Home » ” ಹೋಳಿಹಬ್ಬ” ಆಚರಣೆಯ ವಿಶೇಷ
 

” ಹೋಳಿಹಬ್ಬ” ಆಚರಣೆಯ ವಿಶೇಷ

by Kundapur Xpress
Spread the love

ಪ್ರತಿಯೊಂದು ಹಬ್ಬವೂ ತನ್ನದೇ ಆದ ಹಿನ್ನೆಲೆ, ಆಚಾರ, ವಿಚಾರಗಳನ್ನು ಹೊಂದಿರುತ್ತದೆ. ಅಂತೆಯೇ ಹೋಳಿ ಹಬ್ಬಕ್ಕೂ ಕೂಡ, ತನ್ನದೇ ಆದ ಹಿನ್ನೆಲೆ ಇದೆ. ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಯನ್ನು ಆಚರಿಸುತ್ತೇವೆ. ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಪ್ರಕಾರ, ವರ್ಷದ ಕೊನೆಯ ಹುಣ್ಣಿಮೆಯಂದು ಆಚರಿಸುವ ಹಬ್ಬವೇ ಹೋಳಿಹಬ್ಬ.

ಈ ಹೋಳಿ ಹಬ್ಬವನ್ನು ಕಾಮನಹಬ್ಬ, ಕಾಮದಹನ, ಹೋಲಿಕಾಹಬ್ಬ ಎಂದು ಕರೆಯುತ್ತಾರೆ. ಉತ್ತರಭಾರತದಲ್ಲಿ ಈ ಹಬ್ಬಕ್ಕೆ ಹೆಚ್ಚು ಮಹತ್ತ್ವವಿದೆ. ಬೃಂದಾವನ ಭಾಗದಲ್ಲಿ ಈ ಹಬ್ಬವನ್ನು ರಾಧಾ-ಕೃಷ್ಣರ ಪ್ರೇಮದ ಕಾಣಿಕೆ ದಿನವೆಂದು ಆಚರಿಸುತ್ತಾರೆ. ಹೀಗೆ ನಾವು ಸಹ ವಿದೇಶಿಗರ ವೇಲೆಂಟೇನ್ಸ್ ಡೇ ಅಬ್ಬರದ ಬದಲು, ಭಾರತೀಯರಾದ ನಾವು ಈ ಕಾಮದಹನ ಅಥವಾ ಹೋಳಿಹಬ್ಬವನ್ನು ಯಾಕೆ “ಪ್ರೇಮದ ದಿನ” ಎಂದು ಆಚರಿಸಬಾರದು ? ವಿಕೃತ ಕಾಮವನ್ನು ಸುಟ್ಟು, ಕಾಮವು ಪ್ರೇಮವಾಗಿ ಮಾರ್ಪಡುವ ಈ ದಿನವೇ ನಮಗೆ ಪವಿತ್ರವಾದ “ಪ್ರೇಮದಿನ” ಏಕೆ ಆಗಬಾರದು ? ಆಗ ಬೃಂದಾವನ ಭಾಗದಲ್ಲಿ ಆಚರಿಸುವ ಪ್ರೇಮದಿನ, ಇಡೀ ದೇಶದ ಪ್ರೇಮ ದಿನವಾಗಿ ಮಾರ್ಪಾಡಾಗುತ್ತದೆ ಎನ್ನುವುದು ನನ್ನ ಭಾವನೆ. ಇದು ಒಂದು ಚಿಂತನದ ವಿಷಯವೇ ಅನ್ನಿಸುತ್ತದೆ ಅಲ್ಲವೇ..?!
ಹೋಳಿಯ ಹಿನ್ನೆಲೆ
ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ಆತ ದುರಹಂಕಾರಿಯೂ ಹಾಗೂ ಕ್ರೂರಿಯೂ ಆಗಿದ್ದ, ತಾರಕಾಸುರ ತನಗೆ ಸಾವು ಬರದಿರಲಿ ಎಂದು ತಪಸ್ಸು ಮಾಡಿದ. ಆಗ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಆಗ ನನಗೆ ಮರಣ ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಎಂಬ ವರವನ್ನು ಕೇಳಿದ. ತಾರಕಾಸುರನ ತಪ್ಪಸ್ಸನ್ನು ಮೆಚ್ಚಿ ಬ್ರಹ್ಮ ವರವನ್ನು ಕೊಡುತ್ತಾನೆ. ಆಗ ತನಗೆ ವರ ಸಿಕ್ಕಿದೆ ಎಂದು ತಾರಕಾಸುರ ಮೆರೆಯುತ್ತಿರುತ್ತಾನೆ. ಇತ್ತ ಭೋಗ ಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ಆಗ ದೇವತೆಗಳು ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ ಅಂದರೆ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದ್ದರು. ಈ ವೇಳೆ ಭೋಗ ಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದ. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸಲ್ಪಡುತ್ತದೆ

ಹೋಳಿಹಬ್ಬಕ್ಕೆ ಇನ್ನೊಂದು ಪುರಾತನ ಕತೆಯಿದೆ. ಹಿರಣ್ಯಕಶ್ಯಪನಿಗೆ ‘ಹೋಲಿಕಾ’ ಎಂಬ ಹೆಸರಿನ ಒಬ್ಬಳು ಸಹೋದರಿ ಇದ್ದಳು. ಹಿರಣ್ಯಕಶ್ಯಪ ಹರಿದ್ವೇಷಿಯಾಗಿದ್ದನು. ರಾಜ್ಯದಲ್ಲಿ ಎಲ್ಲರೂ ಹರನನ್ನೇ ಪೂಜಿಸಬೇಕು ಎಂಬ, ಆದೇಶ ಮಾಡಿದ್ದನು. ಆದರೆ ಆತನ ಮಗ ಪ್ರಹ್ಲಾದ, ವಿಷ್ಣುವಿನ ಪರಮ ಭಕ್ತನಾಗಿದ್ದನ್ನು ಎಷ್ಟೇ ಪ್ರಯತ್ನಪಟ್ಟರೂ ಮಗನಿಂದ ವಿಷ್ಣು ದೇವರ ಆರಾಧನೆಯನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಹಿರಣ್ಯಕಶ್ಯಪ ತನ್ನ ಮಗನನ್ನು ದಂಡಿಸಲು ತೀರ್ಮಾನಿಸಿದನು. ಆಗ ಬೆಂಕಿಯು ಸುಡದಂತೆ ವರವನ್ನು ಪಡೆದಿದ್ದ, ತನ್ನ ತಂಗಿ ಹೋಲಿಕಾಳ ಸಹಾಯವನ್ನು ಪಡೆಯುತ್ತಾನೆ. ಅಗ್ನಿಕುಂಡವನ್ನು ರಚಿಸಿ ಅದರೊಳಗೆ ಹೋಲಿಕಾಳನ್ನು ಕೂರಿಸಿ ತನ್ನ ಮಗನನ್ನು ಆಕೆಯ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುವಂತೆ ತಂಗಿಯಲ್ಲಿ ಕೇಳಿದನು. ಅಣ್ಣನ ಆಜ್ಞೆಯಂತೆ, ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುತ್ತಾಳೆ. ಆದರೆ, ಈ ಪಾಪಕೃತ್ಯವನ್ನು ಹೋಲಿಕಾ ಮಾಡಿದ್ದರಿಂದಾಗಿ ಆಕೆಯ ವರ ನಿಷ್ಪಲವಾಗುತ್ತದೆ. ಇದರಿಂದ ಹೋಲಿಕಾ ಅಗ್ನಿಕುಂಡದಲ್ಲಿ ಸುಟ್ಟು ಬೂದಿಯಾಗುತ್ತಾಳೆ. ಪ್ರಹ್ಲಾದ ಸುರಕ್ಷಿತವಾಗಿ ಬೆಂಕಿಯಿಂದ ಹೊರ ಬರುತ್ತಾನೆ. ಅದಕ್ಕಾಗಿ ಪ್ರತಿ ವರ್ಷ, ಹೋಳಿಯ ಮುನ್ನ ಹಿಂದೂ ಮನೆಗಳಲ್ಲಿ ಹೋಲಿಕಾವನ್ನು ಸುಡುತ್ತಾರೆ.

ಈ ಹಬ್ಬದ ದಿನ ಕಾಮನ ಸುಂದರ ಪ್ರತಿಮೆ ಮಾಡಿ ಶೃಂಗರಿಸಿ, ಊರಿನ ಕಾಮನಕಟ್ಟೆಯ ಮೇಲೆ ಚಪ್ಪರ ಕಟ್ಟಿ ಇಡುತ್ತಾರೆ. ಕಾಮನ ಮುಂದೆ ಮಂಗಳವಾದ್ಯಗಳನ್ನು ಊದುತ್ತಾರೆ. ಪರಸ್ಪರ ಬೈಗುಳ, ಬಣ್ಣದ ನೀರು, ಸಗಣಿ- ಗಂಜಲಗಳನ್ನು ಎರಚಿಕೊಳ್ಳುವ ಪದ್ಧತಿ ಕೆಲವು ಕಡೆ ಇದೆ. ನಂತರ ಕಾಮನಿಗೆ ಬೆಂಕಿ ಹಾಕಿ ಸುಟ್ಟು, ಜನರು ಖುಶಿ ಪಡುತ್ತಾರೆ. ಕಾಮನನ್ನು ಸುಡುವುದು ಎಂದರೆ ಏನರ್ಥ ? ಮನಬಂದಂತೆ ಹರಿಯುವ ಕಾಮನೆಯನ್ನು ಸುಡುವುದು ಎಂದರೆ, ಕಾಮವು ಕಾಮದ ವಿಕೃತರೂಪವನ್ನು ಅಳಿಸಿ, ಅದು ಪ್ರೇಮವಾಗಿ ಅರಳಬೇಕು ಎನ್ನುವುದರ ಸೂಚನೆ.

ಉಲ್ಲಾಸ ತರುವ ಬಣ್ಣಗಳ ಎರಚಾಟದಿಂದ ಬಣ್ಣಗಳ ಸ್ನಾನ ಮಾಡಿ ದೇವರ ಪೂಜೆ ನೆರವೇರಿಸುವುದು ಈ ಹೋಳಿಹಬ್ಬದ ವಿಶೇಷ. ಬಣ್ಣದ ಎರಚಾಟ ಮಾಡುವಾಗ ನಾವು ಆದಷ್ಟು ಕೃತಕ ಬಣ್ಣಗಳನ್ನು ನಿಷೇಧಿಸಬೇಕು. ಆದಷ್ಟು ನೈಸರ್ಗಿಕ ಬಣ್ಣಗಳು ಅಂದರೆ, ಮನೆಯಲ್ಲೇ ತಯಾರಿಸಿದ ಅರಿಶಿನ, ಕುಂಕುಮದ ಹುಡಿ, ಸೇಡಿ ಹುಡಿ, ವಿವಿಧ ಸೊಪ್ಪುಗಳ ರಸದ ನೀರು ಹೀಗೆ ಇನ್ನು ಅನೇಕ ಬಣ್ಣಗಳು ನೈಸರ್ಗಿಕವಾಗಿ ನಮಗೆ ಸಿಗುತ್ತದೆ. ಈ ಕೃತಕ ಬಣ್ಣ ಬಳಸುವುದರಿಂದ ನಮ್ಮ ಆರೋಗ್ಯ ಹದಗೆಡುವುದರ ಜೊತೆಗೆ ಪರಿಸರನಾಶವು ಆಗುತ್ತದೆ.

ಬಣ್ಣದಾಟ ಆಡುವಾಗ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಂದರೆ ಶಾಲಾ-ಕಾಲೇಜು, ಆಸ್ಪತ್ರೆಯ ಹತ್ತಿರ ಧ್ವನಿವರ್ಧಕಗಳನ್ನು ಹಾಕಿಕೊಂಡು ಕುಣಿದು ಬಣ್ಣ ಎರಚಿಕೊಳ್ಳುವುದನ್ನು ನಿಷೇಧಿಸೋಣ. ನಮ್ಮ ಬಣ್ಣದಾಟ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳೋಣ. ಆಗ ಈ ಹಬ್ಬಕ್ಕೆ ಇನ್ನು ಮೆರುಗು ಹೆಚ್ಚು.

 

ಈ ಹಬ್ಬದ ಉದ್ದೇಶ ಇಷ್ಟೇ….

ಕೆಟ್ಟದ್ದನ್ನು ಸುಟ್ಟುಬಿಡುವುದು. ಅಂದರೆ ಕಾಮ, ಕ್ರೋಧ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು ಬಿಡುವುದು. ಅಸುರಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿಹಬ್ಬದ ಆಚರಣೆ ಮಾಡಲಾಗುತ್ತದೆ. “ಸದಾಚಾರವನ್ನು ರೂಢಿಸಿಕೊಳ್ಳುವುದು, ಕೆಡುಕಿಗೆ ಯಾವತ್ತೂ ಸೋಲೇ” ಎಂಬ ಸಂದೇಶವನ್ನು ಸಾರುತ್ತದೆ ಈ ಹಬ್ಬ. ವರ್ಷಪೂರ್ತಿ ಹರ್ಷವನ್ನು ತರಲಿ; ಹೊಸ ವರ್ಷದ ರಂಗು ಮಾಸದಿರಲಿ ಎಂಬುದೇ ಈ ಮನೋರಂಜನೆಯ ಹಬ್ಬದ ಉದ್ದೇಶ.

“ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು. ದುಷ್ಕೃತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ” ಎಂಬ ಸಂದೇಶ ಸಾರದೊಂದಿಗೆ, ದಿವ್ಯಪ್ರೇಮವನ್ನು ಸಾರುವ, ನಮ್ಮೆಲ್ಲರ ಪ್ರೀತಿಯ ಪ್ರೇಮದ ಸಾಕ್ಷಾತ್ಕಾರದ ದಿನ, ಈ ಹೋಳಿ ಹಬ್ಬವಾಗಲಿ ಎಂದು ಬಯಸೋಣ.
ಈ ಹಬ್ಬ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಒಂದುಗೂಡಿಸುತ್ತದೆ ಮತ್ತು ಹಬ್ಬದ ಸಡಗರವನ್ನು ಪ್ರತಿಯೊಬ್ಬರಲ್ಲಿ ತುಂಬುತ್ತದೆ. ಕೆಟ್ಟದ್ದು ಒಳ್ಳೆಯದರ ಮುಂದೆ ತಲೆಬಾಗಲೇಬೇಕು ಎಂಬ ಸಂದೇಶವನ್ನು ಹೋಳಿ ಹಬ್ಬ ಸಾರುತ್ತದೆ. ದುಷ್ಕ್ರತ್ಯಗಳು ದೇವರ ಶಕ್ತಿಯ ಎದುರು ಎಂದಿಗೂ ಜಯವನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ಈ ಹಬ್ಬದ ಸಾರ. ಹೋಲಿಕನಂತೆ ಕೆಟ್ಟ ಶಕ್ತಿಗಳು, ದುಷ್ಟ ಆಲೋಚನೆಗಳು ನಾಶವಾಗಿ ಹೊಸದರ ಪ್ರಾರಂಭದ ಕಡೆಗೆ ಮನುಷ್ಯರು ಹೋಗುತ್ತಾರೆ.
ಜೀವನವು ಎಂದೆಂದಿಗೂ ವರ್ಣಮಯವಾಗಿರಲಿ, ಬಣ್ಣದ ವರ್ಣಗಳು ಜೀವನದಲ್ಲಿ ಸೃಜನಶೀಲತೆ ಮತ್ತು ಹೊಸತನವನ್ನು ತರಲಿ. ಈ ಬಣ್ಣ ನಿಮ್ಮ ಬದುಕಿನಲ್ಲಿ ಎಂದೆಂದೂ ಮಾಸದಿರಲಿ ಎಂದು ಆಶಿಸುತ್ತ, ನಿಮಗೆಲ್ಲರಿಗೂ  ಹೋಳಿ ಹಬ್ಬದ ಶುಭಾಶಯಗಳು

ಸ್ವರ್ಣಾ ಕುಂದಾಪುರ

 

Related Articles

error: Content is protected !!