ಭಾರತೀಯ ಸಂಸ್ಕೃತಿಯಲ್ಲಿ ತಾಯಿ–ತಂದೆ, ಹಿರಿಯರು ಹಾಗೂ ಪಿತೃಗಳನ್ನು ಸ್ಮರಿಸುವುದು ಅತ್ಯಂತ ಪವಿತ್ರವಾದ ಕರ್ತವ್ಯ. ಪ್ರತೀ ವರ್ಷದ ಭಾದ್ರಪದ ಮಾಸದ ಅಮಾವಾಸ್ಯೆಯ ದಿನವನ್ನು ಮಹಾಲಯ ಅಮಾವಾಸ್ಯೆ ಅಥವಾ ಪಿತೃ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನವನ್ನು ಪಿತೃಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೆಂದು ಭಾವಿಸಲಾಗುತ್ತದೆ. ಭಾದ್ರಪದ ಮಾಸದ ಹುಣ್ಣಿಮೆಯಿಂದ 15 ದಿನಗಳ ಅವಧಿಯನ್ನು ಪಿತೃಪಕ್ಷ ಅಥವಾ ಮಹಾಲಯ ಪಕ್ಷ ಎಂದು ಕರೆಯುತ್ತಾರೆ. ಗರುಡಪುರಾಣದ ಪ್ರಕಾರ ಗತಿಸಿದ ನಮ್ಮ ಹಿರಿಯರು ನಮ್ಮತ್ತ ಗಮನ ಹರಿಸುವ ಸಮಯ. ಹಾಗಾಗಿ ಈ 15 ದಿನಗಳ ಕಾಲ ನಿತ್ಯ ಹಿರಿಯರನ್ನು ಸ್ಮರಿಸಿ ಅವರಿಗೆ ಪಿಂಡಪ್ರದಾನ ಮತ್ತು ತಿಲತರ್ಪಣ ನೀಡಬೇಕು. ಪಿಂಡಪ್ರದಾನ ಸಾಧ್ಯವಾಗದವರು ತಿಲತರ್ಪಣವನ್ನು ನೀಡಬೇಕು. ಇದು ಸಾಧ್ಯವಾಗದವರು ತಂದೆ ಗತಿಸಿ ಹೋಗಿದ್ದರೆ, ಮೃತಪಟ್ಟ ತಿಥಿಯಂದು ಮಹಾಲಯ ಪಕ್ಷ ಆಚರಿಸಬೇಕು. ಇದೆಲ್ಲಾ ಸಾಧ್ಯವೇ ಇಲ್ಲ ಎನ್ನುವವರು ಮಹಾಲಯ ಅಮಾವಾಸ್ಯೆಯಂದಾದರೂ ಪಿತೃಕಾರ್ಯ ಮಾಡಬೇಕು. ಈ ಪಕ್ಷದಲ್ಲಿ ನಿತ್ಯ ದೇವರ ಪೂಜೆಯ ಹೊರತು ಯಾವುದೇ ದೇವತಾ ಕಾರ್ಯ ಮಾಡುವುದು ಶ್ರೇಯಸ್ಕರವಲ್ಲ. ಕಾರಣ ನಮ್ಮ ಪಿತೃಗಳೇ ದೇವತೆಗಳಾಗಿ ಬಂದು ನಾವು ಮಾಡುವ ಪಿತೃಕಾರ್ಯದಿಂದ ತೃಪ್ತರಾಗಿ ನಮ್ಮನ್ನು ಋಣಮುಕ್ತರನ್ನಾಗಿ ಮಾಡುತ್ತಾರೆ. ಹಾಗಾಗಿ ಅವರನ್ನು ನಾವು ಪಿಂಡಪ್ರದಾನ ಮತ್ತು ತಿಲತರ್ಪಣದಿಂದ ಸಂತೃಪ್ತಿಪಡಿಸಬೇಕು.
ಪಿತೃಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ ಅಥವಾ ಸರ್ವ ಪಿತೃ ಅಮಾವಾಸ್ಯೆಯು ವಿಶೇಷವಾಗಿದೆ. ಹಿಂದಿನ ಕಾಲದಲ್ಲಿ ಮೃತಪಟ್ಟವರ ತಿಥಿ ನಮಗೆ ತಿಳಿಯದೇ ಇದ್ದರೆ, ಅವರಿಗೆ ಮಹಾಲಯ ಅಮಾವಾಸ್ಯೆಯಂದು ಪಿಂಡಪ್ರದಾನ, ತಿಲತರ್ಪಣ ನೀಡಬೇಕು. ಮೃತಪಟ್ಟ ಯಾವುದೇ ವ್ಯಕ್ತಿಗೆ ವರ್ಷಕ್ಕೊಮ್ಮೆ ಮೃತರ ತಿಥಿಯಂದು ಶ್ರಾದ್ಧ ಕರ್ಮಗಳನ್ನು ಮಾಡಬೇಕು. ಆ ವರ್ಷದ ಆ ತಿಥಿಯಲ್ಲಿ ಶ್ರಾದ್ಧ ಕರ್ಮಗಳನ್ನು ಮಾಡದಿದ್ದರೆ, ಪಿತೃಪಕ್ಷದಲ್ಲಿ ಬರುವ ಆ ತಿಥಿಯಲ್ಲಿ ಶ್ರಾದ್ಧ ಕರ್ಮಗಳನ್ನು ಮಾಡಿದರೆ ಅವರಿಗೆ ಅದರ ಫಲ ಸಿಗುತ್ತದೆ.
ಹಿಂದೂ ಪುರಾಣಗಳಲ್ಲಿ ಪಿತೃಪಕ್ಷಕ್ಕೆ ವಿಶೇಷ ಸ್ಥಾನವಿದೆ. ಮಹಾಭಾರತದಲ್ಲಿ ಉಲ್ಲೇಖವಾಗಿರುವ ಪ್ರಕಾರ, ಕರ್ಣನು ಯುದ್ದದಲ್ಲಿ ಮರಣ ಹೊಂದಿದ ನಂತರ ಸ್ವರ್ಗಕ್ಕೆ ಪ್ರಯಾಣಿಸುತ್ತಿದ್ದ. ಆಗ ದಾರಿಯಲ್ಲಿ ಕರ್ಣನಿಗೆ ಬಾಯಾರಿಕೆಯಾಯಿತು. ಕೂಡಲೇ ಎದುರು ಕಂಡ ನದಿ ಸಮೀಪಕ್ಕೆ ಹೋಗಿ ನೀರು ಕುಡಿಯಲು ಕೈಗೆತ್ತಿಕೊಂಡ. ಕೂಡಲೇ ಆ ನೀರು ಬಂಗಾರವಾಯಿತು. ನಿರಾಸೆಯಿಂದ ಸ್ವಲ್ಪ ಮುಂದುವರಿದ. ಆಗ ನೀರಡಿಕೆಯೊಂದಿಗೆ ಹಸಿವೂ ಆಯಿತು. ಎದುರುಗಡೆಯಿದ್ದ ಹಣ್ಣು ತುಂಬಿದ ಮಾವಿನಮರವನ್ನು ಕಂಡು ಅದನ್ನು ಕೊಯ್ದು ತಿನ್ನಲು ಮುಂದಾದಾಗ, ಅದು ಚಿನ್ನದ ಹಣ್ಣಾಯಿತು. ಈ ವಿಚಿತ್ರ ಘಟನೆಯಿಂದ ವಿಚಲಿತನಾದ ಕರ್ಣನು, ತನ್ನ ತಂದೆ ಸೂರ್ಯ ಭಗವಂತನನ್ನು ಪ್ರಾರ್ಥಿಸಿದ. ಸೂರ್ಯ ಭಗವಂತ ಕರ್ಣನ ಬಳಿಗೆ ಬಂದು ಆತನನ್ನು ಕೇಳಿ ತಿಳಿದು, ಸಮಸ್ಯೆಗೆ ಕಾರಣ ವಿವರಿಸಿದ್ದು ಹೀಗೆ – ನೀನು ಅನೇಕ ದಾನಗಳನ್ನು ಮಾಡಿದ್ದೀಯಾ. ಆದರೆ ಅನ್ನದಾನ, ಪಿತೃ ತರ್ಪಣ ನೀಡಿಲ್ಲ. ಹಾಗಾಗಿಯೇ ನಿನಗೆ ಈ ಪರಿಸ್ಥಿತಿ. ಸೂರ್ಯದೇವನು ಕರ್ಣನಿಗೆ ಪುನಃ ಭೂಮಿಗೆ ಹೋಗಿ ಪಿತೃಕರ್ಮಗಳನ್ನು ಪೂರೈಸುವಂತೆ ಸೂಚಿಸುತ್ತಾನೆ. ಇಂದ್ರದೇವನಿಗೆ ಹೇಳಿ ಕರ್ಣನನ್ನು ಭೂಮಿಗೆ ಕಳುಹಿಸುತ್ತಾನೆ. ಕರ್ಣನು ಭೂಮಿಗೆ ಬಂದು 15 ದಿನಗಳು ಅಂದರೆ ಪಿತೃಪಕ್ಷದ 15 ದಿನಗಳ ಅವಧಿಯಲ್ಲಿ ಎಲ್ಲ ಪಿತೃದೇವತೆಗಳಿಗೆ ತರ್ಪಣ ಬಿಟ್ಟು, ಅನ್ನ ಸಂತರ್ಪಣೆ ಮಾಡಿ, ಶ್ರಾದ್ಧ ಕರ್ಮಗಳನ್ನು ನೆರವೇರಿಸಿ ಪಿತೃಪಕ್ಷದ ಕೊನೆಯ ದಿನ ಅಂದರೆ ಮಹಾಲಯ ಅಮಾವಾಸ್ಯೆಯಂದು ಸ್ವರ್ಗಕ್ಕೆ ಹಿಂದಿರುಗಿದ ಉಲ್ಲೇಖವಿದೆ.
ಮಹತ್ವ
ನಮ್ಮ ಜೀವನದಲ್ಲಿ ತಾಯಿ–ತಂದೆ, ಅಜ್ಜ–ಅಜ್ಜಿ, ಪೂರ್ವಜರು ನೀಡಿದ ಮೌಲ್ಯಗಳು, ತ್ಯಾಗಗಳು, ಆಶೀರ್ವಾದಗಳು ಅಪಾರವಾಗಿವೆ.ಅವರೆಲ್ಲರ ಆತ್ಮಸ್ಮರಣೆಗೆ ಮಹಾಲಯ ಅಮಾವಾಸ್ಯೆ ದಿನ ವಿಶೇಷ.
ಈ ದಿನ ಪಿತೃಗಳಿಗೆ ಶ್ರಾದ್ಧ, ತರ್ಪಣ, ಪಿಂಡಪ್ರದಾನ ಮಾಡುವುದರಿಂದ ಅವರ ಆತ್ಮ ತೃಪ್ತಿಗೊಳ್ಳುತ್ತದೆ ಮತ್ತು ಕುಟುಂಬದ ಒಳಿತಿಗಾಗಿ ಆಶೀರ್ವಾದ ದೊರೆಯುತ್ತದೆ ಎಂದು ನಂಬಲಾಗಿದೆ.
ಶಾಸ್ತ್ರಗಳಲ್ಲಿ “ಪಿತೃ ದೇವತಾ ಸಮಾನರು” ಎಂದು ಹೇಳಲಾಗಿದೆ. ದೇವರನ್ನು ಆರಾಧಿಸುವಷ್ಟೇ ಪಿತೃಗಳಿಗೆ ತೃಪ್ತಿ ನೀಡುವುದು ನಮ್ಮ ಧರ್ಮ.
ಆಚರಣೆಗಳು
ಗಂಗಾ, ಕಾವೇರಿ, ತುಂಗಾ, ಶರಾವತಿ ಮುಂತಾದ ಪವಿತ್ರ ನದಿಗಳ ತೀರದಲ್ಲಿ ತರ್ಪಣ, ಪಿಂಡಪ್ರದಾನ ಮಾಡಲಾಗುತ್ತದೆ.
ಮನೆಯಲ್ಲಿಯೇ ನೀರು, ಎಳ್ಳು, ಅಕ್ಕಿ, ಹಣ್ಣುಗಳನ್ನು ಅರ್ಪಿಸಿ ಪೂರ್ವಜರನ್ನು ಸ್ಮರಿಸಲಾಗುತ್ತದೆ.
ಈ ದಿನ ಅನಾಥರಿಗೆ, ಬಡವರಿಗೆ ಅನ್ನ, ಬಟ್ಟೆ ದಾನ ಮಾಡುವುದಕ್ಕೂ ವಿಶೇಷ ಮಹತ್ವ ಇದೆ.
ಇಂದಿನ ಪೀಳಿಗೆಗೆ ಮಹಾಲಯ ಅಮಾವಾಸ್ಯೆಯ ಅಗತ್ಯತೆ
ಮೂಲಗಳನ್ನು ಮರೆಯುತ್ತಿರುವ ಪೀಳಿಗೆ– ಇಂದಿನ ಜೀವನ ಶೈಲಿಯಲ್ಲಿ ತಂತ್ರಜ್ಞಾನ, ವೇಗ, ವೃತ್ತಿಜೀವನದ ಒತ್ತಡದಲ್ಲಿ ನಾವು ನಮ್ಮ ಪೂರ್ವಜರ ಬಗ್ಗೆ, ಕುಟುಂಬದ ಮೌಲ್ಯಗಳ ಬಗ್ಗೆ ಕಡಿಮೆ ಚಿಂತಿಸುತ್ತೇವೆ. ಮಹಾಲಯ ಅಮಾವಾಸ್ಯೆ ನಮ್ಮನ್ನು “ನೀವು ಬಂದ ದಾರಿ ಯಾವುದು?” ಎಂಬ ನೆನಪಿಗೆ ತರುತ್ತದೆ.
ಕೃತಜ್ಞತೆ ಬೆಳೆಸುವುದು – ಇಂದಿನ ಯುವಜನತೆ ಬಹಳಷ್ಟು ಸ್ವ ಕೇಂದ್ರಿತ (self–centric)ಆಗಿರುವ ಸಂದರ್ಭದಲ್ಲಿ, ಪಿತೃಗಳನ್ನು ಸ್ಮರಿಸುವ ಆಚರಣೆ “ನಾವು ಇಂದು ಬದುಕಿರುವುದು ಅವರ ತ್ಯಾಗದಿಂದ” ಎಂಬ ಕೃತಜ್ಞ ಮನೋಭಾವವನ್ನು ಬೆಳೆಸುತ್ತದೆ.
ಕುಟುಂಬಬಂಧವನ್ನು ಗಟ್ಟಿಗೊಳಿಸುವುದು – ಮಕ್ಕಳು ಹಿರಿಯರ ಕಥೆಗಳನ್ನು, ಸಂಪ್ರದಾಯಗಳನ್ನು ತಿಳಿಯುವ ಮೂಲಕ ಅವರೊಡನೆ ಭಾವನಾತ್ಮಕ ಸಂಪರ್ಕ ಹೊಂದುತ್ತಾರೆ. ಇದು ಪೀಳಿಗೆಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ಸಾಂಸ್ಕೃತಿಕ ಗುರುತು ಉಳಿಸುವುದು – ಪಿತೃ ತರ್ಪಣದ ದಿನ ಆಚರಿಸುವ ಮೂಲಕ ಇಂದಿನ ಪೀಳಿಗೆ ತಮ್ಮ ಸಂಸ್ಕೃತಿ ಮತ್ತು ಬೇರುಗಳನ್ನು ಮರೆತು ಬಿಡದಂತೆ ಕಾಪಾಡುತ್ತದೆ.
ಇಂದಿನ ಜೀವನಶೈಲಿಯಲ್ಲಿ ಮಹತ್ವ
ಆಧ್ಯಾತ್ಮಿಕ ನೆಮ್ಮದಿ – ತಂತ್ರಜ್ಞಾನ-ಆಧಾರಿತ, ಒತ್ತಡದ ಜೀವನದಲ್ಲಿ ಆಧ್ಯಾತ್ಮಿಕ ಸಮಾಧಾನ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸಾಮಾಜಿಕ ಜವಾಬ್ದಾರಿ – ಅನಾಥರಿಗೆ, ಬಡವರಿಗೆ ದಾನ ಮಾಡುವ ಮೂಲಕ ಸಮಾಜದೊಂದಿಗೆ ಸೌಹಾರ್ದತೆ, ಸಹಾನುಭೂತಿ, ಒಗ್ಗಟ್ಟು ಬೆಳೆಸುವ ಅವಕಾಶ.
ಮೌಲ್ಯ ಸಂಸ್ಕರಣೆ – ನಮ್ಮ ಬದುಕು ಕೇವಲ ಭೌತಿಕ ಸಾಧನೆಗೇ ಸೀಮಿತವಲ್ಲ, ಬದಲಾಗಿ ಹಿಂದಿನ ಪೀಳಿಗೆಗಳ ತ್ಯಾಗ, ಮೌಲ್ಯಗಳು ನಮ್ಮ ಜೀವನದ ಆಧಾರ ಎಂಬ ಅರಿವು ತರಿಸುವುದು.
ಅಳಿದರೂ ಉಳಿದ ನಮ್ಮ ಪೂರ್ವಜರು
ಚಿತ್ತಬಿತ್ತಿಯಲ್ಲಿ ಮಾಸದಿರುವ ಮಹಾನುಭಾವರು.
ನಮ್ಮ ಬದುಕಿಗೆ ಬಹುತ್ತಮ ಅಡಿಪಾಯವನ್ನ ಹಾಕಿ, ಭವಿಷ್ಯದ ಸಿರಿ ಮಹಲುಗಳನ್ನ ನಿರ್ಮಿಸಲು ಸದವಕಾಶವನ್ನೊದಗಿಸಿ, ಕಾಣದ ಕಡಲಾಚೆ ಸರಿದುಹೋದ ಆ ನಮ್ಮ ಹಿರಿಯರು,
ಧನ್ಯತಾಭಾವದೊಂದಿಗೆ ಪಿತೃ ತರ್ಪಣವನ್ನ ಪೂಜ್ಯಭಾವನೆಗಳಿಂದ,ಸಲ್ಲಿಸಲೇಬೇಕಾದ,
ಅವರ ಸವಿನೆನಪುಗಳಾದ ನಾವು ಉಳಿದ ಕಿರಿಯರು.
ಅಂದು ಯಾವುದೇ ಯಂತ್ರಗಳಿಲ್ಲದೆ, ತಮ್ಮ ರಟ್ಟೆಯ ಭಲ, ಚಿತ್ತದ ಛಲಗಳಿಂದ,
ಕಾಯಕವೇ ಕೈಲಾಸ ವೆಂದು ಬದುಕನ್ನ ನಡೆಸಿದಂತಹ ಶ್ರಮಜೀವಿಗಳು.
ದುಡಿಮೆಯೇ ದುಡ್ಡಿನ ತಾಯಿ,
ಕೈ ಕೆಸರಾದರೆ ಬಾಯಿ ಮೊಸರು, ಎಂಬುವ ಸತ್ಯವನ್ನ ಆಡದೆಯೆ ಮಾಡಿ ತೋರಿಸಿಕೊಟ್ಟವರು.
ಬೆಟ್ಟ ಕೊರೆದು ದಾರಿ ಮಾಡಿಕೊಂಡು ನೀರು ನುಗ್ಗಿ ಸಾಗುವಂತೆ,ಬಹು ಪ್ರಯಾಸದ ಜೀವನವನ್ನ, ಮನಸೊಂದಿದ್ದರೆ ಮಾರ್ಗವು ಖಂಡಿತ ವೆಂದು ಕೆಚ್ಚೆದೆಯಿಂದ ಮುಂದೆ ಬಂದು, ನಮ್ಮ ಬದುಕಿಗೆ ಭರವಸೆಯ ಬೆಳ್ಳಿ ಬೆಳಕ ನ್ನ ತೋರಿಸಿಕೊಟ್ಟ, ಹಿರಿಯ ಹೃದಯ ಶ್ರೀಮಂತರಿಗೆ, ಇದೋ ಮನದಾಳದ ನಮನಗಳು.
ಮಹಾಲಯ ಅಮಾವಾಸ್ಯೆಯ ಸಂದೇಶವೆಂದರೆ – “ಪೂರ್ವಜರ ನೆನಪುಗಳನ್ನು ಗೌರವಿಸೋಣ, ಅವರಿಂದ ಬಂದ ಮೌಲ್ಯಗಳನ್ನು ಪಾಲಿಸೋಣ, ಅವರ ಆಶೀರ್ವಾದವನ್ನು ಸದಾ ಕಾಪಾಡಿಕೊಳ್ಳೋಣ.”
ಇದು ಕೇವಲ ಶಾಸ್ತ್ರಾಚರಣೆ ಅಲ್ಲ, ನಮ್ಮ ಮೂಲವನ್ನು ಮರೆತಿರಬಾರದು ಎಂಬ ಬೋಧನೆ ಕೂಡ.
ಗತಿಸಿದ ನಮ್ಮ ಹಿರಿಯರ ಋಣ ತೀರಿಸಲು ಈ ಪಿತೃಪಕ್ಷ ಸುವರ್ಣ ಅವಕಾಶ. ನಮ್ಮನ್ನು ಹೆತ್ತು, ಹೊತ್ತು ಸಾಕಿದ ಮಾತಾಪಿತೃಗಳು, ಅವರ ಮಾತಾ ಪಿತೃಗಳು ಹೀಗೆ ಏಳು ತಲೆಮಾರುಗಳ ನಮ್ಮ ವಂಶಸ್ಥರು, ಪ್ರೀತಿ ತೋರಿದ ಜೊತೆಗೆ ಆಗಾಗ ದ್ವೇಷ ಕಾರಿದ ಬಂಧುಗಳಿಗೆ, ನೆರಳಂತೆ ಕಷ್ಟದಲ್ಲಿ ಕಾಪಾಡಿದ ಆಗಾಗ ಕಾಡಿದ ಸ್ನೇಹಿತರಿಗೆ, ಅಕ್ಷರ ಸಂಪತ್ತನ್ನು ಕರುಣಿಸಿ ನಮ್ಮನ್ನು ಉನ್ನತೀಕರಿಸಿದ ಗುರುಗಳಿಗೆ ಪಿಂಡಪ್ರದಾನದ ಜೊತೆ ತಿಲತರ್ಪಣ ನೀಡುವ ಸುಸಮಯ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತಾ ಗತಿಸಿದ ಎಲ್ಲಾ ಗುರು – ಹಿರಿಯರಿಗೆ, ಬಂಧುಮಿತ್ರರಿಗೆ ಸದ್ಗತಿ ನೀಡಲಿ ಮತ್ತು ನಮ್ಮನ್ನು ಅನುಗ್ರಹಿಸಲಿ ಎಂದು ಶ್ರೀಮದ್ವಲ್ಲಭ ಜನಾರ್ದನ ರೂಪೀ ಶ್ರೀವಾಸುದೇವನನ್ನು ಬೇಡೋಣ.ನಮ್ಮ ಶ್ರೇಯೋಭಿವೃದ್ಧಿ ಬಯಸಿ ಅಸ್ತಂಗತರಾದ ನಮ್ಮ ಹಿರಿಯರಿಗೆ, ಈ ದಿನ ಹೃದಯಸ್ಪರ್ಶಿ ನಮನಗಳನ್ನು ನಮಿಸಿ ಪೂಜಿಸಿ ಅವರ ಆಶೀರ್ವಾದಗಳೊಂದಿಗೆ ಜೀವನ ನಡೆಸೋಣ.
ಎಲ್ಲಾ ಆತ್ಮೀಯ ಹಿತೈಷಿಗಳಿಗೆ ಮಹಾಲಯ ಅಮಾವಾಸ್ಯೆಯ ಶುಭಾಶಯಗಳು

ಸ್ವರ್ಣ ಕುಂದಾಪುರ
ಆಪ್ತ ಸಮಾಲೋಚಕಿ

