ಭಾರತದ ಸಾಂಸ್ಕೃತಿಕ ಪಯಣದಲ್ಲಿ ಅಕ್ಷರದ ರೂಪದಲ್ಲಿ ಅಮರತ್ವ ಪಡೆದ ಮಹರ್ಷಿಗಳಲ್ಲಿ ವಾಲ್ಮೀಕಿ ಋಷಿಗಳು ಅಗ್ರಗಣ್ಯರು. ಒಂದು ಕಾಲದಲ್ಲಿ ರತ್ನಾಕರ ಎಂಬ ಕಳ್ಳನಾಗಿದ್ದ ವಾಲ್ಮೀಕಿ, ತಪಸ್ಸಿನ ಶಕ್ತಿ ಮತ್ತು “ರಾಮ” ಎಂಬ ನಾಮದ ಮಂತ್ರದಿಂದ ಒಳಗಿನ ಅಂಧಕಾರವನ್ನು ತೊಡೆದು ಬೆಳಕಿನ ರೂಪವಾದರು.
ಅವರ ಜೀವನವೇ ನಮಗೆ ಒಂದು ದೀಪಸ್ತಂಭ —
ತಪ್ಪು ಮಾಡಿದವರಿಗೂ ತಿದ್ದುಕೊಳ್ಳುವ ದಾರಿ ಇದೆ,
ಪಾಪಿಯಾದರೂ ಪವಿತ್ರನಾಗುವ ಶಕ್ತಿ “ಜಾಗೃತಿಯಲ್ಲಿದೆ” ಎಂದು ತೋರಿಸಿದವರು ವಾಲ್ಮೀಕಿ.
ಅವರು ರಚಿಸಿದ ರಾಮಾಯಣ ಕಾವ್ಯವು ಕೇವಲ ರಾಮನ ಕಥೆಯಲ್ಲ, ಅದು ಮಾನವನ ಧರ್ಮ, ನೀತಿ, ಪ್ರೀತಿ ಮತ್ತು ತ್ಯಾಗದ ಪಾಠಗಳ ಪಥಪ್ರದರ್ಶಕ. “ಮನುಷ್ಯನೊಳಗಿನ ರಾಮನನ್ನು ಹುಡುಕಿ” ಎಂಬ ಸಂದೇಶವೇ ಅವರ ಕಾವ್ಯದ ಹೃದಯ.
ಮಾ ನಿಷಾದ ಪ್ರತಿಷ್ಠಾಂ ತ್ವಂ
ಅಗಮಃ ಶಾಶ್ವತೀ ಸಮಾಃ ।
ಯತ್ ಕ್ರೌಂಚ ಮಿಥುನಾದೇಕಂ
ಅವಧೀಃ ಕಾಮಮೋಹಿತಮ್ ।।
ನಾರದ ಮುನಿಗಳಿಂದ ಸಂಕ್ಷೇಪ ರಾಮಾಯಣವನ್ನು ಕೇಳಿದ ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರಕ್ಕೆ ಶಿಷ್ಯ ಭರದ್ವಾಜನೊಂದಿಗೆ ಸ್ನಾನಕ್ಕಾಗಿ ಹೋಗುತ್ತಾರೆ. ಆಗ ಅಲ್ಲಿಯೇ ಸಂತೋಷವಾಗಿ ವಿಹರಿಸುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸಿದ ಹೃದಯ ವಿದ್ರಾವಕ ಸನ್ನಿವೇಶವನ್ನು ನೋಡಿದ ಮಹರ್ಷಿಗಳು, ಕರುಣೆ, ದುಃಖ, ಕೋಪದಿಂದ ಬೇಡನನ್ನು ಶಪಿಸುವ ಸಂದರ್ಭದಲ್ಲಿ ಮೇಲಿನ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ.
ಬೇಡಸಂಕುಲದ ನಾಯಕನಾಗಿದ್ದ ರತ್ನಾಕರ ದರೋಡೆಕಾರನಾಗಿ ಜೀವನ ಸಾಗಿಸುತ್ತಿರುವಾಗ, ನಾರದರ ಸಂಪರ್ಕದಿಂದ ಪರಿವರ್ತನೆಗೊಂಡು ಪಾಪಪರಿಹಾರಕ್ಕಾಗಿ ‘ರಾಮಮಂತ್ರ’ವನ್ನು ಅಖಂಡವಾಗಿ ಜಪಿಸಿದರು. ಸುತ್ತಲೂ ಬೆಳೆದ ಪೊದೆ ವಲ್ಮೀಕದ ಪರಿವೆಯೇ ಇಲ್ಲದಾಯಿತು. ಎಷ್ಟೋ ವರ್ಷಗಳ ನಂತರ ಅದೇ ದಾರಿಯಲ್ಲಿ ಸಂಚರಿಸುತ್ತಾ ಬಂದ ನಾರದರಿಗೆ ವಲ್ಮೀಕದೊಳಗಿಂದ ‘ರಾಮತಾರಕ’ ಮಂತ್ರ ಕೇಳಿ ವಲ್ಮೀಕವನ್ನು ಭೇದಿಸಿದರು. ವಲ್ಮೀಕದಿಂದ ಹೊರಬಂದ ರತ್ನಾಕರ ಮುಂದೆ ‘ವಾಲ್ಮೀಕಿ’ ಎಂದೇ ಪ್ರಖ್ಯಾತನಾಗುತ್ತಾನೆ. ಕ್ರೌಂಚವಧಾ ಪ್ರಸಂಗದಲ್ಲಿ, ತನ್ನ ಬಾಯಲ್ಲಿ ಅಯಾಚಿತವಾಗಿ ಮೂಡಿ ಬಂದ ಶ್ಲೋಕದ ಕುರಿತು ವಾಲ್ಮೀಕಿಗಳು ಜತೆಯಲ್ಲಿದ್ದ ಶಿಷ್ಯ ಭರದ್ವಾಜನಲ್ಲಿ ಹೇಳುತ್ತಾರೆ:
ಪಾದಬದ್ಧೋಽಕ್ಷರಸಮಃ
ತಂತ್ರಿಲಯಸಮನ್ವಿತಃ ।
ಶೋಕಾರ್ತಸ್ಯ ಪ್ರವೃತ್ತೋ ಮೇ
ಶ್ಲೋಕೋ ಭವತು ನಾನ್ಯಥಾ।।
ಶೋಕದಿಂದ ಪೀಡಿತನಾದ ನನ್ನ ಮುಖದಿಂದ ಹೊರಟ ಈ ವಾಣಿಯು ನಾಲ್ಕು ಪಾದಗಳಿಂದ ಕೂಡಿದ್ದು, ಸಮಾಕ್ಷರ ಉಳ್ಳದ್ದಾಗಿ, ರಾಗಪ್ರಾಸಲಯಬದ್ಧವಾಗಿ ತಂತೀವಾದ್ಯಗಳೊಡನೆ ಹಾಡಲು ಯೋಗ್ಯವಾಗಿದೆ. ಮೇಲ್ನೋಟಕ್ಕೆ ಕಂಡುಬರುವ ‘ಮಾ ನಿಷಾದ’ ಶ್ಲೋಕದ ಅರ್ಥ ಹೀಗಿದೆ :
ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ |
ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||
ಈ ಶ್ಲೋಕವನ್ನೇ ಕುರಿತು ಯೋಚಿಸುತ್ತಾ ಕುಳಿತ ಮಹರ್ಷಿಗಳ ಆಶ್ರಮಕ್ಕೆ ಸಾಕ್ಷಾತ್ ಬ್ರಹ್ಮದೇವ ಬಂದು, ನಾರದೋಕ್ತ ರಾಮಾಯಣ ಕಥೆಯನ್ನು ಛಂದೋಬದ್ಧ ಶ್ಲೋಕರೂಪದಲ್ಲಿ ರಚಿಸಲು ಹೇಳುತ್ತಾರೆ. ಬ್ರಹ್ಮನ ಆಣತಿಯಂತೆ ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ರಾಮಾಯಣವೆಂಬ ಇತಿಹಾಸ ಕಾವ್ಯವನ್ನು ಬರೆದರು. ವಾಲ್ಮೀಕಿ ಮಹರ್ಷಿಗಳನ್ನು ಹರಸಿ ಬ್ರಹ್ಮದೇವರು ಹೇಳಿದ್ದರು:
ಯಾವತ್ ಸ್ಥಾಸ್ಯಂತಿ ಗಿರಯಃ
ಸರಿತಶ್ಚ ಮಹೀತಲೇ |
ತಾವದ್ರಾಮಾಯಣಕಥಾ
ಲೋಕೇಷು ಪ್ರಚರಿಷ್ಯತಿ ||
ಎಲ್ಲಿಯವರೆಗೆ ಈ ಭೂಮಿಯಲ್ಲಿ ನದಿ ಬೆಟ್ಟಗಳು ಇರುತ್ತವೆಯೊ ಅಲ್ಲಿಯವರೆಗೆ ರಾಮಾಯಣ ಕಥೆ ಲೋಕದಲ್ಲಿ ಪ್ರಚಾರದಲ್ಲಿರುತ್ತದೆ.
ಕ್ರೌಂಚವಧಾ ಪ್ರಸಂಗವನ್ನು ವಿದ್ವಾಂಸರು ಈ ರೀತಿ ವಿಶ್ಲೇಷಿಸಿದ್ದಾರೆ. ಕಾಮ ಮೋಹಿತವಾದ ಗಂಡು ಹಕ್ಕಿಯು ರಾವಣ. ಹೆಣ್ಣು ಪಕ್ಷಿಯು ಮಂಡೋದರಿ. ಕ್ರೌಂಚವನ್ನು ಹೊಡೆದ ವ್ಯಾಧನೇ ಶ್ರೀರಾಮ. “ಕ್ರೌಂಚನಾಗಿದ್ದ ರಾವಣನನ್ನು ನಿಗ್ರಹಿಸಿದ ರಾಮನೇ, ನೀನು ಶಾಶ್ವತನಾಗಿ ಬಾಳುವಂತಹವನಾಗು” ಎನ್ನುವುದು ಶ್ಲೋಕಾರ್ಥ. ‘ಮಾ’ ಎಂದರೆ ಲಕ್ಷ್ಮೀ. ‘ಮಾ ನಿಷಾದ’ ಎಂದರೆ ‘ಲಕ್ಷ್ಮೀ ಸಹಿತನಾದ ನಾರಾಯಣ ಸ್ವರೂಪ’ ಎಂದಾಗುತ್ತದೆ. ರಾಮಾಯಣದ ಮೊದಲ ಶೋಕ ಅಪವಾಕ್ಯವಾಗದೆ ಮಂಗಳಕರ ಶ್ಲೋಕವಾಗಿದೆ.
ರಾವಣನ ವಧೆಯ ನಂತರ, ಶ್ರೀರಾಮ ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾಗಿ ಆಳುತ್ತಿದ್ದಾಗ, ಸೀತೆಯ ಬಗ್ಗೆ ಅಪವಾದ ಕೇಳಿ, ನೊಂದು, ತುಂಬು ಗರ್ಭಿಣಿಯಾಗಿದ್ದ ಸೀತೆಯನ್ನು ಪರಿತ್ಯಜಿಸಿ, ಕಾಡಿಗೆ ಕಳುಹಿಸುತ್ತಾನೆ. ಚಿತ್ರಕೂಟದಲ್ಲಿದ್ದ ವಾಲ್ಮೀಕಿಗಳು ಸೀತೆಗೆ ಆಶ್ರಯ ಕೊಡುತ್ತಾರೆ. ಅಲ್ಲಿಯೇ ಸೀತೆ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾಳೆ. ವಾಲ್ಮೀಕಿ ಮಹರ್ಷಿಗಳೇ ಪುತ್ರರಿಗೆ ‘ಕುಶಲವ’ ಎಂದು ನಾಮಕರಣ ಮಾಡಿ, ಅಕ್ಷರಾಭ್ಯಾಸ, ಉಪನಯನಾದಿ ಸಂಸ್ಕಾರಗಳನ್ನು ನೆರವೇರಿಸಿ, ವೇದ, ಉಪನಿಷತ್, ಸ್ಮೃತಿಗಳನ್ನು ಬೋಧಿಸಿ, ಧನುರ್ವಿದ್ಯಾ ಪ್ರವೀಣರನ್ನಾಗಿ ಮಾಡಿದರು. ರಾಮಾಯಣ ಮಹಾಕಾವ್ಯವನ್ನು ರಚಿಸಿ, ಅದರ ಗಾಯನವನ್ನು ಕಲಿಸಿಕೊಟ್ಟರು. ಅದೊಮ್ಮೆ ವಾಲ್ಮೀಕಿ ದೇಶಸಂಚಾರಕ್ಕೆ ಹೋಗಿದ್ದಾಗ, ಆಶ್ರಮದ ಬಳಿ ಬಂದ ರಾಮಾಶ್ವಮೇಧದ ಕುದುರೆಯನ್ನು ಲವ ಕಟ್ಟುತ್ತಾನೆ. ಈ ವಿಚಾರ ತಿಳಿದು, ಕುದುರೆಯ ರಕ್ಷಕರಾಗಿ ಕ್ರಮವಾಗಿ ಬಂದಿದ್ದ ಶತ್ರುಘ್ನ, ಭರತ, ಲಕ್ಷ್ಮಣ ಹಾಗೂ ಸ್ವತಃ ಶ್ರೀರಾಮ, ಲವಕುಶರ ಎದುರು ಕಾದಲಾರದೆ ಒಬ್ಬೊಬ್ಬರಾಗಿ ಸೋತು ಮೂರ್ಛಿತರಾಗುತ್ತಾರೆ.
ಲೋಕಸಂಚಾರಕ್ಕೆ ತೆರಳಿದ್ದ ವಾಲ್ಮೀಕಿ ಆಶ್ರಮಕ್ಕೆ ಹಿಂತಿರುಗಿ, ಪರಿಸ್ಥಿತಿಯನ್ನು ಅರಿತು ಕಮಂಡಲ ಜಲವನ್ನು ಎಲ್ಲರ ಮೇಲೆ ಸಂಪ್ರೋಕ್ಷಿಸಿ, ಯುದ್ಧದಲ್ಲಿ ಮಡಿದವರೆಲ್ಲರನ್ನೂ ಮತ್ತೆ ಬದುಕಿಸಿದರು. ರಾಮಚಂದ್ರನನ್ನು ಆಶೀರ್ವದಿಸಿ, “ಲವಕುಶರು ನಿನ್ನ ಮಕ್ಕಳು. ಇವರನ್ನು ಪರಿಗ್ರಹಿಸಿ ದೋಷರಹಿತಳಾದ ಸೀತೆಯನ್ನು ಅಯೋಧ್ಯೆಗೆ ಕರೆದುಕೊಂಡು ಹೋಗು” ಎಂದು ಹೇಳುತ್ತಾರೆ. ಮತ್ತೆ ಅಯೋಧ್ಯೆಗೆ ಹೋಗುವ ಇಚ್ಛೆ ಇಲ್ಲದ ಸೀತೆ, ಭೂತಾಯಿಯನ್ನು ಪ್ರಾರ್ಥಿಸಿ ಕರೆಸಿಕೊಳ್ಳುತ್ತಾಳೆ. ಭೂಮಿಯನ್ನು ಸೀಳಿಕೊಂಡು ಬಂದ ಭೂಮಿತಾಯಿಯು, ವಾಲ್ಮೀಕಿಗಳ ಮತ್ತು ನೆರೆದಿದ್ದ ಸಮಸ್ತ ಜನರ ಸಮ್ಮುಖದಲ್ಲಿ ಸೀತೆಯನ್ನೆತ್ತಿಕೊಂಡು ಭೂಗರ್ಭದೊಳಕ್ಕೆ ಸೇರಿಸಿ ಬಿಡುತ್ತಾಳೆ.
ವಾಲ್ಮೀಕಿಗಳು, ರಾಮಸೀತೆಯರನ್ನು ದೈವತ್ವಕ್ಕೇರಿಸದೆ, ಮಾನುಷರೂಪದ ಜೀವನವನ್ನೇ ಅವಲಂಬಿಸಿ ಕಾವ್ಯ ರಚಿಸಿದರು. ರಾಜಾಶ್ರಯವನ್ನು ಎಂದಿಗೂ ಹಂಬಲಿಸದೆ ತಾವು ಬರೆದ ರಾಮಕಥಾಮೃತದ ಸಾರವನ್ನು ಶಿಷ್ಯರಿಗೆ ಉಪದೇಶಿಸಿದರು. ಕೊನೆಗೆ ಇದೇ ಕುಟೀರದಲ್ಲಿ ‘ರಾಮತಾರಕಮಂತ್ರ’ವನ್ನು ಜಪಿಸುತ್ತಾ ತಪೋಮಗ್ನರಾಗಿ ವಲ್ಮೀಕದೊಳಗೇ ಸಮಾಧಿಸ್ಥರಾಗಿ ರಾಮೈಕ್ಯರಾದರು. ಬ್ರಹ್ಮನ ಅನುಗ್ರಹದಿಂದ ರಾಮಾಯಣ ಕಥೆ ಇಂದಿಗೂ ದೇಶ ವಿದೇಶಗಳಲ್ಲಿಯೂ ನಾನಾ ಸ್ವರೂಪ ಹೊಂದಿ ಪ್ರಚಾರದಲ್ಲಿದೆ.
ಇಂದು ವಾಲ್ಮೀಕಿ ಜಯಂತಿಯಂದು, ನಾವು ಅವರಿಂದ ಕಲಿಯಬೇಕಾದ ಪಾಠ —
* ಪರಿವರ್ತನೆ ಸಾಧ್ಯ — ಯಾರು ಎಷ್ಟೇ ತಪ್ಪು ಮಾಡಿದರೂ, ಆತ್ಮಜಾಗೃತಿಯಿಂದ ಹೊಸ ಜೀವನ ಆರಂಭಿಸಬಹುದು.
* ಹೃದಯ ಶುದ್ಧವಾದಾಗ ಪಾಪ ಪಾವಿತ್ರ್ಯವಾಗುತ್ತದೆ, .
ಮನಸ್ಸಿನ ಕತ್ತಲೆ ಹೊರಟರೆ ದೇವತೆಗಳು ನಮ್ಮೊಳಗೆ ನೆಲೆಸುತ್ತಾರೆ.
* ತಪಸ್ಸು ಎಂದರೆ ಕೇವಲ ಅರಣ್ಯದಲ್ಲಿರುವುದು ಅಲ್ಲ, ಮನಸ್ಸಿನ ಅಶುದ್ಧಿಯನ್ನು ಶೋಧಿಸುವುದೇ ನಿಜವಾದ ತಪಸ್ಸು.
* ಶಬ್ದಕ್ಕಿಂತ ಶುದ್ಧ ಭಾವ ದೊಡ್ಡದು.
ವಾಲ್ಮೀಕಿಯ ಕಾವ್ಯ ಕೇವಲ ಸಾಹಿತ್ಯವಲ್ಲ — ಅದು ಸತ್ಯದ ದಾರಿದೀಪ.
* ಅಹಂಕಾರ ನಾಶವಾದರೆ ಜ್ಞಾನೋದಯ ಪ್ರಾರಂಭವಾಗುತ್ತದೆ.
ರತ್ನಾಕರ ಕಳ್ಳನಿಂದ ವಾಲ್ಮೀಕಿ ಋಷಿಯಾಗಿದ್ದೇ ಇದರ ಉದಾಹರಣೆ.
* ಪಶ್ಚಾತ್ತಾಪ ದುರ್ಬಲತೆ ಅಲ್ಲ; ಅದು ಪರಿವರ್ತನೆಯ ಮೊದಲ ಹೆಜ್ಜೆ.
* ನಿಜವಾದ ಧರ್ಮವೆಂದರೆ – ಇತರರ ನೋವು ಅರಿಯುವುದು ಮತ್ತು ದಯೆಯಿಂದ ನಡೆದುಕೊಳ್ಳುವುದು.
* ಮಾನವನ ಶಕ್ತಿಯು ಅವನೊಳಗಿನ ಅರಿವಿನಲ್ಲಿ ಇದೆ, ಅವನ ಭೂತಕಾಲದಲ್ಲಿ ಅಲ್ಲ.
* ಅಂಧಕಾರವನ್ನು ಶಪಿಸುವುದಕ್ಕಿಂತ, ಒಂದು ದೀಪ ಹಚ್ಚುವುದು ಮುಖ್ಯ.
ವಾಲ್ಮೀಕಿ ಅದನ್ನೇ ಮಾಡಿದರು.
* ಒಬ್ಬನ ಜೀವನ
ಕಾವ್ಯವಾಗುವುದು, ಅವನು ತನ್ನ ದೋಷಗಳ ಮೇಲೆ ಜಯ ಸಾಧಿಸಿದಾಗ.
ಕೂಜಂತಂ ರಾಮ ರಾಮೇತಿ
ಮಧುರಂ ಮಧುರಾಕ್ಷರಮ್ |
ಆರುಹ್ಯ ಕವಿತಾಶಾಖಾಂ
ವಂದೇ ವಾಲ್ಮೀಕಿ ಕೋಕಿಲಮ್ ||
ಸ್ವರ್ಣ ಕುಂದಾಪುರ

