ಕತ್ತಲಿನಿಂದ ಬೆಳಕಿನೆಡೆ ಒಯ್ಯುವ ಬೆಳಕಿನ ಹಬ್ಬ ದೀಪಾವಳಿ. ಕತ್ತಲೆಯನ್ನು ಹೋಗಲಾಡಿಸಿ ಮನೆ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನುಂಟು ಮಾಡುವ ಹಬ್ಬವೇ ಸಡಗರ ಸಂಭ್ರಮದ ದೀಪಾವಳಿ. ದೀಪಗಳ ಹಬ್ಬ ಎಂದು ಖ್ಯಾತಿವೆತ್ತ ದೀಪಾವಳಿಯನ್ನು ಹೊಸ ಬಟ್ಟೆ ತೊಟ್ಟು ದೀಪ ಬೆಳಗಿಸಿ ಸಿಹಿಯನ್ನು ಸವಿಯುವುದಷ್ಟೇ ಅಲ್ಲ. ಈಗಿನ ಯುವ ಪೀಳಿಗೆ ಮತ್ತು ಶಾಲಾ ಮಕ್ಕಳು ಕೂಡ ಈ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆಗಳ ಬಗ್ಗೆ ತಿಳಿಯಲೇಬೇಕು.
ಭಾರತದಲ್ಲಿ ಅತ್ಯಂತ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾದ ದೀಪಾವಳಿಯ ಸಿದ್ಧತೆಗಳು ಶರತ್ಕಾಲದ ಆರಂಭದಿಂದಲೇ ಪ್ರಾರಂಭವಾಗುತ್ತದೆ. ದೀಪಾವಳಿ ದೀಪಗಳ ಹಬ್ಬವಾದುದರಿಂದ ಕಾರ್ತಿಕ ಮಾಸ ಮುಗಿಯುವವರೆಗೂ ಬೆಳಿಗ್ಗೆ ರಂಗೋಲಿ ಹಾಕಿ ಮತ್ತು ಸಂಜೆ ದೀಪಗಳನ್ನು ಹಚ್ಚಲಾಗುತ್ತದೆ ದೀಪಾವಳಿ ದಿನದಂದು ಗಣೇಶ ಮತ್ತು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹರಸಿದ ನಂತರ ಅಯೋಧ್ಯೆಗೆ ಹಿಂದಿರುಗಿದಾಗ ಅಲ್ಲಿನ ಜನರು ದೀಪವನ್ನು ಬೆಳಗಿಸಿ ಸ್ವಾಗತಿಸಿದರಂತೆ.ಅಂದಿನಿಂದ ಪ್ರತಿವರ್ಷ ದೀಪ ಬೆಳಗಿಸಿ ದೀಪಾವಳಿ ಆಚರಿಸಲಾಗುತ್ತಿದೆ.
ದಕ್ಷಿಣದಲ್ಲಿ ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ವಧಿಸಿದ ಗೌರವಾರ್ಥವಾಗಿ ಹಬ್ಬ ಆಚರಿಸಲಾಗುತ್ತದೆ. ಭಗವಾನ್ ವಿಷ್ಣು ಬಲಿರಾಜನ ದಾನದಿಂದ ಸಂತಸಗೊಂಡು ಭೂಮಿಯ ಜನರು ಅವನ ನೆನಪಿಗಾಗಿ ಪ್ರತಿ ವರ್ಷ ದೀಪಾವಳಿ ಆಚರಿಸಲಿ ಎಂದು ವರ ನೀಡಿದನೆಂಬ ಪ್ರತೀತಿ ಇದೆ. ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ. ಜೈನ ಧರ್ಮದಲ್ಲಿ ಮಹಾವೀರನ ಮೋಕ್ಷ ಪ್ರಾಪ್ತಿಯ ದಿನವಾದರೆ, ಬೌದ್ಧರು ಈ ದಿನವನ್ನು ಗೌತಮ ಬುದ್ಧನು 18 ವರ್ಷಗಳ ನಂತರ ಕಪಿಲವಸ್ತುವಿಗೆ ಮರಳಿದ ದಿನವೆಂದು ಬೆಳಕಿನ ಹಬ್ಬವೆಂದು ಆಚರಿಸುತ್ತಾರೆ.
ಪೂರ್ವದಲ್ಲಿ ದೀಪಾವಳಿ ಕಾಳಿ ಪೂಜೆಗೆ ಸಂಬಂಧಿಸಿದ್ದು , ಕಮಲಾತ್ಮಿಕಾ ದೇವಿಯ ಪುನರ್ಜನ್ಮವೆಂದು ಸ್ಮರಿಸುತ್ತಾರೆ. ಒಟ್ಟಿನಲ್ಲಿ ಇದು ದೇಶದಲ್ಲಿ ಹುಟ್ಟಿರುವ ಮೂಲತಃ ಭಾರತೀಯರು, ಬುಡಕಟ್ಟು ಜನಾಂಗದಿಂದ ಹಿಡಿದು ಜೈನರು, ಬುದ್ಧರು, ಸಿಖ್ಖರು, ಹಿಂದುಗಳು, ಕಾಡಿನಿಂದ ಹಿಡಿದು ನಾಡಿನ ಜನರವರೆಗೂ ಆಚರಿಸುವ ಪುರಾತನ ಹಬ್ಬ. ಅಮಾವಾಸ್ಯೆಯು ಅಜ್ಞಾನ ಅಂಧಕಾರದ ಪ್ರತೀಕವಾಗಿದ್ದು, ಯಾರು ದೀಪಾವಳಿಯಂದು ದೀಪದಾನ ಮಾಡುತ್ತಾರೋ, ಅವರು ಅಕಾಲ ಮೃತ್ಯುವಿನಿಂದ ದೂರವಾಗುತ್ತಾರೆ ಎಂಬ ಪ್ರತೀತಿಯೂ ಇದೆ. ದೀಪದಾನ ಮಾಡುವುದೆಂದರೆ, ಜ್ಞಾನ ದಾನ ಮಾಡುವುದು. ನಮ್ಮ ಅಜ್ಞಾನದ ಜೊತೆಗೆ ಇತರರ ಮನಸ್ಸಿನಿಂದ ಅಜ್ಞಾನ ತೊಲಗಿಸಿ ಜ್ಞಾನ ದೀಪವನ್ನು ಬೆಳಗಿಸುವುದು ಸಹ ಅವಶ್ಯಕವಾಗಿದೆ.
ನಮ್ಮ ಋಷಿಮುನಿಗಳು ಈ ಹಬ್ಬಕ್ಕೆ ಉನ್ನತ ಸ್ಥಾನವನ್ನು ನೀಡಿದ್ದಾರೆ. ಬಾಹ್ಯವಾಗಿ ದೀಪ ಬೆಳಗಿಸುತ್ತಾ ಬೆಳಗಿಸುತ್ತಾ, ನಾವು ನಮ್ಮ ಅಂತರಂಗದ ಜ್ಯೋತಿಯನ್ನು ಬೆಳಗಿಸಿಕೊಳ್ಳಲು ಕಲಿಯುತ್ತೇವೆ ಎಂಬ ಭರವಸೆ ಋಷಿ ಮುನಿಗಳಿಗಿತ್ತು. ಆದರೆ ನಾವು ಅದನ್ನು ಮರೆತಿರುವಂತಿದೆ . ಆ ಮಹಾಪುರುಷರ ಸಂಕಲ್ಪವನ್ನು ಪೂರೈಸುವುದರಲ್ಲಿ ನಾವು ನಮ್ಮ ಮುಂದಿನ ಪೀಳಿಗೆಗಳು ಹೆಮ್ಮೆಪಡುವಂತೆ ಜೀವನ ಶೈಲಿಯನ್ನು ಸುಧಾರಿಸಿಕೊಂಡು ಉನ್ನತ ಜೀವನದ ಸಂಕಲ್ಪ ಮಾಡೋಣ.
ದೀಪಾವಳಿ ಹಬ್ಬದ ಶುಭಾಶಯಗಳೊಂದಿಗೆ,