Home » ಬರ್ಬರೀಕ ನಾಟಕ ಒಂದು ವಿಮರ್ಶೆ : ಪಾರ್ವತಿ.ಜಿ ಐತಾಳ್
 

ಬರ್ಬರೀಕ ನಾಟಕ ಒಂದು ವಿಮರ್ಶೆ : ಪಾರ್ವತಿ.ಜಿ ಐತಾಳ್

by Kundapur Xpress
Spread the love

ಕುಂದಾಪುರ : ಇತ್ತೀಚೆಗೆ ಒಳ್ಳೆಯ ನಾಟಕಗಳನ್ನು ನೋಡಲು ಸಾಧ್ಯವಾಗಲಿಲ್ಲ ಎನ್ನುವ ಕೊರತೆಯನ್ನು ನಾನು  ನೋಡಿದ ‘ಬರ್ಬರೀಕ’ ನಾಟಕ ನೀಗಿಸಿತು.‌ JCI ಕುಂದಾಪುರ ತನ್ನ 50 ನೇ ವಾರ್ಷಿಕೋತ್ಸವದ ಅಂಗವಾಗಿ ಬೋರ್ಡ್ ಹೈಸ್ಕೂಲಿನ ಲಕ್ಷ್ಮಿನರಸಿಂಹ ಕಲಾಮಂದಿರದಲ್ಲಿ ನಡೆಯುತ್ತಿರುವ ನಾಟಕ ಸಪ್ತಾಹದ ಎರಡನೆಯ ನಾಟಕವಾಗಿ ಮೂಡಿ ಬಂದ ‘ಬರ್ಬರೀಕ’ ಪ್ರಸಿದ್ಧ ನಾಟಕಕಾರ ಶಶಿರಾಜ ಕಾವೂರ್ ಬರೆದಿದ್ದು ಉಡುಪಿಯ ಪ್ರಸಿದ್ಧ ನಾಟಕ ತಂಡ ಭೂಮಿಕಾ ಹಾರಾಡಿ ಇವರಿಂದ ಪ್ರಸ್ತುತ ಪಡಿಸಲ್ಪಟ್ಟಿತು.

ಅನುಭವಿ ನಿರ್ದೇಶಕ ಬಿ.ಎಸ್. ರಾಮ್ ಶೆಟ್ಟಿ ಇವರ ನಿರ್ದೇಶನ ಸುಮಾರು ಒಂದೂ ಮುಕ್ಕಾಲು ಗಂಟೆಗಳ ಕಾಲ ತುಂಬಿದ ಸಭಾ ಭವನದೊಳಗಿನ ಪ್ರೇಕ್ಷಕರನ್ನು ಹಿಡಿದಿಟ್ಟ ನಾಟಕ

ಪುರಾಣದ ಮರು ಓದು ಅನ್ನುವ ಪರಿಕಲ್ಪನೆಯ ಮೇಲೆ ರಚಿತವಾದ ಈ ನಾಟಕದಲ್ಲಿ ಭೀಮ ಪುತ್ರ ಘಟೋತ್ಕಚನ ಮಗ ಅಪ್ರತಿಮ ವೀರ ಎಳೆಯ ಬಾಲಕ ಬರ್ಬರೀಕನು ಮಹಾಭಾರತ ಯುದ್ಧದ ಸಂದರ್ಭದಲ್ಲಿ ಕೃಷ್ಣನ ಚಾಣಾಕ್ಷ ತಂತ್ರಕ್ಕೆ ಬಲಿಯಾಗುವ ಕಥೆಯಿದೆ. ರಾಜರುಗಳ ನಡುವಣ ಯುದ್ಧಗಳಿಗೆ ಜನಸಾಮಾನ್ಯ ಯೋಧರು ಬಲಿಯಾಗುವ ಕಥೆಯಿದೆ. ತಮ್ಮಷ್ಟಕ್ಕೆ ನಿಸರ್ಗದ ಮಡಿಲಲ್ಲಿ ವಾಸ ಮಾಡುವ ಮುಗ್ಧ ಕಾಡುವಾಸಿಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಂಡು ನಿರ್ಲಕ್ಷಿಸಿ ಅಹಂಕಾರದಿಂದ ಮೆರೆಯುವ ನಾಗರಿಕ ಮಂದಿಯ ಸೋಗಿನ ಕಥೆಯಿದೆ.

ಬರ್ಬರೀಕ, ಹಿಡಿಂಬಿ, ಮೌರ್ವಿ, ಭೀಮ ಹಾಗೂ ಇತರ ಎಲ್ಲ ಕಲಾವಿದರ ಅಭಿನಯ ಮನೋಜ್ಞವಾಗಿತ್ತು. ಕಾಡುಜನರ ನೆಪದಲ್ಲಿ ಬಂದ ಮೇಳದ ನಿರ್ವಹಣೆ ಅದ್ಭುತವಾಗಿ ಮೂಡಿ ಬಂತು.‌ ಪೌರಾಣಿಕ ಕಥೆಗೆ ಚೆನ್ನಾಗಿ ಹೊಂದಿಕೆಯಾಗುವ ಯಕ್ಷಗಾನದ ಹೆಜ್ಜೆಗಳು, ಚೆಂಡೆಯ ತಾಳಾತ್ಮಕ ಸಂಗೀತಗಳು ನಾಟಕದ ಸೌಂದರ್ಯವನ್ನು ಹೆಚ್ಚಿಸಿದ್ದವು. ಅರ್ಥಪೂರ್ಣ ಸಂಭಾಷಣೆಗಳು, ರಂಗ ಸಜ್ಜಿಕೆ, ಸಂಗೀತ, ಹದವಾದ ಬೆಳಕುಗಳು ನಾಟಕದ ಯಶಸ್ಸಿಗೆ ಪೂರಕವಾಗಿ ಬಂದವು

 

Related Articles

error: Content is protected !!