲಯದ ಪ್ರಮುಖ ಭಾಗಗಳಾಗಿವೆ. ದೇವಾಲಯದ ವಿನ್ಯಾಸ ಸರಳವಾಗಿದ್ದರೂ ಅದರಲ್ಲಿ ಅಡಕವಾಗಿರುವ ಭಕ್ತಿ ಮತ್ತು ಸೌಂದರ್ಯ ಭಕ್ತರನ್ನು ಆಕರ್ಷಿಸುತ್ತದೆ. ಗಣೇಶ, ಪಾರ್ವತಿ, ಅಯ್ಯಪ್ಪ ಮತ್ತು ನಾಗದೇವರ ಸನ್ನಿಧಿಗಳು ಕೂಡ ದೇವಾಲಯದ ಆಧ್ಯಾತ್ಮಿಕ ವೈಭವವನ್ನು ಹೆಚ್ಚಿಸುತ್ತದೆ
ಕುಂದೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವೂ ಇದರ ಮಹತ್ವವನ್ನು ಹೆಚ್ಚಿಸುತ್ತದೆ. ಪಂಚಗಂಗಾವಳಿ ನದಿಯ ಸಮೀಪ ಮತ್ತು ಸಮುದ್ರದ ಹತ್ತಿರ ಇರುವುದರಿಂದ ಇಲ್ಲಿ ಸದಾ ತಂಪಾದ ಗಾಳಿ ಬೀಸುತ್ತಿದ್ದು, ಭಕ್ತರಿಗೆ ವಿಶ್ರಾಂತಿ ಮತ್ತು ಶಾಂತಿಯ ಅನುಭವ ನೀಡುತ್ತದೆ. ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಮತ್ತು ಸಂಜೆ ಸೂರ್ಯಾಸ್ತದ ಹೊತ್ತಿನಲ್ಲಿ ದೇವಸ್ಥಾನದ ವಾತಾವರಣವು ಅತ್ಯಂತ ಆಧ್ಯಾತ್ಮಿಕ ಮತ್ತು ಮನಮೋಹಕವಾಗಿರುತ್ತದೆ.
ಈ ದೇವಸ್ಥಾನದಲ್ಲಿ ಆಚರಿಸಲಾಗುವ ಹಬ್ಬಗಳು ಮತ್ತು ಉತ್ಸವಗಳು ಭಕ್ತರನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಮಹಾಶಿವರಾತ್ರಿ ಇಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬವಾಗಿದ್ದು, ಈ ಸಂದರ್ಭದಲ್ಲಿ ವಿಶೇಷ ಪೂಜೆಗಳು, ಜಾಗರಣೆ ಮತ್ತು ಭಜನೆಗಳು ನಡೆಯುತ್ತದೆ. ಕಾರ್ತಿಕ ಪೂರ್ಣಿಮೆ, ಯುಗಾದಿ ಮತ್ತು ಲಕ್ಷದೀಪೋತ್ಸವವೂ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ವಿಶೇಷವಾಗಿ ಕಾರ್ತಿಕ ಮಾಸದ ಕುಂದೇಶ್ವರ ದೀಪೋತ್ಸವವು ದೇವಸ್ಥಾನದ ಪ್ರಮುಖ ಉತ್ಸವವಾಗಿದ್ದು, ಸಾವಿರಾರು ದೀಪಗಳಿಂದ ದೇವಾಲಯ ಪ್ರಕಾಶಮಾನವಾಗುವ ದೃಶ್ಯ ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದ ನೆನಪು ಮೂಡಿಸುತ್ತದೆ. ಈ ಸಂದರ್ಭದಲ್ಲಿ ನೃತ್ಯ, ಸಂಗೀತ ಮತ್ತು ನಾಟಕಗಳ ಮೂಲಕ ಶಿವನ ಮಹಿಮೆ ಪ್ರದರ್ಶಿಸಲಾಗುತ್ತದೆ.ಮತ್ತು ಊರ -ಪರ ಊರ ಮಂದಿಯೆಲ್ಲಾ ಈ ಸಂಭ್ರಮಕ್ಕೆ ಪಾಲುದಾರರಾಗುತ್ತಾರೆ.
ಭಕ್ತರ ನಂಬಿಕೆ ಪ್ರಕಾರ ಕುಂದೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆ ಮಾಡಿದರೆ ಜೀವನದ ಹಲವು ಸಂಕಷ್ಟಗಳು ನಿವಾರಣೆಯಾಗುತ್ತದೆ. ವಿವಾಹದಲ್ಲಿ ವಿಳಂಬವಾಗಿರುವವರು ಇಲ್ಲಿ ಪ್ರಾರ್ಥನೆ ಮಾಡಿದರೆ ಉತ್ತಮ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ. ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ,ಮನಸ್ಸಿಗೆ ಶಾಂತಿ ದೊರೆಯುತ್ತದೆ ಮತ್ತು ಕುಟುಂಬದಲ್ಲಿ ಸಮೃದ್ಧಿ ವೃದ್ಧಿಸುತ್ತದೆ ಎಂದು ಭಕ್ತರು ನಂಬುತ್ತಾರೆ.
ವಿಶೇಷವಾಗಿ ಸೋಮವಾರದಂದು ಉಪವಾಸವಿಟ್ಟು ಶಿವಲಿಂಗಕ್ಕೆ ಹಾಲು ಅರ್ಪಿಸುವುದು ಮಹತ್ವದ ಆಚರಣೆಯಾಗಿದೆ. ಶ್ರಾವಣ ಮಾಸದಲ್ಲಿ ಹದಿನಾರು ಸೋಮವಾರಗಳನ್ನು ಆಚರಿಸುವುದು ಉತ್ತಮ ಜೀವನ ಸಂಗಾತಿಗೆ ಮಂಗಳಕರವೆಂದು ನಂಬಲಾಗಿದೆ.ಇಲ್ಲಿ ಸಮಾರಂಭಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಅತ್ಯಂತ ಪವಿತ್ರವೆಂದು ತಮ್ಮ ಮನೆಯ ದೇವತಾಕಾರ್ಯವನ್ನು ಇಲ್ಲಿ ನಡೆಸುತ್ತಾರೆ.
ಶ್ರೀ ಕುಂದೇಶ್ವರ ದೇವಸ್ಥಾನ ಭಕ್ತಿ, ಪರಂಪರೆ ಮತ್ತು ಪ್ರಕೃತಿಯ ಸುಂದರ ಸಂಯೋಜನೆಯಾಗಿದೆ.ಪೌರಾಣಿಕ ಮಹತ್ವ, ಐತಿಹಾಸಿಕ ವೈಭವ ಮತ್ತು ನೈಸರ್ಗಿಕ ಶಾಂತತೆಯನ್ನು ಒಟ್ಟುಗೂಡಿಸಿಕೊಂಡಿರುವ ಈ ದೇವಾಲಯವು ಕರಾವಳಿ ಕರ್ನಾಟಕದ ಆಧ್ಯಾತ್ಮಿಕ ಗುರುತಾಗಿ ಸದಾ ಕಂಗೊಳಿಸುತ್ತಿದ್ದು, ಭಕ್ತರ ಜೀವನದಲ್ಲಿ ನಂಬಿಕೆ ಮತ್ತು ನೆಮ್ಮದಿಯ ಬೆಳಕಾಗಿ ಉಳಿದಿದೆ.
ಅರ್ಚನಾ.ರಾಮಕೃಷ್ಣ

