Home » ಶ್ರೀ ಪುಂಡಲೀಕ ನಾಯಕರ ಆತ್ಮ ಕಥನ ‘ಭಾವಸ್ಮ್ರತಿ’  
 

ಶ್ರೀ ಪುಂಡಲೀಕ ನಾಯಕರ ಆತ್ಮ ಕಥನ ‘ಭಾವಸ್ಮ್ರತಿ’  

by Kundapur Xpress
Spread the love

ಬೈಂದೂರು ಸಮೀಪದ  ಉಪ್ಪುಂದ   ಸೇವಾ ಸಹಕಾರಿ ಸಂಘದಲ್ಲಿ ೩೯ ವರ್ಷಗಳಷ್ಟು ದೀರ್ಘಕಾಲ ಸೆವೆ ಸಲ್ಲಿಸಿ ೨೦೧೧ರಲ್ಲಿ ನಿವೃತ್ತರಾಗಿ ನಂತರ ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡ ಲೇಖಕ ಶ್ರೀ ಪುಂಡಲೀಕ ನಾಯಕರ ಆತ್ಮ ಕಥನ ‘ಭಾವಸ್ಮ್ರತಿ’  ಹಲವು ರೀತಿಗಳಿಂದ ಒಂದು ಮಹತ್ವದ ಕೃತಿ.  ಒಮ್ಮೆ  ಅವರ ಸ್ನೇಹಿತರೊಬ್ಬರು ಮಾತನಾಡುತ್ತ’ ನಿಮ್ಮ ಆತ್ಮ ಕಥೆಯನ್ನು ಬರೆಯಿರಿ’ ಎಂದಾಗ ‘ಇಲ್ಲ.ನಾನೇನು ಮಹಾ ಸಾಧನೆ ಮಾಡಿದ್ದೇನೆ?’ ಎಂದು ಇವರು ಉತ್ತರಿಸಿದರಂತೆ. ಆತ್ಮಕಥೆ ಬರೆಯಲು ಅರ್ಹತೆ ಎಂದಿದೆಯೆ? ಸಾಹಿತ್ಯ, ಸಂಗೀತ, ಚಿತ್ರಕಲೆ, ವಿಜ್ಞಾನ, ಸಂಶೋಧನೆ, ಕ್ರೀಡೆ- ಹೀಗೆ ಯಾವುದಾದರೂ ಕ್ಷೇತ್ರದಲ್ಲಿ ಪ್ರತಿಭಾವಂತರಾಗಿದ್ದು ಅನೇಕ ಸಾಧನೆಗಳನ್ನು ಮಾಡಿದವರು ಮಾತ್ರ ಆತ್ಮಕಥೆ ಬರೆಯಲು ಅರ್ಹರೆ? ಖಂಡಿತಾ ಅಲ್ಲ. ಆತ್ಮಕಥೆಯಲ್ಲಿ ಹೇಳಿದ ಅಂಶಗಳು ಸಮಾಜಕ್ಕೆ ಮಾದರಿಯಾಗಬೇಕು. ಹಾಗೆ ಮಾದರಿಯಾಗುವ ರೀತಿಯಲ್ಲಿ ಜೀವನ ಮೌಲ್ಯಗಳನ್ನು ರೂಪಿಸಿಕೊಂಡು ಸಮಾಜದ ಏಳಿಗೆಗೆ ತಮ್ಮಿಂದ ಸಾಧ್ಯವಾದಷ್ಟು ಕೊಡುಗೆಗಳನ್ನಿತ್ತ ಯಾರೇ ಆದರೂ ಆತ್ಮ ಕಥೆ ಬರೆದು ಇತರರಿಗೆ ಸ್ಫೂರ್ತಿಯಾಗಬಲ್ಲರು. ಪುಂಡಲೀಕ ನಾಯಕರ ಆತ್ಮಕಥನ ಮಾದರಿಯಾಗುವುದು ಈ ನಿಟ್ಟಿನಿಂದ. ಅವರ ಜೀವನದುದ್ದಕ್ಕೂ ನಡೆದ ಪ್ರಮುಖ ಘಟನೆಗಳನ್ನೂ,  ತಂದೆ, ತಾಯಿ, ಒಡಹುಟ್ಟಿದವರು,   ಬಂಧು ಬಳಗದವರೊಂದಿಗಿನ ಒಡನಾಟವನ್ನೂ     ತಾವು  ಜೀವನದಲ್ಲಿ ಪಡೆದ ಯಶಸ್ಸಿಗೆ ಕಾರಣರಾದ ವ್ಯಕ್ತಿಗಳನ್ನೂ, ಅವರನ್ನು ಭೇಟಿಯಾದ ಸಂದರ್ಭ-ಸನ್ನಿವೇಶಗಳನ್ನೂ, ಅವರು ತಮ್ಮ ಮೇಲೆ ಬೀರಿದ ಪ್ರಭಾವವನ್ನೂ , ಜೀವನದಲ್ಲಿ ತಾವು ಅನುಭವಿಸಿದ ಕಷ್ಟ-ನಷ್ಟಗಳನ್ನೂ ಯಾವುದೇ ಮುಚ್ಚುಮರೆಯಿಲ್ಲದೆ  ಅವರು ಇಲ್ಲಿ ಬಯಲಾಗಿಸಿದ್ದಾರೆ. ಪ್ರಾಮಾಣಿಕತೆಯೇ ಈ ಆತ್ಮಕಥನದ ಜೀವಾಳ.
     ಬಾಲ್ಯದ ಸ್ಮೃತಿಗಳು,  ಕೃಷಿಕ ಕುಟುಂಬದಲ್ಲಿ ಕಳೆದ ಕಡು ಬಡತನದ ದಿನಗಳು,  ಶಾಲಾ ಬದುಕು, ಶಿಕ್ಷಣಕ್ಕಾಗಿ ಪಟ್ಟ ಕಷ್ಟಗಳು, ಕೆಲಸವನ್ನು ದೊರಕಿಸಿಕೊಳ್ಳುವಲ್ಲಿ ಎದುರಿಸಿದ ಅಡೆತಡೆಗಳು, ಆರಂಭದ ದಿನಗಳಲ್ಲಿ ಅನುಭವಿಸಿದ ಆತಂಕಗಳು, ವೃತ್ತಿ ಜೀವನದ ಸೋಲು ಗೆಲವುಗಳು, ಸ್ನೇಹಿತರ ಜತೆಗೆ ಕಳೆದ ಆನಂದದ ಕ್ಷಣಗಳು, ನಿವೃತ್ತಿಯ ನಂತರ ಅದೇ ಕ್ಷೇತ್ರದಲ್ಲಿ ಮತ್ತೆ ಸಿಕ್ಕಿದ ಅವಕಾಶಗಳು, ಚಿಕ್ಕಂದಿನಿಂದಲೂ ಅಂತರಂಗದೊಳಗೆ ಕಾಪಿಟ್ಟುಕೊಂಡಿದ್ದ ಸಾಹಿತ್ಯಾಸಕ್ತಿಯ ಜ್ಯೋತಿಯನ್ನು ಜೀವನದ ಸಂಧ್ಯಾಕಾಲದಲ್ಲಿ ಬೆಳೆಸಿಕೊಂಡ ಪರಿ-ಎಲ್ಲದರ ಸಿಂಹಾವಲೋಕನ ಈ ಕೃತಿಯಲ್ಲಿದೆ.
   ತೀವ್ರ ಬಡತನ ಕಾಡುತ್ತಿದ್ದರೂ ‘ದೇಹಿ’ಎಂದು ಬಂದವರಿಗೆ ‘ನಾಸ್ತಿ’ ಎನ್ನದ ಸಂಸ್ಕಾರವಂತ ಕುಟುಂಬದಲ್ಲಿ ಹುಟ್ಟಿ ಬೆಳೆದವರು ಪುಂಡಲೀಕರು. ಮೇಲು ಜಾತಿಯವರು   ತಮ್ಮ ಜಾತಿಯ ಆಚರಣೆಗಳ ಬಗ್ಗೆ ಬಹಳ ಕಟ್ಟುನಿಟ್ಟಾಗಿದ್ದ ಅಂದಿನ ದಿನಗಳಲ್ಲಿ ಅವರ ಅಮ್ಮ ನಾರಾಯಣ ಪೂಜಾರಿ ಎಂಬ ಬಡ ಹುಡುಗನಿಗೆ ಮನೆಯಲ್ಲೇ ಆಶ್ರಯವಿತ್ತು,   ಆಚಾರಕ್ಕಿಂತಲೂ ಮಾನವೀಯತೆ ದೊಡ್ಡದು ಎಂದು ತಿಳಿದು ಪಾಪದ ಆ ಹುಡುಗನ   ಹೊಟ್ಟೆ-ಬಟ್ಟೆ ನೋಡಿಕೊಡಿದ್ದರು. ಪುಂಡಲೀಕನಿಗೂ ಅವನು ಅತ್ಯಂತ ಆಪ್ತ ಗೆಳೆಯನಾಗಿದ್ದ ಅಂದರೆ ಅವರ ಕುಟುಂಬದವರಲ್ಲಿ ಸುಧಾರಣಾ ಮನೋಭಾವ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ತಿಳಿಯಬಹುದು.
    ಮನೆಯಲ್ಲಿ ಕೊನೆಯ ಮಗನಾಗಿದ್ದರಿಂದ ಸಾಕಷ್ಟು ಮುದ್ದು ಮಾಡಿಸಿಕೊಂಡು ‘ಪುಂಡೂ’ ಎಂದು ಕರೆಸಿಕೊಂಡವರು.  ಅದರೆ ಶಾಲೆಗೆ ಸೇರಿದಾಗ ಆರಂಭದಲ್ಲಿ ಓದಿನಲ್ಲಿ ಜಾಣರಲ್ಲದಿದ್ದ ಇವರು ಮೇಷ್ಟ್ರುಗಳ ಗಮನವನ್ನು ಅಷ್ಟಾಗಿ ಸೆಳೆದಿರಲಿಲ್ಲ. ಆದರೆ ಪ್ರೌಢಶಾಲೆಯ ಹಂತಕ್ಕೆ ಹೋದಾಗ ತನ್ನ ಪ್ರತಿಭೆ-ಪ್ರಾಮಾಣಿಕತೆಗಳಿಂದ ಪುಂಡಲೀಕನು ಮೇಷ್ಟ್ರುಗಳ ಕಣ್ಮಣಿಯಾಗಿದ್ದೂ ನಿಜ. ಮುಂದೆ ತನ್ನ ಜಾಣ್ಮೆ ಮತ್ತು ಸ್ನೇಹಪರ ಸ್ವಭಾವದಿಂದ ಒಳ್ಳೊಳ್ಳೆ ಗೆಳೆಯರನ್ನು ಸಂಪಾದಿಸುತ್ತ ಹೋದ. ಕುಟುಂಬದ ಸ್ನೇಹವಲಯ, ಗುರುವೃಂದದವರ ಬೆಂಬಲಗಳಿಂದ ಓದು ಮುಗಿಯುತ್ತಲೇ ಕೆಲಸಕ್ಕೆ ಸೇರುವುದೂ ಸಾಧ್ಯವಾಯಿತು.  ಅಲ್ಲಿ ಶ್ರದ್ಧೆಯಿಂದ ದುಡಿದು ಅದ್ಭುತ ಪ್ರಗತಿಯನ್ನು ಸಾಧಿಸಿ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ (CEO) ಸ್ಥಾನಕ್ಕೆ ಏರುವಂಥಾದ್ದು ಮತ್ತು ಅನೇಕ ಯುವ ಉದ್ಯೋಗಿಗಳಿಗೆ ತರಬೇತಿ-ಸಲಹೆಗಳನ್ನು ನೀಡುವ ಕೆಲಸ ಮಾಡಿದ್ದು ಅವರ ಬಹುದೊಡ್ಡ ಸಾಧನೆ. ಒಂದು ಸಾರ್ವಜನಿಕ ಸಂಸ್ಥೆ  ಹೇಗೆ ಹಂತ ಹಂತವಾಗಿ ಬೆಳೆಯ ಬಹುದು ಅನ್ನುವುದನ್ನು ಲೇಖಕರು ಈ ಕೃತಿಯಲ್ಲಿ ಎಳೆ ಎಳೆಯಾಗಿ ವರ್ಣಿಸಿದ್ದಾರೆ. ಆರಂಭದಲ್ಲಿ ಬಹಳ ಕಡಿಮೆಯಾಗಿದ್ದ ಸಂಬಳವು  ಅವರು ನಿವೃತ್ತಿಯ ಅಂಚಿಗೆ ಬಂದಾಗ  ತನ್ನ ಸಿಬ್ಬಂದಿಯನ್ನು ಕುಟುಂಬ ಸಮೇತ   ಸಂಬಳ ಸಹಿತ ರಜೆ   ಮಾತ್ರವಲ್ಲದೆ ಭತ್ಯೆಯನ್ನೂ  ಕೊಟ್ಟು ದಕ್ಷಿಣ ಭಾರತದ ಪ್ರವಾಸ ಹೋಗಲು ಅನುವು ಮಾಡಿ ಕೊಟ್ಟಿದ್ದನ್ನು ಎಣಿಸಿದರೆ ಅದರ ಅಗಾಧತೆ ಏನೆಂದು ಅರಿವಾಗುತ್ತದೆ. ತನಗೆ ಅನ್ನ ನೀಡಿದ ಸಂಸ್ಥೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಪುಂಡಲೀಕರ ಹೃದಯ ವೈಶಾಲ್ಯ ಬಹಳ ದೊಡ್ಡದು.

  ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಬರೆಯದಿದ್ದರೂ ಮನಸ್ಸು ಮಾಗಿದ ವಯಸ್ಸಿನಲ್ಲಿ  ಅತ್ಯಂತ ಅಲ್ಪಕಾಲದಲ್ಲಿ ಅವರು  ಬರೆದ ಕವನಗಳು ಓದುಗರ ಮನಸ್ಸನ್ನು ಗೆದ್ದು ಅವರಿಗೆ ಅನೇಕ ಪ್ರಶಸ್ತಿಗಳನ್ನು ತಂದವು. ಈ ಪ್ರಶಸ್ತಿಗಳು  ಅವರ ಬರೆಯುವ ಉತ್ಸಾಹವನ್ನು ಹೆಚ್ಚಿಸಿ ಅವರು ಇನ್ನಷ್ಟು ಚಟುವಟಿಕೆಯಿಂದ ಇರುವಂತೆ ಮಾಡಿರುವುದು ಸಂತೋಷ ಪಡಬೇಕಾದ ಸಂಗತಿ. ಮಾಡಿದ ಸಾಧನೆಗಳು ‘ ಎನಗಿಂತ ಕಿರಿಯರಿಲ್ಲ’ ಎಂಬ ವಿನಯವಂತಿಕೆಯನ್ನು ಹೆಚ್ಚಿಸಿದವೇ ಹೊರತು ಅಹಂಕಾರ ಅಥವಾ ಅಲ್ಪತೃಪ್ತಿ ಪಡುವಂತೆ ಮಾಡಲಿಲ್ಲ. ಇದು    ಇತರರಿಗೆ    ಸ್ಫೂರ್ತಿ ನೀಡಬಲ್ಲ ಒಂದು ಮಾದರಿ ವ್ಯಕ್ತಿತ್ವವೇ ಹೌದು.
      ಪುಂಡಲೀಕರ ಜೀವನೋತ್ಸಾಹ ಮತ್ತು ಧನಾತ್ಮಕ ಚಿಂತನೆಗಳನ್ನು ಮೆಚ್ಚಲೇ ಬೇಕು. ಜೀವನದಲ್ಲಿ ತಾವು ಎದುರಿಸಿದ ಎಡರು-ತೊಡರುಗಳಿಗೆ ಅವರು ಯಾರನ್ನೂ ದೂಷಿಸುವುದಿಲ್ಲ. ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ಒಬ್ಬರು ಕಟ್ಟುನಿಟ್ಟಾದ ಮೇಷ್ಟ್ರು  ತನ್ನ ಪಕ್ಕದಲ್ಲಿದ್ದ ಹುಡುಗನು ತನ್ನ ಮೇಲೆ ವಿನಾಕಾರಣ ಆರೋಪಿಸಿದಾಗ ಹೊಡೆಯುವ ಸಂದರ್ಭ ಬಂದಿತ್ತಂತೆ.‌ ಆದರೆ ‘ಸತ್ಯ ಹೇಳಿದರೆ ಬಿಡುತ್ತೇನೆ’ ಎಂದ ಮೇಷ್ಟ್ರು ಪುಂಡಲೀಕರು ತಾನು ತಪ್ಪು ಮಾಡಿದ್ದು ಹೌದು’ ಎಂದು ಸುಳ್ಳು ಹೇಳಿದ ಕಾರಣ ಹೊಡೆಯಲಿಲ್ಲವಂತೆ.    ನೊಂದುಕೊಳ್ಳಬೇಕಾದ ಪ್ರಸಂಗವದು. ಆದರೆ ಅವರು ಇವತ್ತು ಕೂಡಾ   ತನ್ನ ಬಗ್ಗೆ ಸುಳ್ಳು ದೂರು ಹೇಳಿದ ಹುಡುಗನ ಬಗ್ಗೆ ಏನೂ ಃಏ ೞದೆ ವಿಷಯವನ್ನು ನಿರ್ಲಿಪ್ತತೆಯಿಂದ ಹೇಳುತ್ತಾರೆ.  ಹಾಗೆಯೇ ಕೆಲಸಕ್ಕೆ ಸೇರಿದ ಕಾಲದಲ್ಲಿ ಅವರು ತರಬೇತಿ ಮುಗಿಸಿ ಬರುವಷ್ಟರಲ್ಲಿ ಅವರಿದ್ದ ಜಾಗಕ್ಕೆ ಬೇರೆಯವರನ್ನು ತೆಗೆದುಕೊಂಡು ಅವರಿಗೆ ರೂ.೨೦೩ ಇದ್ದ ಸಂಬಳವನ್ನು ರೂ.೧೨೫ ಮಾಡಿದ್ದು – ಇವೆಲ್ಲದರ ಹಿಂದೆ ಯಾರ್ಯಾರದ್ದೋ ಕೈವಾಡ ಇರಬಹುದು. ಅದರೆ ಪುಂಡಲೀಕ ಅವರು ಯಾರನ್ನೂ ದೂಷಿಸುವುದಿಲ್ಲ. ಬದುಕನ್ನು ಅವರು ಯಾವ ರೀತಿ ಸ್ವೀಕರಿಸುತ್ತಾರೆ ಅನ್ನುವುದಕ್ಕೆ ಇದು ಸಾಕ್ಷಿ.
    ಪುಂಡಲೀಕ ಅವರ ಆತ್ಮಕಥನದಲ್ಲಿ ಸಿಂಹಪಾಲು ಇತರರ ಕುರಿತಾದ ಒಳ್ಳೆಯ ಮಾತುಗಳನ್ನು ಆಡುವುದಕ್ಕೆ ಮೀಸಲಾಗಿದೆ. ಹೌದು. ನಮ್ಮ ಬದುಕು ಯಾವಾಗಲೂ ನಮ್ಮದ್ದು ಮಾತ್ರ ಆಗಿರುವುದಿಲ್ಲ. ನಮ್ಮ ಸುತ್ತಮುತ್ತ ಇರುವವರು, ನಮ್ಮನ್ನು ಪ್ರೀತಿಸಿದವರು, ನಮಗೆ ಒಳ್ಳೆಯದನ್ನು ಬಯಸಿದವರು, ನಮಗೆ ಉಪಕಾರ ಮಾಡಿದವರು, ನಮ್ಮ ಯಶಸ್ಸಿಗೆ ಕಾರಣರಾದವರು ಎಲ್ಲರೂ ನಮ್ಮ ಬದುಕಿನ ಅವಿಭಾಜ್ಯ ಅಂಗಗಳು. ಅವರನ್ನು ಬಿಟ್ಟರೆ ನಮ್ಮ ಆತ್ಮಕಥನ ಅಪೂರ್ಣ. ಪುಂಡಲೀಕ ಅವರು ತಮ್ಮ ತಾಯಿ-ತಂದೆ, ಅಕ್ಕಂದಿರು, ಅಣ್ಣಂದಿರು, ಬಂಧು-ಬಳಗದವರು ಮಾತ್ರವಲ್ಲದೆ ವಿದ್ಯಾಬುದ್ಧಿಗಳನ್ನಿತ್ತ ಪ್ರತಿಯೊಬ್ಬ ಗುರುಗಳ ವ್ಯಕ್ತಿತ್ವವನ್ನು ಚಿತ್ರಿಸುತ್ತಾರೆ. ತನಗೆ ಮಾರಣಾಂತಿಕ ಕಾಯಿಲೆ ಬಂದಾಗ ಚಿಕಿತ್ಸೆ ನೀಡಿ   ಗುಣಪಡಿಸಿದ ಡಾಕ್ಟರುಗಳನ್ನು ನೆನಪಿಸಿಕೊಳ್ಳುತ್ತಾರೆ. ಉದ್ಯೋಗ ದೊರಕಿಸಿಕೊಳ್ಳುವಲ್ಲಿ ಶಿಫಾರಸು ಮಾಡಿದವರು, ಸಹಕಾರ ನೀಡಿದವರು, ಸಲಹೆ ಕೊಟ್ಟವರು, ನಿವೃತ್ತಿಯ ನಂತರ  ತಮ್ಮ ಸಮುದಾಯಕ್ಕೆ ಸಂಬಂಧ ಪಟ್ಟ ಚಟುವಟಿಕೆ ಮತ್ತು ದೇವಸ್ಥಾನದ   ಧಾರ್ಮಿಕ ಕೆಲಸಗಳಲ್ಲಿ ತೊಡಗಿಕೊಂಡಾಗ ಜತೆಗೂಡಿದವರು, ಸಾಹಿತ್ಯ ರಚನೆ ಮಾಡುವಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಎಲ್ಲರೂ ಇವರ ದಾಖಲೆಯ ಪರಿಧಿಯೊಳಗೆ ಸೇರಿಕೊಳ್ಳುತ್ತಾರೆ.‌ಅವರಲ್ಲಿ ಅನೇಕರ ಕುರಿತು ಸುದೀರ್ಘವಾಗಿ ಒಂದೊಂದು ಸ್ವತಂತ್ರ ಲೇಖನವಾಗುವಷ್ಟು ಸಮಗ್ರ ವ್ಯಕ್ತಿಚಿತ್ರಣವನ್ನೇ ಕೊಟ್ಟುಬಿಟ್ಟಿದ್ದಾರೆ. ಎಳೆಯ ಹುಡುಗನಾಗಿದ್ದ ದಿನಗಳಿಂದ ಹಿಡಿದು ಇಲ್ಲಿಯ ತನಕವೂ ಪ್ರತಿಯೊಬ್ಬರ ಹೆಸರುಗಳನ್ನೂ ವಿವರಗಳನ್ನೂ ಖಚಿತವಾಗಿ ನೆನಪಿಟ್ಟುಕೊಂಡು ಬರೆಯಬೇಕಾದರೆ ಅವರ ನೆನಪಿನ ಶಕ್ತಿ ಎಷ್ಟು ಅಗಾಧವಿರಬೇಡ. !!! ಕೆಲವು ಘಟನೆಗಳು,  ಅವು ಸಂಭವಿಸಿದ ದಿನಾಂಕಗಳು,. ಕೆಲವರನ್ನು ಭೇಟಿಯಾದ ಸಂದರ್ಭಗಳು, ಆಗ ಅವರು ಆಡಿದ ಮಾತುಗಳು-ಎಲ್ಲವನ್ನೂ ಕರಾರುವಾಕ್ಕಾಗಿ ಹೇಳುವ ಇಂಥ ಆತ್ಮಕಥನ ಪ್ರಾಯಶಃ ‘ನ ಭೂತೋ ನ ಭವಿಷ್ಯತಿ ‘ಅನ್ನಬಹುದು. ಇದು ಭಾವಸ್ಮೃತಿ ಮಾತ್ರವಲ್ಲ,  ‘ಕಂಪ್ಯೂಟರ್ ಮೆಮರಿ’ ಕೂಡಾ ಹೌದು. ಎ.ಎಸ್.ಎನ್.ಹೆಬ್ಬಾರ್ ಹೇಳುವ ಹಾಗೆ ಅಂದಿನ ಕಾಲಕ್ಕೆ ಸಂಬಂಧಿಸಿದ ಸಾಮಾಜಿಕ,  ಐತಿಹಾಸಿಕ, ಆರ್ಥಿಕ, ಸಾಂಸ್ಥಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ ವಿಚಾರಗಳ ಬಗ್ಗೆ  ಅಧ್ಯಯನ ಮಾಡಬಯಸುವವರು ಬಳಸಬಹುದಾದ ಒಂದು ಪರಾಮರ್ಶನ ಗ್ರಂಥವೂ ಹೌದು.
      ೨೮೮  ಪುಟಗಳ ಈ ಕೃತಿಯಲ್ಲಿ ೨೦೬ನೇ ಪುಟದ ನಂತರ ಪುಂಡಲೀಕ ನಾಯಕರ ಕೌಟುಂಬಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಭಾವ ಚಿತ್ರಗಳು ಮತ್ತು ಕೆಲವು ಮಂದಿ ಓದುಗರ ಅನ್ನಿಸಿಕೆ-ಅಭಿಪ್ರಾಯಗಳಿವೆ. ಪುಂಡಲೀಕ ನಾಯಕರು ಹೆಚ್ಚು ಬರೆದದ್ದು ಕಾವ್ಯವಾದರೂ  ಗದ್ಯದಲ್ಲೂ ಅವರ ಭಾಷೆ ಮತ್ತು ನಿರೂಪಣಾ ಶೈಲಿ ಸೊಗಸಾಗಿದ್ದು ಸುಖವಾಗಿ ಓದಿಸಿಕೊಂಡು ಹೋಗುತ್ತದೆ.

ಡಾ.ಪಾರ್ವತಿ ಜಿ.ಐತಾಳ್.

 

Related Articles

error: Content is protected !!