ಮಹಾತ್ಮ ಗಾಂಧಿಯವರು ಕಂಡ ರಾಮರಾಜ್ಯದ ಕನಸು, ಸ್ವಾಮಿ ವಿವೇಕಾನಂದರು ಕಂಡ ಬಲಿಷ್ಠ ಭಾರತದ ಕನಸು, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ರವರು ಕಂಡ ನವ ಭಾರತ ಸಮಾಜ ನಿರ್ಮಾಣದ ಕನಸು ಕಂಡ ದೇಶ ನಮ್ಮದು. ಈ ಎಲ್ಲ ಕನಸುಗಳು ಸಾಕಾರಗೊಂಡಿದೆಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ…. ಇಂದು! ಮುಂದು!ಎಂದೆಂದೂ…
ಕನ್ನಡ ನಾಡಿನ ಕವಿ, ಚಿಂತಕ ಸಿದ್ದಲಿಂಗಯ್ಯನವರ ಸ್ವಾತಂತ್ರ್ಯದ ಕುರಿತಾದ ಕವನ ಇಂದಿನ ಆಗುಹೋಗುಗಳಿಗೆ ಮತ್ತೆ ಮತ್ತೆ ಬೆಳಕು ಚೆಲ್ಲುತ್ತದೆ.ನಮ್ಮ ಸುತ್ತ-ಮುತ್ತ ನಡೆಯುತ್ತಿರುವ ಸದ್ಯದ ವಿದ್ಯಮಾನಗಳ ಕಡೆ ಕಣ್ಣು ಹಾಯಿಸಿದಾಗ ಅವರು ಬರೆದ “ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ” ಎಂಬ ಗೀತೆ ನಮೆಗೆಲ್ಲ ಆಪ್ತವಾಗುತ್ತದೆ ಆಪ್ಯಾಯಮಾನವಾಗುತ್ತದೆ. ಇವತ್ತು ಕೂಡ ಈ ಗೀತೆ ಪ್ರಸ್ತುತ ಎಂದು ಅನ್ನಿಸುತ್ತದೆ
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು

ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಬಡವನ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ
ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಣವಂತರು ಕೈಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರೂ ಕಾಣದ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
ಯಾರಿಗೆ ಬಂತು ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
ಪೋಲೀಸರ ಬೂಟಿಗೆ ಬಂತು
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ

ಪಾರ್ಲಿಮೆಂಟಿನ ಕುರ್ಚಿಯ ಮೇಲೆ
ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೇಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ?
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?
ಪ್ರಶ್ನೆಯಿಂದಲೇ ಆರಂಭವಾಗುವ ಈ ಕವಿತೆ ಪ್ರಶ್ನೆಯಿಂದಲೇ ಮುಕ್ತಾಯವನ್ನು ಕಂಡು ಕೊಳ್ಳುತ್ತದೆ… ಇಂದಿಗೂ ಈ ಕವಿತೆ ಪ್ರಶ್ನೆ ಕೇಳುತ್ತಲೇ ಇದೆ ನಲವತ್ತೇಳು ಹೋಗಿ 25ಬಂದರೂ ಧೈರ್ಯವಾಗಿ ಕವಿತೆಯ ಪ್ರಶ್ನೆಗಳಿಗೆ ಉತ್ತರಿಸಲು ನಾವು ಅಸಮರ್ಥರಾಗುತ್ತೇವೆ. ಹಲವು

ದಶಕಗಳ ಹಿಂದೆಯೇ ಪ್ರಶ್ನೆಗಳ ಸುರಿಮಳೆಯೊಂದಿಗೆ ಜನಮನಕೆ ಹತ್ತಿರವಾದ ಈ ಕವನ ಅಧಿಕಾರಶಾಹಿ ವ್ಯವಸ್ಥೆಯನ್ನು ಪ್ರಶ್ನಿಸಿ ದೀನ ದಲಿತರ, ಧ್ವನಿ ಕಳಕೊಂಡವರ ಪರವಾಗಿ ವಸ್ತುನಿಷ್ಠ ಧೋರಣೆಯನ್ನು ಹೊರಹೊಮ್ಮುತ್ತದೆ.ಮತ್ತೆ ಮತ್ತೆ ಓದಿದಾಗಲೂ ಕವಿತೆ ಹೊಸ ಹೊಳವುಗಳನ್ನು ನಮಗೆ ನಮಗೆ ಬಿತ್ತರಿಸುತ್ತದೆ.
ಅಂತೆಯೇ ಸ್ವಾತಂತ್ರ್ಯ ಪಡೆಯುವಲ್ಲಿ ನಡೆದ ಹೋರಾಟದ ಹಿಂದೆ ಎಷ್ಟು ನೆತ್ತರು ಹರಿದಿದೆ.. ಎಷ್ಟು ಬಲಿದಾನಗಳಾಗಿವೆ ಎಂದು ಸ್ವಲ್ಪ ಯೋಚಿಸಿದರೆ ಒಮ್ಮೆ ನಡುಕ ಹುಟ್ಟುತ್ತದೆ ಆದರೂ ಸ್ವಾತಂತ್ರ್ಯದ ಕಿಚ್ಚು ರೊಚ್ಚು ದೇಶ ಭಕ್ತರ ಧಮನಿ ಧಮನಿಗಳಲ್ಲಿ ಹರಿದು ಸ್ವಾತಂತ್ರ್ಯದ ಹಣತೆ ಸದಾ ಉರಿಯುವಲ್ಲಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಫಲಶ್ರುತಯೇ ಇಂದಿನ ನಮ್ಮ ಸಂಭ್ರಮದ ಬದುಕು. ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮ್ಮದ್ ಅವರ ಸ್ವಾತಂತ್ರ್ಯ ದ ಹಣತೆ ಎಂಬ ಕವಿತೆ ಸ್ವಾತಂತ್ರ್ಯ ಎಂಬ ಜ್ಯೋತಿ ಪಡೆಯುವಲ್ಲಿ ನಮ್ಮ ಹಿರಿಕರು ಪಟ್ಟ ಹೋರಾಟದ ಮುಳ್ಳಿನ ದಾರಿಯನ್ನು ನಮಗೆ ನೆನಪಿಸುತ್ತದೆ.ಸ್ವಾತಂತ್ರ್ಯ ದ ಹೋರಾಟದ ಮಟ್ಟ ಮತ್ತು ಮಟ್ಟು ಎರಡನ್ನು ನಾವಿಂದು ಅರಿಯಬೇಕಾಗಿದೆ, ಹಾಗೆ ಅರಿಗಳ ಆಕ್ರಮಣಗಳ ಬಗ್ಗೆಯೂ ಅರಿಯಬೇಕಾಗಿದೆ.

ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ
ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದೆ ಜನತೆ
ಎಂತು ಕುಂದಬಹುದು ಎಮ್ಮ ತಾಯ್ನಾಡಿನ ಘನತೆ ||
ಮುಳ್ಳಿನಿಂದ ಅರಿವೆ ಬಿಡಿಸಿದಂತೆ ಬಂತೆ ಮುಕ್ತಿ?
ಹುಲಿಯ ಬಾಯ ಮೇವ ಕಸಿಯುವಂತೆ ಧೀರಶಕ್ತಿ
ಪಡೆಯಿತದನು ಜನತೆ, ಬಾಳ ಬೆಸೆಯೆ ನಾಡ ಭಕ್ತಿ ||
ಸ್ವಾತಂತ್ರ್ಯದ ಜೊತೆಗೆ ಬಂದು ಕೂಡಲಿಲ್ಲ ಗಳಿಕೆ
ವ್ಯಕ್ತಿ ವ್ಯಕ್ತಿ ಬೆವರ ಹೀರಿ ಮರವಾಗಿದೆ ಮೊಳಕೆ,
ಮೇಲೇರಿದ ಹಾಗೆ ಭದ್ರ ಪಾಯವುಂಟು ಗೃಹಕೆ ||
ಸಾಗಿದಂತೆ ಸಲ್ಲುತ್ತಿರಲಿ ಸಾಧನೆಯೆಡೆ ಗಮನ
ಪ್ರಾಣವನ್ನೆ ಪಗಡೆಯಾಡಿದವರಿಗೆಮ್ಮ ನಮನ,
ತಾಯ ಮುಡಿಗೆ ದಿನವು ಏರುತಿರಲಿ ಹೂವು ದವನ ||
ನಮಗೆ ಬಂದಿರುವ ಸ್ವಾತಂತ್ರ್ಯವನ್ನು ಸದಾ ರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ದೇಶದ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿರಬೇಕು. ಧೀರತನದಿಂದ ದೇಶದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಸಾಧನೆಯ ಕಡೆಗೆ ಗಮನವಿರಬೇಕು. ದೇಶಕ್ಕಾಗಿ ಹೋರಾಡಿದ ಹುತಾತ್ಮರಿಗೆ ಗೌರವವನ್ನು ಸದಾ ಸಲ್ಲಿಸಬೇಕು ಎಂಬುದು ಈ ಪದ್ಯದ ಆಶಯವಾಗಿದೆ. ಆದರೆ ಇದಕ್ಕೆ ವೆತಿರಿಕ್ತವಾಗಿ ಇಂದು ಎಲ್ಲವೂ ಆಗುತ್ತಿದೆ,ಯಾವುದು ನ್ಯಾಯ, ಯಾವುದು ಅನ್ಯಾಯ, ಯಾವುದು ಧರ್ಮ ಯಾವುದು ಅಧರ್ಮ ಇದನ್ನು ಅರ್ಥ ಮಾಡಿಕೊಳ್ಳುವುದೇ ಸಾಮಾನ್ಯ ಜನರಿಗೆ ಕಷ್ಟವಾಗಿದೆ.
ಒಂದು ಸಮಾಜ ಸಮೃದ್ಧವಾಗಿ ರೂಪುಗೊಳ್ಳಬೇಕಾದರೆ ಸಮಾಜದಲ್ಲಿ ಬದುಕುವ ಪ್ರತಿ ವ್ಯಕ್ತಿಯೂ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಪ್ರತಿ ವ್ಯಕ್ತಿಗೂ ವಾಕ್ ಸ್ವಾತಂತ್ರ್ಯ, ನೆಮ್ಮದಿಯಿಂದ ಬದುಕುವ ಸ್ವಾತಂತ್ರ್ಯ,,ಉದ್ಯೋಗ ಹೊಂದುವ ಸ್ವಾತಂತ್ರ್ಯ, ಕೆಲಸಕ್ಕೆ ಸರಿಯಾದ ಸಂಬಳ ಪಡೆಯುವ ಸ್ವಾತಂತ್ರ್ಯ
ದೊರಕಬೇಕು ಆಗ ಮಾತ್ರ ಗಣ ತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ…
ಕವಿ ಮೊಗೇರಿ ಗೋಪಾಲ ಕೃಷ್ಣ ಅಡಿಗರ ಕವಿತೆ ಇಲ್ಲಿ ಪ್ರಸ್ತುತ ಎನಿಸುತ್ತದೆ
ಕಟ್ಟುವೆವು ನಾವು ಹೊಸ ನಾಡೊಂದನು,
ರಸದ ಬೀಡೊಂದನು
ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ದಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!
ರಸದ ಬೀಡೊಂದನು…
ದೇಶದೊಳಗೆ ಯುವಕರು ಆ ದೇಶದ ಸಂಪತ್ತಾಗಿರುತ್ತಾರೆ. ಅಂತಹ ಸಂಪತ್ತನ್ನು ಬಳಸಿಕೊಂಡು ಬೆಳೆಸಿಕೊಂಡು ಹೊಸ ನಾಡನ್ನು ಕಟ್ಟಬೇಕು. ಏಕೆಂದರೆ ಯುವಕರ ಬಿಸಿರಕ್ತ ಆರಿಹೋಗುವ ಮುನ್ನ, ಉತ್ಸಾಹದಿಂದ ಕೂಡಿರುವ ಯೌವ್ವನವನ್ನು ಕಳೆದುಕೊಳ್ಳುವ ಮೊದಲೇ ಸಾಹಸದಿಂದ ಕೂಡಿ ಅವರ ಅಂತಸತ್ವ ಬತ್ತಿಹೋಗುವ ಮೊದಲೇ ಅವರನ್ನು ಬಳಸಿಕೊಂಡು ಹೊಸದಾಗಿರುವ, ರಸದಿಂದ ಕೂಡಿರುವ ನಾಡನ್ನು ಕಟ್ಟಬೇಕಿದೆ.ಯುವ ಶಕ್ತಿ ಮನ ಮಾಡಿದರೆ ಎಂತಹ ಮನೆಯನ್ನು ಕಟ್ಟಬಹುದು ಎಂಬ ಸೂಕ್ಷ್ಮತೆಯನ್ನು ಇಲ್ಲಿ ಗಮನಿಸಬಹುದು.ಅಂತೆಯೇ ಇರುವ ಸಂಪತ್ತನ್ನು ಎಲ್ಲರಿಗೂ ಸಮಾನಾಗಿ ನೀಡುವ ಮೂಲಕ ಎಲ್ಲರೂ ಸಹಬಾಳ್ವೆಯನ್ನು ಬದುಕನ್ನು ಕಟ್ಟಿಕೊಂಡು ಆ ಮೂಲಕ ನಾಡು ಸಮೃದ್ಧತೆ ಪಡೆಯಲು ಸಾಧ್ಯವಿದೆ. ನಮ್ಮ ಎದುರಿಗೆ ಬರುವ ಸೋಲುಗಳಾಗಲಿ, ನೋವುಗಳಾಗಲಿ ಬಂದಾಗ ಎದೆ ಗುಂದದೆ ಆತ್ಮ ವಿಶ್ವಾಸದ ದೃಢ ಸಂಕಲ್ಪ ನಮ್ಮ ಮನದಲ್ಲಿ ಮನೆ ಮಾಡಬೇಕು. ನಮ್ಮ ಪ್ರಯತ್ನವಿದ್ದಾಗ ಎಂತಹ ನೋವೇ ಬಂದರೂ ಸಹಿಸಿದಾಗ ನಮ್ಮ ಹೊಸ ನಾಡಿನ ಕಲ್ಪನೆ ಸಾಕಾರಗೊಳ್ಳುತ್ತದೆ. ಸ್ವಾತಂತ್ರ್ಯದ ಈ ಹೊಸ್ತಿಲಲ್ಲಿ ಯುವಕರ ಉತ್ಸಾಹ ಉಲ್ಬಣಗೊಳ್ಳಬೇಕು ಒಟ್ಟಿನಲ್ಲಿ ಸ್ವಾತಂತ್ರ್ಯ ಎಂಬ ಬೆಳಕು ಸದಾ ಬೆಳಗುತ್ತಲೇ ಇರಬೇಕು ಆ ಬೆಳಕು ನಮ್ಮೊಳಗೂ ಬೆಳಗುತ್ತಲೇ ಇರಬೇಕು… ಎಲ್ಲರಿಗೂ ಸಮಾನವಾಗಿ ಸಿಗಬೇಕಾದ ಹಕ್ಕು, ಅವಕಾಶ, ಸ್ವಾತಂತ್ರ್ಯ, ಉದ್ಯೋಗ ಹೀಗೆ ಸಮಾನತೆಯ ಗೀತೆ ಮೊಳಗಿ ಬದುಕಿನ ಭರವಸೆಯು ಬತ್ತದಂತೆ ಅವಕಾಶ ಎಂಬ ಬೀಜ ಬಿತ್ತಿ ಸಮೃದ್ಧಿಯ ಬಾಳು ಮರವಾಗಿ ಹೆಮ್ಮರವಾಗಿ ಬೆಳೆಯವಲ್ಲಿ ಎಲ್ಲರೂ ಕೈ ಜೋಡಿಸೋಣ….ಭಾರತ ಮಾತೆಗೆ ನಮನ ಸಲ್ಲಿಸೋಣ
ಅಲ್ತಾರು ನಾಗರಾಜ್, ಸಾಹಿತಿಗಳು,ಉಪನ್ಯಾಸಕರು
ಜನತಾ ಪಿಯು ಕಾಲೇಜು ಹೆಮ್ಮಾಡಿ

