Home » “ನವಯುಗದ ನಿರ್ಮಾತ ಅಭಿನವ ಭಗೀರಥ”:ಸರ್ ಎಂ.ವಿ
 

“ನವಯುಗದ ನಿರ್ಮಾತ ಅಭಿನವ ಭಗೀರಥ”:ಸರ್ ಎಂ.ವಿ

by Kundapur Xpress
Spread the love

ಭಾರತದ ಮೊಟ್ಟಮೊದಲನೆಯ ಇಂಜಿನಿಯರ್ ಸರ್ ಎಂ. ವಿ. ಅವರ ಬದುಕೇ ಒಂದು ಸ್ಫೂರ್ತಿ!
ಭಾರತದ ಪುಣ್ಯಭೂಮಿಯಲ್ಲಿ ಜನಿಸಿ, ಕನ್ನಡ ನಾಡಿನ ಕೀರ್ತಿಪತಾಕೆಯನ್ನು ಎತ್ತರಕ್ಕೆ ಹಿಡಿದ ಮಹಾನ್ ಮೇಧಾವಿ, ತಂತ್ರಜ್ಞ, ಅಮರ ವಾಸ್ತುಶಿಲ್ಪಿ ಸರ್ ಎಂ ವಿಶ್ವೇಶ್ವರಯ್ಯನವರು.ಇಂದವರ ಹುಟ್ಟುಹಬ್ಬ! ರಾಷ್ಟ್ರೀಯ ಇಂಜಿನಿಯರರ ದಿನ!
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಸಂಸ್ಕೃತ ಪಂಡಿತರು ಹಾಗೂ ಆಯುರ್ವೇದಿಕ್ ಪಂಡಿತರೂ ಆದ ಶ್ರೀನಿವಾಸಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮನವರ ಮಗನಾಗಿ ಜನಿಸಿದರು.
ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರಿನಲ್ಲಿ ಪ್ರೌಢಶಿಕ್ಷಣ ಮುಗಿಸಿದ ಇವರು ಮದ್ರಾಸಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದರು. ವಿದ್ಯಾರ್ಥಿವೇತನದ ನೆರವಿನಿಂದ ಪುಣೆಯ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನೀಯರ್ ಪದವಿ ಪಡೆದರು. ಎಷ್ಟೇ ಬಡತನವಿದ್ದರೂ ಕುಗ್ಗದ ಜೀವನೋತ್ಸಾಹ, ಬದುಕನ್ನು ಎದುರಿಸುವ ಛಲ, ಭವಿಷ್ಯದ ಬಗೆಗಿನ ದೃಢಸಂಕಲ್ಪದೊಂದಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು.

ಉತ್ತಮ ಅಂಕಗಳನ್ನು ಪಡೆದ ಇವರಿಗೆ ಬಾಂಬೆ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನೀಯರ್ ಆಗಿ ನೌಕರಿ ದೊರೆಯಿತು. ಸಿಂಧ್ ಪ್ರಾಂತದ ಜಲವಿತರಣೆ ಕಾಮಗಾರಿಯಲ್ಲಿ, ಸಿಂಧೂ ನದಿಯಿಂದ ಸುಕೂರಿಗೆ ನೀರು ಹರಿಸುವ ಜವಾಬ್ದಾರಿಯನ್ನು ಯಶಸ್ವಿಗೊಳಿಸಿ ಸರ್ಕಾರದ ಗಮನ ಸೆಳೆದರು. ನಂತರ ಗುಜರಾತಿನ ಸೂರತ್ ನಲ್ಲಿಯೂ ನೀರು ಸರಬರಾಜು ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿದರು. ಭೂಕಂಪಕ್ಕೂ ಹಾನಿಗೊಳಗಾಗದೆ ವಿಶ್ವೇಶ್ವರಯ್ಯನವರ ಈ ಕಾಮಗಾರಿ ಭದ್ರವಾಗಿ ನಿಂತಿದೆ. ಪುಣೆಯ ಕಡಕ್ ಮಾಸ್ಲಾದ ಜಲಾಶಯದಲ್ಲಿ ವಿಶಿಷ್ಟ ತಂತ್ರಜ್ಞಾನವನ್ನು ಬಳಸಿ ಸ್ವಯಂಚಾಲಿತ ಗೇಟ್ ಗಳನ್ನು ಅಳವಡಿಸಿದರು. ವಿಶ್ವದಲ್ಲೇ ಪ್ರಥಮ ಬಾರಿಗೆ ಈ ತಂತ್ರಜ್ಞಾನವನ್ನು ತೋರಿಸಿಕೊಟ್ಟ ಏಕೈಕ ತಂತ್ರಜ್ಞಾನಿಯಾಗಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ.
ಸರ್ ಎಂ.ವಿಯವರು ಕನ್ನಡಿಗರು ಅನ್ನುವುದೇ ನಮಗೆಲ್ಲಾ ಹೆಮ್ಮೆ! ಭಾರತದ ಮೊಟ್ಟಮೊದಲ ಇಂಜಿನಿಯರ್ ಅವರು ಅನ್ನುವುದೇ ನಮಗೆ ಅಭಿಮಾನದ ಸಂಗತಿ! ನೂರಾ ಎರಡು ವರ್ಷ ಬದುಕಿದ ಅವರು ಭಾರತದ ಮೂಲೆ ಮೂಲೆಗಳಲ್ಲಿ ನೂರಾರು ಶ್ರೇಷ್ಟವಾದ ಸಂಸ್ಥೆಗಳನ್ನು ಕಟ್ಟಿದ್ದಾರೆ ಅನ್ನೋದೇ ನಮಗೆ ವಿಸ್ಮಯದ ವಿಷಯ! ಭಾರತರತ್ನ ಪ್ರಶಸ್ತಿ ಅವರನ್ನು ಅರ್ಹವಾಗಿ ಹುಡುಕಿಕೊಂಡು ಬಂತು ಅನ್ನುವುದು ಕೂಡ ನಮ್ಮ ಅಗ್ಗಳಿಕೆಗೆ ಕಾರಣ!

ಇಂಜಿನಿಯರಿಂಗ್ ಪದವಿಯನ್ನು ಪಡೆದು ಮಹಾರಾಷ್ಟ್ರ ಮತ್ತು ಹೈದರಾಬಾದಗಳಲ್ಲಿ ಸರಕಾರಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಮೈಸೂರಿಗೆ ಆಮಂತ್ರಿಸಿದ ಮೈಸೂರು ಒಡೆಯರ ದೂರದೃಷ್ಟಿಗೆ ಒಂದು ಸಲಾಂ ಹೇಳೋಣ! ಈ ಆಮಂತ್ರಣ ಮನ್ನಿಸಿ ಸರ್ ಎಂ.ವಿ ಒಪ್ಪಿ ಮೈಸೂರಿಗೆ ಬಂದದ್ದು ಕೇವಲ ಕನ್ನಡ ನಾಡಿನ ಮೇಲಿನ ಪ್ರೀತಿಯಿಂದ!
ಮುಂದೆ ಮೈಸೂರು ಸಂಸ್ಥಾನದ 19ನೆಯ ದಿವಾನರಾಗಿ ಅವರು 1912-1918ರ ಆರು ವರ್ಷಗಳ ಅವಧಿಯಲ್ಲಿ ಮಾಡಿದ್ದೆಲ್ಲವೂ ಚಿನ್ನದ ಕೆಲಸಗಳೇ!
ಅಂದಿನ ಕಾಲಘಟ್ಟದಲ್ಲಿ ಜಗತ್ತೇ ಅಚ್ಚರಿಯಿಂದ ನೋಡುವಂತೆ, ಭಾರತದ ಅತ್ಯಂತ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೃಷ್ಣರಾಜಸಾಗರ ಅಣೆಕಟ್ಟನ್ನು ಜೀವನದಿ ಕಾವೇರಿಗೆ, ನಾಲ್ಕು ವರ್ಷಗಳ ಅವಧಿಯಲ್ಲಿ ಕಟ್ಟಿಮುಗಿಸಿ ಸ್ವಯಂಚಾಲಿತ ಗೇಟುಗಳನ್ನು ಅಳವಡಿಸಲಾಯಿತು. ಇದು ಬೇರೆ ಅಣೆಕಟ್ಟುಗಳಂತೆ ಸಿಮೆಂಟ್ ಕಾಂಕ್ರೀಟ್ ನಿಂದ ನಿರ್ಮಿತವಾಗದೆ, ವಿಶ್ವೇಶ್ವರಯ್ಯನವರ ಜಾಣ್ಮೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣದಿಂದ ಕಟ್ಟಿದ ಬಲಿಷ್ಠ ಹಾಗೂ ಮಾನವನಿರ್ಮಿತವಾಗಿದ್ದು, ಮೈಸೂರು, ಬೆಂಗಳೂರು, ತಮಿಳುನಾಡಿಗೆ ಜೀವಜಲವನ್ನು ನೀಡುತ್ತಿದೆ. ಎಲ್ಲಿಯಾದರೂ ದುರಂತ ಸಂಭವಿಸಿದರೆ ಸ್ವಯಂಚಾಲಿತ ಗೇಟುಗಳು ತನ್ನಷ್ಟಕ್ಕೆ ತೆರೆದುಕೊಂಡು ಮುನ್ನುಗ್ಗುವ ಅಪಾರ ಪ್ರಮಾಣದ ನೀರು ಸರಾಗವಾಗಿ ಮುಂದೆಸಾಗಲು ಆಳವಾದ ನಾಲೆಯ ವ್ಯವಸ್ಥೆಯನ್ನೂ ಮಾಡಲಾಗಿದೆ. 1ಲಕ್ಷ, 20 ಸಾವಿರ ಎಕರೆ ಭೂಮಿಗೆ ನೀರುಣಿಸಿ, ದಕ್ಷಿಣಭಾರತದ ಕೋಟ್ಯಂತರ ಜೀವಿಗಳಿಗೆ ಜೀವಜಲವನ್ನು ನೀಡಿದರು.
ಸರ್ ಎಂ. ವಿ. ಕನ್ನಡ ನಾಡಿನಲ್ಲಿ ಸ್ಥಾಪನೆ ಮಾಡಿದ್ದು ನೂರಾರು ಶ್ರೇಷ್ಠ ಸಂಸ್ಥೆಗಳನ್ನು! ಇಷ್ಟೊಂದು ಸಾಧನೆ ಮಾಡಲು ಅವರಿಗೆ ಹೇಗೆ ಸಾಧ್ಯವಾಯಿತು ಅನ್ನುವುದೇ ಒಂದು ದೊಡ್ಡ ವಿಸ್ಮಯ!

ವ್ಯಕ್ತಿ ಒಬ್ಬ- ಸಂಸ್ಥೆಗಳು ನೂರಾರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಲ್ಯಾಂಪ್ಸ್, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಜಯಚಾಮರಾಜೇಂದ್ರ ಡಿಪ್ಲೊಮಾ ಕಾಲೇಜು, ಬೆಂಗಳೂರಿನ ಹೆಬ್ಬಾಳದ ಕೃಷಿ ವಿವಿ, ಮೈಸೂರು ವಿವಿ, ಮೈಸೂರು ಚೇಂಬರ್ ಆಫ್ ಕಾಮರ್ಸ್, ಕನ್ನಡಿಗರ ಸ್ವಾಭಿಮಾನದ ಪ್ರತೀಕವೇ ಆದ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರಿನ ಪ್ರಸಿದ್ಧ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು……….ಈ ರೀತಿ ದೊಡ್ಡ ದೊಡ್ಡ ಸಂಸ್ಥೆಗಳನ್ನು ಕಟ್ಟಿದವರು ಅವರೇ! ಅವರಿಗೆ ಅವರೇ ಉಪಮೆ.
ಇಂದು ಮೈಸೂರು, ಮಂಡ್ಯ ಮತ್ತು ಬೆಂಗಳೂರು ಜಿಲ್ಲೆಗೆ ವರ್ಷವಿಡೀ ನೀರು ಉಣಿಸುತ್ತಿರುವ 130 ಆಡಿ ಎತ್ತರದ ಕೃಷ್ಣರಾಜ ಸಾಗರ ಅಣೆಕಟ್ಟು ಸರ್ ಎಂ ವಿ ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿ ತಲೆ ಎತ್ತಿ ನಿಂತಿದೆ! ಆ ಆಣೆಕಟ್ಟು ಅವರು ಕಟ್ಟುವಾಗ ಬಂದಿದ್ದ ಸವಾಲುಗಳು ಮತ್ತು ಪ್ರತಿಭಟನೆಗಳು ನೂರಾರು. ಅವುಗಳನ್ನು ಸರ್ ಎಂ ವಿ ಹೇಗೆಲ್ಲಾ ಗೆದ್ದರು ಅನ್ನುವುದೇ ಒಂದು ರೋಚಕವಾದ ಕತೆ! ಆಗಿನ ಕಾಲದಲ್ಲಿ ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಆಣೆಕಟ್ಟು ನಿರ್ಮಾಣ ಆಗಿತ್ತು!
ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ
ವಿಶೇಷವಾಗಿ ಎಂ ವಿ ಸರ್ ಅವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅತೀ ಹೆಚ್ಚು ಪ್ರೋತ್ಸಾಹವನ್ನು ನೀಡಿದರು. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭಿಸಿದ ಅವರು ತಮ್ಮ ಇಳಿವಯಸ್ಸಿನವರೆಗೂ ಕನ್ನಡ ಸಾಹಿತ್ಯದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಪ್ಪದೇ ಆಗಮಿಸಿ ಹಾಜರಾಗುತ್ತಿದ್ದರು ಮತ್ತು ಕೊನೆಯವರೆಗೂ ಇರುತ್ತಿದ್ದರು.

ಅವರ ದಿಟ್ಟತನಕ್ಕೆ, ಸಮಯ ಪ್ರಜ್ಞೆಗೆ, ಕಠಿಣ ದುಡಿಮೆಗೆ ನೂರಾರು ಸಾಕ್ಷಿಗಳು ನಮಗೆ ದೊರೆಯುತ್ತವೆ. ಹಾಗೆಯೇ ಅವರ ಮಾನವೀಯ ಮುಖಗಳಿಗೆ ಕೂಡ ನೂರಾರು ನಿದರ್ಶನಗಳು ದೊರೆಯುತ್ತವೆ. ಅವುಗಳಲ್ಲಿ ಒಂದನ್ನು ಮಾತ್ರ ಇಲ್ಲಿ ಉಲ್ಲೇಖ ಮಾಡುತ್ತಿದ್ದೇನೆ.

ಮಾನವೀಯತೆಯ ಸಾಕಾರ ಅವರು ಮೈಸೂರು ದಿವಾನರಾಗಿ ಇದ್ದ ಸಂದರ್ಭ ಅದು. ಅವರ ಒಬ್ಬ ಸಂಬಂಧಿಕರು ತಮ್ಮ ಮಗನಿಗೆ ಉದ್ಯೋಗ ಕೊಡಿಸುವಂತೆ ವಿನಂತಿ ಮಾಡಿಕೊಂಡು ಅವರ ಕಚೇರಿಗೆ ಬಂದರು. ಅವರ ಅರ್ಜಿಯನ್ನು ತೆರೆದು ನೋಡಿದಾಗ ಆ ಹುಡುಗನು ಸೂಚನೆ ಮಾಡಿದ ಹುದ್ದೆಗೆ ಆ ಹುಡುಗನಲ್ಲಿ ಸರಿಯಾದ ಶೈಕ್ಷಣಿಕ ಅರ್ಹತೆಯು ಇರಲಿಲ್ಲ. ಮಾರ್ಕ್ಸ್ ಕಡಿಮೆ ಇತ್ತು. ಅದನ್ನು ಸರ್ ಎಂ ವಿ ಅವರು ಆ ಹುಡುಗನ ಅಪ್ಪನ ಬಳಿ ಹೇಳಿ ಸಾರಿ ಅಂದರು. ಆಗ ನಿರಾಶರಾದ ಆ ಸಂಬಂಧಿಕರು ಸಿಟ್ಟಿನಲ್ಲಿ ಸರ್ ಎಂ ವಿ ಅವರನ್ನು ಬೈದು ಹಿಂದೆ ಹೋದರು. ಎಂ ವಿ ಸರ್ ಒಂದು ವಾಕ್ಯವನ್ನು ಕೂಡ ಮಾತಾಡಲಿಲ್ಲ!

ಅವರು ಆಚೆಗೆ ಹೋದ ನಂತರ ಸರ್ ಎಂ. ವಿ. ಅವರು ಆ ಸಂಬಂಧಿಕರ ಕುಟುಂಬದ ಆರ್ಥಿಕ ಹಿನ್ನೆಲೆಯ ಬಗ್ಗೆ ಬೇರೆಯವರ ಮೂಲಕ ಕೇಳಿ ತಿಳಿದುಕೊಂಡರು. ಅವರಿಗೆ ನಿಜವಾಗಿ ಬಡತನ ಮತ್ತು ಕಷ್ಟ ಇತ್ತು. ಇದರಿಂದ ಸರ್ ತುಂಬ ಬೇಜಾರು ಮಾಡಿಕೊಂಡರು.
ಮುಂದೆ ನಿವೃತ್ತಿ ಆಗುವವರೆಗೆ ಸರ್ ಎಂ. ವಿಯವರು ಆ ಕುಟುಂಬಕ್ಕೆ ತಮ್ಮ ವೇತನದಿಂದ ಪ್ರತೀ ತಿಂಗಳು ನೂರು ರೂಪಾಯಿ ಮನಿ ಆರ್ಡರ್ ಕಳುಹಿಸಿಕೊಡುತ್ತಿದ್ದರು! ಮತ್ತು ಅದನ್ನು ಅವರು ಯಾರಿಗೂ ಹೇಳಲಿಲ್ಲ!
ಸರ್ ಎಂ ವಿಶ್ವೇಶ್ವರಯ್ಯ ಅವರು ಆಧುನಿಕ ಕನ್ನಡ ನಾಡಿನ ನಿರ್ಮಾಪಕ ಅನ್ನುವುದರಲ್ಲಿ ಯಾವ ಸಂದೇಹ ಕೂಡ ಇಲ್ಲ! ಇತಿಹಾಸದ ಪುಟಗಳಲ್ಲಿ ದಾಖಲಾದ ಈ ಮಹಾನ್ ಚೇತನ “ನವಯುಗದ ನಿರ್ಮಾತ ಅಭಿನವ ಭಗೀರಥ” ಸರ್ ಎಂ ವಿಶ್ವೇಶ್ವರಯ್ಯನವರ ಹೆಜ್ಜೆಗುರುತುಗಳನ್ನು, ಸಾಧನೆಗಳನ್ನು, ನೆನಪಿಸಿಕೊಳ್ಳುತ್ತಾ ಭಾರತದ ಭಾಗ್ಯವಿಧಾತನಿಗೆ ಗೌರವಾರ್ಪಣೆ ಹಾಗೆಯೇ ರಾಷ್ಟ್ರದ ಎಲ್ಲಾ ಇಂಜಿನಿಯರಗಳಿಗೆ ಅವರದೇ ದಿನದ ಶುಭಾಶಯಗಳು.

ಸ್ವರ್ಣ ಕುಂದಾಪುರ

ಆಪ್ತ ಸಮಾಲೋಚಕಿ

 

 

Related Articles

error: Content is protected !!