Home » ನಾಲಿಗೆ :ಈ ಶಬ್ದದ ಬಗ್ಗೆ ಬರೆಯಲು ಶುರು ಮಾಡಿದರೆ ಪುಟಗಟ್ಟಲೆ ಬರೆಯಬಹುದು
 

ನಾಲಿಗೆ :ಈ ಶಬ್ದದ ಬಗ್ಗೆ ಬರೆಯಲು ಶುರು ಮಾಡಿದರೆ ಪುಟಗಟ್ಟಲೆ ಬರೆಯಬಹುದು

by Kundapur Xpress
Spread the love

ಮನುಷ್ಯನ ಇಡೀ ದೇಹದಲ್ಲಿ ಈ ನಾಲಿಗೆ ಎಂಬ ಅಂಗ ತುಂಬಾ ಮಹತ್ವದ್ದಾಗಿದೆ. ಈ ನಾಲಿಗೆಯನ್ನು ಉತ್ತಮ ಕೆಲಸಕ್ಕಾಗಿ ಅಥವಾ ಕೆಟ್ಟ ಕೆಲಸಕ್ಕಾಗಿ ಬಳಸಬಹುದು. ದಾಸರು ತಮ್ಮ ದಾಸ ಸಾಹಿತ್ಯದಲ್ಲಿ ನಾಲಿಗೆಯನ್ನು ಬಹಳ ಸುಂದರವಾಗಿ ಈ ರೀತಿಯಾಗಿ ವರ್ಣಿಸಿದ್ದಾರೆ
ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ. ಸಿಹಿಯಾದ ಮಾತುಗಳಿಂದ ಇನ್ನೊಬ್ಬರನ್ನು ನಂಬಿಸಿ ನಂತರ ಕುತ್ತಿಗೆಯನ್ನು ಹಿಸುಕುವುದು ಕೂಡ ಇದೇ ನಾಲಿಗೆಯ ಕೆಲಸ . ನಾಲಿಗೆಯಲ್ಲಿ ನಾವು ಸ್ವರ್ಗವನ್ನು ಹಾಗೂ ನರಕವನ್ನು ಕೂಡ ಸೃಷ್ಟಿ ಮಾಡಬಹುದು . ನಾಲಿಗೆಗೆ ಕತ್ತಿಯಷ್ಟೇ ತೀಕ್ಷ್ಣವಾದ ಹರಿತವಿದೆ. ಭಕ್ತಿಯಿಂದ ದೇವರನ್ನು ಭಜಿಸಿದರೆ ಅಲ್ಲಿ ನಾಲಿಗೆ ಭಕ್ತಿಯ ಸುಧೆಯನ್ನೇ ಹರಿಸಬಹುದು. ಮಾತಿನಿಂದ ಯಾರನ್ನು ಬೇಕಾದರೂ ಮರಳು ಮಾಡುವಂತಹ ಶಕ್ತಿ ನಾಲಿಗೆಗೆ ಇದೆ . ನಮ್ಮ ಎಲ್ಲರ ಸಮಸ್ಯೆಗಳಿಗೂ ಮೂಲ ಕಾರಣ ಮಾತು ಅಂದರೆ ನಾಲಿಗೆ .ಸ್ವರ್ಗ ನರಕ ಎಲ್ಲಾ …ಮೇಲಿಲ್ಲ ಕೇಳೋ ಜನಕ
ಇಲ್ಲೇ ಕಾಣಬೇಕು…ಉಸಿರಿರೋ ಕೊನೆತನಕ ಈ ಅದ್ಭುತ ಸಾಲುಗಳನ್ನು
ಸೃಷ್ಟಿ ಮಾಡುವುದೇ ನಾಲಿಗೆ ಎಂಬ ಅದ್ಭುತ ಶಕ್ತಿ . ಮಾತನಾಡದಿದ್ದರೆ ಅದು ಬಂಗಾರ . ಮಾತು ಬಂದರೆ ಅದು ಬೆಳ್ಳಿ
ಹಿರಿಯರು ಮಾಡಿದಂತಹ ಅದ್ಭುತ ಎರಡು ಸಾಲುಗಳು . ನಾಲಿಗೆಯಿಂದ ಹೊರಬಂದ ಮಾತುಗಳಿಂದ ಆದಂತಹ ಅನೇಕ ದುರಂತಗಳನ್ನು ನಾವು ಪುರಾಣಗಳಲ್ಲಿ ಕಂಡಿದ್ದೇವೆ . ದೇವರ ನಾಮ ಮತ್ತು ಭಕ್ತಿ ಭಾವ ನಾಲಿಗೆಗೆ ಯಾವಾಗಲೂ ಶ್ರೇಷ್ಠ . ನಾಲಿಗೆಯಿಂದ ಓಂಕಾರ ಸೃಷ್ಟಿಸಬಹುದು. ಸಂಗೀತ ಸೃಷ್ಟಿಸಬಹುದು. ಕುರುಕ್ಷೇತ್ರವನ್ನು ಸೃಷ್ಟಿಸಬಹುದು. ನಾಲಿಗೆ ಎಂಬ ಅದ್ಭುತ ಅಂಗವನ್ನು ದೇವರು ನಮಗೆ ಕೊಟ್ಟಿದ್ದಾನೆ . ಅಪಘಾತವಾಗದಂತೆ ವಾಹನವನ್ನು ಚಲಾಯಿಸಿದಂತೆ ನಾಲಿಗೆಯನ್ನು ಕೂಡ ಅದೇ ರೀತಿಯಾಗಿ ಭಕ್ತಿಯ ಒಳ್ಳೆಯ ವಿಚಾರಧಾರೆಗಳಿಗೆ ನಾವು ಉಪಯೋಗಿಸಬೇಕಿದೆ . ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು
ಎಂಬ ಗಾದೆಯ ಮಾತಿನಂತೆ ನಾಲಿಗೆ ಉಪಯೋಗ ಪರೋಪಕಾರ ಮತ್ತು ಶ್ರೇಷ್ಠತೆಗೆಗಾಗಿ ಉಪಯೋಗಿಸಬೇಕು . ಅನೇಕರು ಹೇಳುವುದು ಉಂಟು ಆತನ ಮಾತೆ ಆತನ ಬಂಡವಾಳ ಎಂದು . ಅಮೃತವು ಕೂಡ ಅತಿಯಾದರೆ ವಿಷ . ಅದೇ ರೀತಿ
ನಾಲಿಗೆಯಿಂದ ಹೊರಬಂದ ಅತಿಯಾದ ಮಾತುಗಳು ಕೂಡ ವಿಷದ ರೂಪವನ್ನು ಪಡೆದುಕೊಳ್ಳುವುದು ಸಾಮಾನ್ಯ . ಹೀಗೆ ಬರೆಯುತ್ತಾ ಹೋದರೆ ನಾಲಿಗೆ ಬಗ್ಗೆ ಒಂದು ಗ್ರಂಥವನ್ನು ಬರೆದು ಬಿಡಬಹುದು. ಮತ್ತೆ ಮನುಜನಿಗೆ ನೆನಪಿಸಬೇಕಾಗಿದೆ ಅದೇ ದಾಸರ ಸಾಹಿತ್ಯ
ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ..

ಪ್ರದೀಪ್‌ ಕುಮಾರ್‌,ಕೋಮುಂಜೆ

 

Related Articles

error: Content is protected !!