ಹುಟ್ಟಿ ಬೆಳೆದ ಹಳ್ಳಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕವಿಲ್ಲದ ದಿನಗಳು, ನಡೆದುಕೊಂಡು ಶಾಲೆಗೆ ಹೋಗುವುದು, ದನಕರುಗಳನ್ನು ಸಾಕುವುದು, ಅಡಿಕೆ ತೋಟದಲ್ಲಿ ಅಪ್ಪ ಅಮ್ಮನಿಗೆ ಸಹಾಯ ಮಾಡುವ ಮಕ್ಕಳು, ವಿಧವೆ ಅಜ್ಜಿಯೋರ್ವರು ತಲೆ ಬೋಳಿಸಿಕೊಂಡು ತಲೆಯ ಮೇಲೆ ಸೀರೆ ಹೊದ್ದುಕೊಂಡು ಇರುವುದು, ಹೀಗೆಲ್ಲ ಇಂದಿನ ಮಕ್ಕಳಿಗೆ ಹೇಳಿದರೆ ಅವರಿಗೆ ಊಹಿಸಲೂ ಅಸಾಧ್ಯವೇನೋ ಎಂಬಂತೆ ಪ್ರಪಂಚ ಬದಲಾಗಿದೆ. ಇಂದಿನ ಮಕ್ಕಳಿಗೆ ಇಂದು ಕಲಿಸಿದ ಪಾಠ ನಾಳೆ ಕೇಳಿದರೆ ಏನು ಕಲಿಸಿದ್ದು??! ಎಂದು ತಲೆಕೆರೆದು ಆಲೋಚನೆ ಮಾಡುವಂಥ ದಿನಗಳಲ್ಲಿ ಲೇಖಕಿಯೋರ್ವರು ತಮ್ಮ ಅಂದಿನ ಬದುಕು, ಮೊದಲ ಸಲ ಶಾಲೆಗೆ ಹೋದ ನೆನಪು, ಅಮ್ಮನ ಸೆರಗು ಹಿಡಿದು ಮಲಗುವ ದಿನಗಳನ್ನು ವರ್ಣಿಸುವಾಗ ಇಷ್ಟೆಲ್ಲ ಅಷ್ಟು ಚಿಕ್ಕವರಿರುವಾಗಲೇ ಬರೆದಿಟ್ಟಿದ್ದರೇನೋ ಎಂಬಂತೆ ನೆನಪು ಮಾಡಿಕೊಂಡು ತಮ್ಮ ಸ್ವಗತ ಹೇಳುವ ಪುಸ್ತಕ ‘ ಅಂತರಂಗದ ಸ್ವಗತ’ ವನ್ನು ಇತ್ತೀಚೆಗೆ ಓದಿದೆ.
ಲೇಖಕಿ ಡಾ.ಪಾರ್ವತಿ ಐತಾಳ್ ಚಿಮಣಿ ದೀಪದಲ್ಲಿ ರಾತ್ರಿ ಕೆಲಸ ಮಾಡಬೇಕಾದೀತೆಂದು ಆದಷ್ಟು ಬೆಳಕಿರುವಾಗಲೇ ತಮ್ಮಮನೆಯ ಕೆಲಸಗಳನ್ನು ಮುಗಿಸಿ ಮನೆಯವರೆಲ್ಲರೂ ಮಲಗಿದರೆ ಅಮ್ಮನಿಗೆ ಆಕಳಿಗೆ ಹಿಂಡಿ ತಯಾರಿಸಿಡುವ ಕೆಲಸ, ಹಾಲಿಗೆ ಹೆಪ್ಪು ಹಾಕುವ ಕೆಲಸ, ಹೀಗೆ ಎಲ್ಲ ಮನೆ ಕೆಲಸಗಳನ್ನು ಮುಗಿಸಿ ಮತ್ತೆ ಮುಂಜಾನೆ ಅಮ್ಮ ಮೊಸರು ಕಡೆಯುವ ಸದ್ದು , ಅಡುಗೆ ಮನೆಯ ಸುಪ್ರಭಾತದಂತೆ ಲೇಖಕಿಯನ್ನು ಎಬ್ಬಿಸುತ್ತಿದ್ದುದನ್ನು ನೆನೆಸಿಕೊಳ್ಳುತ್ತಾರೆ.
ನಾಟಕದಲ್ಲಿ ಆಸಕ್ತರಾಗಿದ್ದರೂ ಬಣ್ಣ ಹಚ್ಚಲು ಒಪ್ಪದ ಅಪ್ಪ,ಅಪ್ಪನನ್ನುಕಾಡಿ ಬೇಡಿ ‘ ಭಕ್ತ ಧ್ರುವ’ ನಾಟಕದಲ್ಲಿ ಉತ್ಥಾನ ಪಾದನ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರೂ ಮನೆಗೆ ಹೋದ ತಕ್ಷಣ ಅಪ್ಪನ ಧ್ವನಿಯಲ್ಲಿ ಅಸಮಾಧಾನ. ಕಾಲೇಜು ಶಿಕ್ಷಣಕ್ಕೆ ‘ಮನೆಯಲ್ಲಿ ಓದಿದ್ದು ಸಾಕು’ ಎಂದು ಆಕ್ಷೇಪಣೆ ಬಂದರೂ ಮನೆಯವರನ್ನು ಒತ್ತಾಯಿಸಿ ಕಾಸರಗೋಡು ಕಾಲೇಜು ಸೇರಿ ,ಅಲ್ಲಿ ಪರಿಸ್ಥಿತಿಗೆ ತಕ್ಕಂತೆ ಮಲಯಾಳ ಕಲಿತು ಮುಂದೆ ಅವರಿಗೆ ತಿಳಿದಿರುವ ೫ ಭಾಷೆಗಳನ್ನು ಬಳಸಿ ಭಾಷಾಂತರ ಮಾಡುವ ಪಂಚಭಾಷಾ ತಾರೆಯಾಗಲು ಸಹಕಾರಿಯಾಯಿತು ಎಂದರೆ ತಪ್ಪಾಗಲಾರದು.
ಮುಂದೆ ಉಪನ್ಯಾಸಕಿಯಾಗಿ, ಲೇಖಕಿಯಾಗಿ ಅವರು ಇಟ್ಟ ದಿಟ್ಟ ಹೆಜ್ಜೆಗಳು,ಅವರು ಪಟ್ಟ ಕಷ್ಟಗಳು ಬಾಳಿನ ಬೇವು ಬೆಲ್ಲದಂತೆ ಅವರ ಲೇಖನಗಳಲ್ಲಿ ನಮ್ಮನ್ನು ಸೆಳೆಯುತ್ತವೆ. ಕಷ್ಟಗಳಿಂದ ಪಾಠ ಕಲಿತು ಹೆದರಿ ಕುಳಿತುಕೊಳ್ಳದೇ ಅವರು ಮುಂದೆ ಸಾಗಿರುವುದರಿಂದಲೇ ಉತ್ತಮ ಲೇಖಕಿಯಾಗಿ ನಮ್ಮ ಮುಂದೆ ತಮ್ಮ ಸ್ವಗತ ಹೇಳಿಕೊಳ್ಳುವಂತಾಯಿತು.
ಮದುವೆಯ ನಂತರವೂ ತಮ್ಮ ಪತಿಯಿಂದ ತಮ್ಮ ವೃತ್ತಿ, ಪ್ರವೃತ್ತಿಗಳಗೆ ಸಿಗುವ ಪ್ರೋತ್ಸಾಹ ಅವರನ್ನು ಇನ್ನಷ್ಟು ಸಾಹಿತ್ಯ ಕ್ಷೇತ್ರಕ್ಕೆ, ಕಾಲೇಜಿನಲ್ಲಿ ನಾನಾ ಚಟುವಟಿಕೆಗಳನ್ನು ನಡೆಸಲು ಉತ್ತೇಜನ ನೀಡಿತು ಎಂದು ಅವರೇ ಹೇಳುವಂತೆ ಅವರೆಷ್ಟು ಪುಣ್ಯವಂತರು ಎನಿಸದಿರದು. ಪುರುಷ ಪ್ರಧಾನ ಸಮಾಜದಲ್ಲಿ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಬದಲಾವಣೆ ಸಾಧ್ಯವೇ ಎಂದು ಹೇಳುತ್ತಾ ದಿನೇದಿನೇ ಬದಲಾದ ಸಮಾಜಕ್ಕೆ, ಮಹಿಳೆಗೆ ಸಿಕ್ಕ ಪ್ರಾಶಸ್ತ್ಯ,ಸಮಾನತೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸುತ್ತಾ ಸಾಗುತ್ತಾರೆ.
೨೦೧೭ರಲ್ಲಿ ಸೇವಾ ನಿವೃತ್ತಿ ಪಡೆದರೂ ಲೇಖನಿಗೆ ಹೊಸ ಚೈತನ್ಯ ನೀಡಿ ಅವರ ಬದುಕಿನ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿ ಉತ್ತಮ ಪುಸ್ತಕಗಳನ್ನು ನಮಗೆ ನೀಡುತ್ತಾ ಬಂದಿರುವ ಅವರ ಸಾಧನೆ ಮಾದರಿಯಾಗಿದೆ.ಅವರಿಗೆ ಕುವೆಂಪು ಭಾಷಾ ಭಾರತಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಶ್ರೀ ಪ್ರಶಸ್ತಿ ಯೂ ಸೇರಿ ಒಟ್ಟು ೨೧ ಕ್ಕೂ ಹೆಚ್ಚು ಪ್ರಶಸ್ತಿಗಳು ಸಂದಿವೆ.ಇನ್ನೂ ನೂರಾರು ಪ್ರಶಸ್ತಿಗಳನ್ನು ಅವರು ಪಡೆಯುವಂತಾಗಲಿ.ಇನ್ನೂ ಹಲವಾರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಲಿ. ಮತ್ತು ಅವುಗಳನ್ನು ಓದುವ ಭಾಗ್ಯ ನಮ್ಮದಾಗಲಿ ಎನ್ನುವುದೇ ನನ್ನ ಆಶಯ.
-ಬರೆಹಗಾರ್ತಿ ಸಾವಿತ್ರಿ ಶ್ಯಾನುಭಾಗ್

