ಕೃತಿಯ ಹೆಸರು : ಮೊದಲ ಹೆಜ್ಜೆ( ಮಕ್ಕಳ ಕಥೆಗಳು)
ಲೇಖಕಿ : ರಿಷಿಕಾ ಆರ್.ದೇವಾಡಿಗ
ಮಕ್ಕಳ ಆಸಕ್ತಿಗಳಿಗೆ ಸರಿ ಹೊಂದುವ ಕಥೆಗಳನ್ನು ಮಕ್ಕಳೆ ಬರೆಯುವುದು ಸೂಕ್ತ ಎಂಬ ವಾದ ಆರಂಭವಾಗಿ ದಶಕಗಳೇ ಸಂದಿವೆ. ಮಕ್ಕಳಿಗೆ ಮೌಲ್ಯ ಸಂದೇಶಗಳೂ ಬೇಕು, ಮನೋರಂಜನೆಯೂ ಬೇಕು ಮತ್ತು ಬುದ್ದಿವಂತಿಕೆ-ಧೈರ್ಯ-ಸಾಹಸಗಳನ್ನು ಅವರಲ್ಲಿ ಪ್ರೋತ್ಸಾಹಿಸುವ ಅಂಶಗಳೂ ಬೇಕು. ಈ ಎಲ್ಲ ಗುಣಗಳನ್ನೂ ಒಳಗೊಂಡ ಕಥೆಗಳನ್ನು ನಾವು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ರಿಷಿಕಾ ಆರ್.ದೇವಾಡಿಗ ಅವರ ‘ಮೊದಲ ಹೆಜ್ಜೆ’ ಎಂಬ ಕಥಾಸಂಕಲನದಲ್ಲಿ ಕಾಣುತ್ತೇವೆ.
ಇಲ್ಲಿ ಒಟ್ಟು ಇಪ್ಪತ್ತಾರು ಪುಟ್ಟ ಪುಟ್ಟ ಕಥೆಗಳಿವೆ. ಕಥೆಗಳು ಮುಖ್ಯವಾಗಿ ಏನು ಹೇಳುತ್ತವೆ ಅನ್ನುವುದನ್ನು ಲೇಖಕಿ ಇಲ್ಲಿ ಪುಟ್ಟ ಬಾಕ್ಸ್ ನಲ್ಲಿ ಕೊಟ್ಟಿರುವುದು ವಿಶೇಷ . ಮಕ್ಕಳು ಆರಂಭದಲ್ಲಿ ಹಿರಿಯರ ಉಪದೇಶವನ್ನು ಅವಗಣಿಸಿ ತಪ್ಪು ಮಾಡುವುದು ಮತ್ತು ಯಾವುದೋ ಸಂದರ್ಭದಲ್ಲಿ ನಡೆಯುವ ಘಟನೆಯಿಂದ ಉಂಟಾಗುವ ಅನಾಹುತದಿಂದಾಗಿ ತಮ್ಮ ತಪ್ಪಿನ ಅರಿವಾಗಿ ತಿದ್ದಿಕೊಂಡು ಒಳ್ಳೆಯವರಾಗಿ ಬದಲಾಗುವ ಕಥೆಗಳು ಇಲ್ಲಿವೆ. ಹಕ್ಕಿಯ ಸ್ವಾತಂತ್ರ್ಯ, ಅರಿವು, ರವಿಯ ಪರಿವರ್ತನೆ, ಪಿಂಕಿ ಮತ್ತು ಪುಟ್ಡು ಈ ವರ್ಗಕ್ಕೆ ಸೇರಿದ ಕಥೆಗಳು. ಮೊಬೈಲ್‌ನ ಅತಿಯಾದ ಬಳಕೆಯಿಂದಾಗುವ ಅನಾಹುತಗಳ ಕಥೆಗಳೂ ಇಲ್ಲಿವೆ. ಪ್ರಾಣಿ ಪಕ್ಷಿಗಳಿಗೆ ತೊಂದರೆ ಕೊಡುವುದು, ಅವುಗಳನ್ನು ಬೇಟೆಯಾಡುವುದು, ಗುರಿಯಿಟ್ಟು ಹೊಡೆಯುವುದು, ಕೊನೆಗೆ ಅವುಗಳು ಗಾಯಗೊಂಡು ರಕ್ತ ಹರಿಸುತ್ತ ಒದ್ದಾಡುವುದನ್ನು ನೋಡಲಾಗದೆ ಪಶ್ಚಾತ್ತಾಪ ಪಡುವ ಕಥೆಗಳೂ ಇವೆ. ಪಂಚತಂತ್ರದ ಕಥೆಗಳಲ್ಲಿರುವಂತೆ ನೈತಿಕ ಸಂದೇಶ ಸಾರುವಂಥ ಪ್ರಾಣಿಗಳ ಕಥೆಗಳೂ ಇವೆ. ತರಗತಿಯಲ್ಲಿ ಇತರರನ್ನು ಕೀಳಾಗಿ ಕಾಣುತ್ತ ಅಹಂಕಾರ ಪಟ್ಟು ಕೊನೆಗೆ ಇತರರಲ್ಲೂ ಇರುವ ಪ್ರತಿಭೆಯನ್ನು ನೋಡಿದಾಗ ಅವರಲ್ಲಿ ಅರಿವು ಮೂಡುವಂತ ಕಥೆಗಳೂ ಇವೆ.
ಇಲ್ಲಿರುವ ಕಥೆಗಳೆಲ್ಲವೂ ಮಕ್ಕಳ ಅಲೋಚನೆಯ ಮಟ್ಟಕ್ಕೇ ಇರುವುದು ಮಕ್ಕಳ ಓದಿನ ಆರಂಭಕ ಹಂತಕ್ಕೆ ಹೇಳಿ ಮಾಡಿಸಿದ ಹಾಗಿದೆ. ದೋಷರಹಿತವಾದ ಭಾಷೆ ಮತ್ತು ನಿರೂಪಣಾ ಶೈಲಿ ಸರಳ-ಸುಂದರವಾಗಿದ್ದು ಸುಖವಾಗಿ ಓದಿಸಿಕೊಂಡು ಹೋಗುತ್ತದೆ . ಒಟ್ಟು ಕಥೆಗಳನ್ನು ಗಮನಿಸಿದರೆ ರಿಷಿಕಾ ಮುಂದೆ ಒಳ್ಳೆಯ ಲೇಖಕಿ ಆಗಬಲ್ಲಳು ಅನ್ನಿಸುತ್ತದೆ. ಅವಳಿಗೆ ಅಭಿನಂದನೆಗಳು ಮತ್ತು ಹಾರ್ದಿಕ ಶುಭಾಶಯಗಳು.
ಡಾ.ಪಾರ್ವತಿ ಜಿ.ಐತಾಳ್

