ಹಿಂದೂ ಪಂಚಾಂಗದ ಪ್ರಕಾರ ಎಲ್ಲಾ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬವೆಂದರೆ ನಾಗರ ಪಂಚಮಿ. ಇದು ಹಬ್ಬಗಳ ಸಾಲಿಗೆ ನಾಂದಿ ಹಾಡುತ್ತದೆ. “ನಾಗರ ಪಂಚಮಿ ನಾಡಿಗೆ ದೊಡ್ಡದು ನಾರಿಯರೆಲ್ಲರೂ ನಲಿದಾರು” ಎಂಬ ಮಾತಿನಂತೆ ನಾರಿಯರೆಲ್ಲರೂ ಶ್ರದ್ಧಾಭಕ್ತಿಯಿಂದ ಪೂಜಿಸುವ ಪ್ರಮುಖವಾದ ಹಬ್ಬ ನಾಗರ ಪಂಚಮಿ.
ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸುವ ಈ ಹಬ್ಬದಂದು, ಎಲ್ಲಾ ಕೆಡುಕುಗಳಿಂದ ನಮ್ಮನ್ನು ರಕ್ಷಿಸು ಎಂದು ಬೇಡಿಕೊಳ್ಳುತ್ತಾ ನಾಗನ ಹುತ್ತಕ್ಕೆ ಹಾಲೆರೆದು, ಚಿನ್ನ-ಬೆಳ್ಳಿ ಅರ್ಪಿಸುವ ಪದ್ಧತಿ ರೂಢಿಯಲ್ಲಿದೆ. ನಾಗರಾಜನಿಗೆ ಯಾರಿಂದಲಾದರೂ ತಿಳಿದೋ ತಿಳಿಯದೆಯೋ ಅಪಚಾರವಾಗಿದ್ದರೆ ತಪ್ಪನ್ನು ಮನ್ನಿಸಿ ಕ್ಷಮಿಸಿ ಬಿಡಲಿ ಎನ್ನುವ ಭಯ ನಿವಾರಣೆಯ ಉದ್ದೇಶ ಒಂದು ಕಡೆಯಾದರೆ, ನಾಗದೇವತೆ ನಮ್ಮ ಸಕಲ ಕಷ್ಟಗಳನ್ನು ನಿವಾರಿಸಿ ಒಳಿತು ಮಾಡಲಿ ಎಂಬ ಮನೋಭಿಲಾಷೆ ಮತ್ತೊಂದು ಕಡೆ. ಜ್ಯೋತಿಷ್ಯದ ಪ್ರಕಾರ, ಸರ್ಪದೋಷ ಪರಿಹಾರವಾಗಿ ಸರ್ಪಸಂಸ್ಕಾರ, ಆಶ್ಲೇಷಬಲಿ ಮಾಡಿದರೆ ಸರ್ಪದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆಯು ಇದೆ. ತುಳುನಾಡಿನ ಕೆಲವು ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಸಂಪ್ರದಾಯಗಳಲ್ಲಿ ನಾಗಾರಾಧನೆಯು ಕೂಡ ಒಂದು. ಹಾವುಗಳನ್ನು ಕೇವಲ ದೇವತೆಯಾಗಿ ನೋಡದೆ ಸಾಮಾಜಿಕ, ಧಾರ್ಮಿಕ ಮತ್ತು ಪರಿಸರ ಕಾರಣಗಳಿಗಾಗಿ ಗೌರವಿಸಬೇಕಾದ ಮತ್ತು ರಕ್ಷಿಸಬೇಕಾದ ಪ್ರಾಣಿಜಾತಿಯಾಗಿಯೂ ನೋಡುತ್ತಾರೆ.
ಅನಂತಂ ವಾಸುಕಿಂ ಶೇಷಂ
ಪದ್ಮನಾಭಂ ಚ ಕಂಬಲಂ
ಶಂಖಪಾಲಂ ಧಾರ್ತರಾಷ್ಟ್ರಂ
ತಕ್ಷಕಂ ಕಾಲಿಯಂ ತಥಾ
ಎಂಬ ಶ್ಲೋಕ ನಾಗದೇವನ ವಿವಿಧ ಜಾತಿಯ ಒಂಬತ್ತು ಹೆಸರುಗಳನ್ನು ಹೇಳುತ್ತದೆ. ಶಿವನ ಆಭರಣವಾಗಿ, ವಿಷ್ಣುವಿನ ಹಾಸಿಗೆಯಾಗಿ, ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ಸಮುದ್ರ ಮಥನ ಕಾಲದಲ್ಲಿ ಮಂದರ ಪರ್ವತವೆಂಬ ಕಡೆಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜದ ಚಿಹ್ನೆಯಾಗಿ ನಾಗರಾಜ ಕಾಣಿಸಿಕೊಳ್ಳುತ್ತಾನೆ.
ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿಯಾಗಿದ್ದಾನೆ. ಪಂಚ ಪ್ರಾಣವೆಂದರೆ ಪಂಚ ಭೌತಿಕತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ.
ಸರ್ಪಗಳು ದುಷ್ಟತನದಿಂದ ಜನರಿಗೆ ಪೀಡೆಯನ್ನು ಉಂಟುಮಾಡುತ್ತಿದ್ದವು. ಇದನ್ನರಿತ ದೇವತೆಗಳು ಬ್ರಹ್ಮನ ಬಳಿ ಹೋಗಿ ವಿನಂತಿಸಿಕೊಂಡರು. ಬ್ರಹ್ಮನ ಸೂಚನೆಯನ್ನು ತಿಳಿದ ಸರ್ಪಗಳು ಒಟ್ಟಾಗಿ ಸೇರಿ ಬ್ರಹ್ಮನಲ್ಲಿ ಪ್ರಾರ್ಥಿಸಿದಾಗ, ಮುಂದೆ ಆಸ್ತಿಕನೆಂಬ ಋಷಿಯು ಸರ್ಪಕುಲ ರಕ್ಷಕನಾಗುತ್ತಾನಲ್ಲದೆ, ಸರ್ಪಗಳು ಅತಲ, ವಿತಲ, ಪಾತಾಳಗಳಲ್ಲಿ ವಾಸಿಸಬೇಕು, ನೋಯದೆ ಕಚ್ಚಬಾರದು ಎಂದು ಆದೇಶಿಸಿದನು.
ವಿಶೇಷತೆಯಿಂದ ಕೂಡಿದ ನಾಗರ ಪಂಚಮಿಯು ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಡಗರದ ಹಬ್ಬ.
ಪಂಚಮಿ ಹಬ್ಬ ಪಂಚಮಿ ಹಬ್ಬ ಉಳ್ದಾವ ದಿನ ನಾಕಾ
ಅಣ್ಣ ಬರಲಿಲ್ಲ ಯಾಕ ಕರಿಯಾಕ ಅಣ್ಣ ಬರಲಿಲ್ಲ ಯಾಕ ಕರಿಯಾಕ
ಎಂಬ ಜಾನಪದ ಹಾಡಿನಂತೆ ಹೆಣ್ಣುಮಕ್ಕಳು ತವರಿನಿಂದ ಅಣ್ಣನ ಬರುವಿಕೆಗಾಗಿ ಕಾಯುತ್ತಾರೆ. ಈ ಹಬ್ಬದಂದು ತಮ್ಮ ತವರಿನಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನಾಗದೇವತೆಯನ್ನು ಪೂಜಿಸಿ, ತವರಿಗೆ ಹಾಗೂ ತಮ್ಮ ಸಹೋದರರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿ ಹುತ್ತಕ್ಕೆ ಹಾಲೆರೆದು ನಾಗನನ್ನು ಭಕ್ತಿಯಿಂದ ಪೂಜಿಸುತ್ತಾರೆ. ಆದುದರಿಂದ ಇದು ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬವೂ ಆಗಿದೆ.
ಸ್ಕಂದ ಪುರಾಣದ ಒಂದು ಕತೆ :
ಹಿಂದೆ ದೇವ ಶರ್ಮಾ ಎಂಬ ಬ್ರಾಹ್ಮಣನಿಗೆ ಒಂದು ಹೆಣ್ಣು ಹಾಗೂ ಎಂಟು ಗಂಡು ಮಕ್ಕಳಿದ್ದರು. ಒಂದು ದಿನ ಗರುಡನಿಂದ ಹೆದರಿಸಲ್ಪಟ್ಟ ನಾಗವೊಂದು ಆ ಕನ್ನಿಕೆಯ ಬಳಿ ಬಂದು ಆಶ್ರಯ ಕೇಳುತ್ತದೆ. ಆಕೆಯು ನಾಗನಿಗೆ ಹಾಲು ಹಣ್ಣುಗಳನ್ನು ಇಟ್ಟು ಭಕ್ತಿಯಿಂದ ಸಾಕುತ್ತಾಳೆ. ಇದಕ್ಕೆ ಪ್ರತಿಯಾಗಿ ಆ ನಾಗವು ದಿನಂಪ್ರತಿ ಒಂದು ತೊಲೆ ಬಂಗಾರವನ್ನು ನೀಡುತ್ತಿರುತ್ತದೆ. ಹೀಗಿರಲು ಒಂದು ದಿನ ಎಂಟು ಮಕ್ಕಳಲ್ಲಿ ಒಬ್ಬನು ತುಂಬಾ ಬಂಗಾರ ಬೇಕೆಂದು ನಾಗನನ್ನು ಪೀಡಿಸಿ ಕಾಲಿನಿಂದ ಒದೆಯುತ್ತಾನೆ. ಇದರಿಂದ ಕೋಪಗೊಂಡ ನಾಗ, ಎಂಟು ಜನರನ್ನು ಕೊಂದು ಹೊರಟು ಹೋಗುತ್ತದೆ. ತನ್ನ ಅಣ್ಣಂದಿರ ಸಾವಿಗೆ ತಾನೇ ಕಾರಣನಾದೆನಲ್ಲ ಎಂದು ಆಕೆಯು ದೇವರ ಎದುರಿನಲ್ಲಿ ಶಿರಚ್ಛೇದನಕ್ಕೆ ಮುಂದಾದಾಗ ನಾರಾಯಣನ ಆದೇಶದಂತೆ ವಾಸುಕಿಯು, ಆಕೆಯ ಸತ್ತ ಅಣ್ಣಂದಿರನ್ನು ಬದುಕಿಸುತ್ತಾನೆ. ಈ ರೀತಿಯಾಗಿ ಅಣ್ಣಂದಿರ ಜೀವವನ್ನು ಪುನಃ ಮರಳಿ ಪಡೆದುಕೊಂಡ ದಿನವೇ ನಾಗರ ಪಂಚಮಿ. ಆದ್ದರಿಂದ ಇದು ಅಣ್ಣ- ತಂಗಿಯರ ಬಾಂಧವ್ಯದ ಸಂಕೇತವಾಗಿದೆ.
ನಾಗಾರಾಧನೆ ಎಂಬುದು ನಮ್ಮ ದೇಹದೊಳಗಿನ ಕುಂಡಲಿನಿ ಶಕ್ತಿ. ಆದ್ದರಿಂದ ನಾಗರ ಪಂಚಮಿ ಎನ್ನುವುದು ಬರಿ ವ್ರತ ಮಾತ್ರವಲ್ಲ, ಸಾಧಕರಿಗೆ ಸಾಧನೆಯ ದಿನವೂ ಹೌದು. ಪರಶುರಾಮ ಸೃಷ್ಟಿಯಾದ ಈ ನಮ್ಮ ನಾಡಿನಲ್ಲಿ ಇದರ ಬಗ್ಗೆ ಬಹಳ ನಂಬಿಕೆ ಇದೆ. ನಾಗರ ಪಂಚಮಿ ಬರೀ ಹಬ್ಬ ಮಾತ್ರವಲ್ಲದೆ, ನಮ್ಮ ಅಂತರಾಳದ ಶಕ್ತಿಯನ್ನು ಅರಿಯುವ, ಭಯವನ್ನು ಜಯಿಸುವ ಮತ್ತು ಪ್ರಕೃತಿಯ ಪ್ರತಿಯೊಂದು ಜೀವಿಯನ್ನೂ ಗೌರವಿಸುವ ಪವಿತ್ರ ಅವಕಾಶ. ಈ ಹಬ್ಬವನ್ನು ಭಕ್ತಿ, ಶ್ರದ್ಧೆ, ನಂಬಿಕೆಯಿಂದ ಆಚರಿಸುವುದರೊಂದಿಗೆ ಅದರ ಆಧ್ಯಾತ್ಮಿಕ ಅಂಶವನ್ನು ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕೆಂಬುದು ಈ ಹಬ್ಬದ ಸಂದೇಶ.
ಒಂದು ಕಾಲಕ್ಕೆ ತುಳುವರೆಲ್ಲ ಸರ್ಪ ಕುಲ ಲಾಂಛನವನ್ನು ಹೊಂದಿದ್ದರಂತೆ!
ತುಳುನಾಡಿನ ನಾಗ ಬನಗಳು ಒಂದು ಪ್ರಾಕೃತಿಕ ವಿಸ್ಮಯ. ಅಸಂಖ್ಯಾತ ಜಾತಿಯ ಮರ-ಗಿಡಗಳು ಜೀವ ಸಂಕುಲಗಳ ನೆಲೆ.
ನಮ್ಮೊಳಗೆ ಸುಪ್ತವಾಗಿರುವ ಶಕ್ತಿ ಹೆಡೆಯೆತ್ತರಿಸಿ ಚಂದ್ರಮಂಡಲದವರೆಗೆ ಊರ್ದ್ವಮುಖವಾಗಿ ಹರಿದು ಸುಧಾಪಾನ ಮಾಡುವ ತಾಂತ್ರಿಕ ಕಲ್ಪನೆಯ ಕುಂಡಲಿನಿಯನ್ನು ಸಂಕೇತಿಸುವುದು ನಾಗ.
ಪುರುಷನೊಬ್ಬನೊಳಗಿರುವ ವಜ್ರವನ್ನು ಹೊತ್ತು ಅಗಣಿತ ಮಾಹಿತಿಯ ಮಹಾಕೋಶವನ್ನು ಗರ್ಭದೊಳಗೆ ನಾಟಿಸಿ ಸಂತಾನಕ್ಕೆ ಇಂಬು ನೀಡುವವನು ನಾಗ
ಆದ್ಯಂತ ರಹಿತವಾದ ಕ್ಷೀರ ಪಥದೊಳಗೆ ಏಣೆ ಇಲ್ಲದಷ್ಟು ಆಕಾಶಕಾಯಗಳನ್ನು ಅವವುಗಳ ಅಕ್ಷದೊಳಗೆ ಬಿಗಿದು ತನ್ನ ಗುರುತ್ವ ಬಲದಿಂದ ಈ ಸೃಷ್ಟಿಯನ್ನು ಮುನ್ನಡೆಸುತ್ತಿರುವವನು ನಾಗ
ಹರಿಯುವ ನೀರು ನಾಗ ಬಳುಕುವ ಬಳ್ಳಿ ನಾಗ ಮೊಳೆಯೊಡೆದು ಕಿರು ನಗುವ ಎರಡೆಳೆಯ ಬೆಳೆಯ ಚಿಗುರು ನಾಗ .. ಸಂಪಿಗೆಯ ಸೋಂಪು ಕೇದಗೆಯ ಘಮಲು.. ಎಳೆ ಹಿಂಗಾರದ ಹೊನಲು ನಾಗ. ತುಳುವರಿಗೆ ನೀರೇ ನಾಗ. ನಾಗನೇ ನಿಧಿ.. ನೀರ ಸುಳಿ ಬಾನ ಸಿಡಿಲು ಭೂಮಿಯೊಡದ ಹುತ್ತದಿಂದತ್ತಿತ್ತ ಹರಿವ ಸರ್ಪ ಸಂಕುಲ ನಾಗ.
ದಟ್ಟ ಕಾಡಿನ ನಟ್ಟ ನಡುವೆ ಪುಟ್ಟ ಮರಿಗಳ ಜೊತೆಗೆ ಕಳಿತ ತರಗೆಲೆಗಳೆಡೆಯಿಂದ ಸರಿದಾಡುತ್ತ ಹಸಿರ ಸೆರೆ ಸರಿಸಿ ನೀರ ಒರತೆಗಳಲ್ಲಿ ಪುಳಕಗೊಳ್ಳುತ್ತಾ ಬನದಲ್ಲಿ ಸಿಗುವ ಅಪಾರ ಜೀವ ವೈವಿಧ್ಯಗಳನ್ನು ಸೇವಿಸುತ್ತಾ ಬೆಚ್ಚಗೆ ಬದುಕಿದ್ದ ನಾಗ ಸಂಕುಲದ ಸ್ಥಿತಿ ಇಂದು ಹೇಗಿದೆ ?
ಬಣ್ಣ ಬಳಿದ ಸುಣ್ಣ ಸುಡುಗಾಡು ರಣರಣ ಬಿಸಿಲಬೇಗೆಗೆ ಬಣ ಗುಟ್ಟುವ ತಗಡಗೂಡು.. ಹಬ್ಬದ ನೆಪದಲ್ಲಿ ಬಂದು ಗೌಜೆಬ್ಬಿಸಿ ಬಿಟ್ಟು ಹೋದ ಗೋಣಿಗಟ್ಟಲೆ ತ್ಯಾಜ್ಯದ ಕೊಳೆತು ನಾರುವ ಗಬ್ಬು.. ಕಬ್ಬಿಣದ ಗೇಟು ಕಾಲಿಟ್ಟಲ್ಲೆಲ್ಲ ಕಾಂಕ್ರೀಟು.
ಬನ್ನಿ ಜೀವಂತಿಕೆಯೇ ಇಲ್ಲದ ಶುಷ್ಕ ಕೃತಕ ನಾಗಬನಗಳನ್ನು ಬದಲಿಸೋಣ.. ಹಸಿರು ಬೆಳೆಸೋಣ ಚೈತನ್ಯ ತುಂಬೋಣ. ಹಸಿರು ಉಳಿದರೆ ನಾಳೆಗೆ ಉಸಿರು ಉಳಿದೀತು..
ಭಾರತೀಯ ವೃಕ್ಷ ವಾಸ್ತು ಪದ್ಧತಿಯಂತೆ ನಮ್ಮ ಬನದ ಸುತ್ತಲೂ ಈ ಗಿಡಗಳನ್ನು ಬೆಳೆಸಿದರೆ ನಾಗ ಕಂಡಲ್ಲಿ ಕಾಣುತ್ತಾನೆ .. ನೆನೆದಲ್ಲಿ ಹರಸುತ್ತಾನೆ. ನಮ್ಮ ಈ ಪೃಥ್ವಿ ಸಸ್ಯ ಶಾಲಿನಿಯಾಗುತ್ತಾಳೆ.
ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಹಾರ್ಧಿಕ ಶುಭಾಶಯಗಳು
ಸ್ವರ್ಣ ಕುಂದಾಪುರ
ಆಪ್ತ ಸಮಾಲೋಚಕಿ

