Home » ನೆಲ್ಸನ್ ಮಂಡೇಲಾ ಅಂತರ್ರಾಷ್ಟ್ರೀಯ ದಿನಾಚರಣೆ
 

ನೆಲ್ಸನ್ ಮಂಡೇಲಾ ಅಂತರ್ರಾಷ್ಟ್ರೀಯ ದಿನಾಚರಣೆ

by Kundapur Xpress
Spread the love

ಜಾಗತಿಕ ವರ್ಣಭೇದ ನೀತಿ ವಿರೋಧೀ ಹೋರಾಟಗಾರ, ಕೋಟ್ಯಂತರ ಜನರಿಗೆ ಸ್ಫೂರ್ತಿ, ನಿಜವಾದ ಅಹಿಂಸಾವಾದಿ 20ನೇ ಶತಮಾನದ ಅದ್ವಿತೀಯ ವ್ಯಕ್ತಿ ಮಂಡೇಲಾ. ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿರುದ್ಧ ಅವರ ಹೋರಾಟ, ಅಸಮಾನತೆ ಹಾಗೂ ಅನ್ಯಾಯದ ವಿರುದ್ಧದ ಹೋರಾಟಗಾರರಿಗೆ ಬಹುದೊಡ್ಡ ಸ್ಫೂರ್ತಿ.

ಶಾಂತಿ ನೊಬೆಲ್ ಪುರಸ್ಕೃತರಾದ ಇವರು ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗಕ್ಕೆ ಸೇರಿದ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಶಾಂತಿ, ಸಮಾನತೆ ಮತ್ತು ಸ್ವಾತಂತ್ರ್ಯದ ಸಂಸ್ಕೃತಿಗೆ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರ ಕೊಡುಗೆ ಗುರುತಿಸಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ 18 ಜುಲೈ 2009ರಲ್ಲಿ ನೆಲ್ಸನ್ ಮಂಡೇಲಾ ಅಂತರ್ರಾಷ್ಟ್ರೀಯ ದಿನ ಎಂದು ಘೋಷಿಸಿತು. ಆ ಆಚರಣೆ ಈಗ 16 ವರ್ಷಗಳನ್ನು ಪೂರೈಸಿದೆ.

ನೆಲ್ಸನ್ ಮಂಡೇಲಾ ಅವರು ಜುಲೈ 18, 1918ರಂದು ದಕ್ಷಿಣ ಆಫ್ರಿಕಾದ ಟ್ರಾನ್ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಟೆಂಬೋ ಬುಡಕಟ್ಟಿನ ನಾಯಕರಾಗಿದ್ದರು. ಮಂಡೇಲಾ ಅವರು ಕಾನೂನು ಪದವೀಧರ. ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಸೇರಿ ನ್ಯಾಷನಲ್ ಪಾರ್ಟಿ ಸರ್ಕಾರದ ವರ್ಣಭೇದ ನೀತಿಗಳ ವಿರುದ್ಧ ಹೋರಾಡಿದರು. ಅದು ಬ್ರಿಟೀಷ್ ಸಾಮ್ರಾಜ್ಯದ ಒಂದು ಭಾಗವಾಗಿತ್ತು. ಅಲ್ಲಿನ ಬಹುಸಂಖ್ಯಾತ ನಿವಾಸಿಗಳು ಕರಿಯರಾಗಿದ್ದರು. ಅಲ್ಲಿನ ನಿಯಂತ್ರಣವನ್ನು ಅಲ್ಪಸಂಖ್ಯಾತ ಬಿಳಿಯರು ಹೊಂದಿದ್ದರು. ಬಿಳಿಯರು ಅಲ್ಲಿನ ಭೂಮಿ, ಸಂಪತ್ತು ಮತ್ತು ಸರ್ಕಾರದ ಮೇಲೆ ನಿಯಂತ್ರಣವನ್ನು ಹೊಂದಿದ್ದರು. ಅಲ್ಲಿನ ಸಾಮಾಜಿಕ ವ್ಯವಸ್ಥೆ ತಾರತಮ್ಯಪೂರಿತವಾಗಿತ್ತು. ಅಲ್ಲಿನ ವ್ಯವಸ್ಥೆಯನ್ನು ದೇಶದ ಕಾನೂನು ಚೌಕಟ್ಟಿಗೂ ತರಲಾಯಿತು. ಅದು ವರ್ಣಭೇದ ನೀತಿ ಎಂಬುದಾಗಿ ಗುರುತಿಸಲ್ಪಟ್ಟಿತು. ದಕ್ಷಿಣ ಆಫ್ರಿಕಾದ ಅಮಾನುಷ, ಸಾಮಾಜಿಕ ವ್ಯವಸ್ಥೆ ತೊಡೆದುಹಾಕಲು ಮಂಡೇಲಾ ಹೋರಾಡಿದರು. ಅವರು ತಮ್ಮ ಜೀವನವನ್ನು ಪ್ರತಿರೋಧ, ಜೈಲುವಾಸ ಹಾಗೂ ನಾಯಕತ್ವಕ್ಕಾಗಿ ಮೀಸಲಿಟ್ಟರು. ಅಂತಿಮವಾಗಿ ದಕ್ಷಿಣ ಆಫ್ರಿಕಾವನ್ನು ವರ್ಣಭೇದ ನೀತಿಯಿಂದ ಹೊರತರಲು ಮತ್ತು ಬಹುಜನರ ಆಳ್ವಿಕೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು.

ಅವರ 27ವರ್ಷದ ಜೀವಾವಧಿ ಸಜೆಯು ಪ್ರಪಂಚದಾದ್ಯಂತ ಜನಜಾಗೃತಿಯನ್ನು ಉಂಟುಮಾಡಿತು. ಆಫ್ರಿಕಾದ ಶಾಂತ ಪ್ರಜಾಪ್ರಭುತ್ವಕ್ಕೆ ಕಾರಣರಾದರು. ಹೀಗೆ ಎಲ್ಲಿಯೂ ಸಹ ಹಿಂಸಾಚಾರವನ್ನು ಮಾಡದೆ ಅಹಿಂಸಾ ನೀತಿಯಿಂದಲೇ ಎಲ್ಲರ ಮನಸ್ಸನ್ನೂ ಗೆದ್ದ ವೀರ ವ್ಯಕ್ತಿ ಮಂಡೇಲಾ. ನಿಜವಾಗಿಯೂ ಕೆಸರಿನಲ್ಲಿ ಅರಳಿದ ‘ಕಮಲ’ ಇವರು. ಯಾವುದೇ ಹವಾನಿಯಂತ್ರಿತ ಕೊಠಡಿಯಲ್ಲಿ ಶ್ರೀಮಂತಿಕೆಯ ಜೀವನದಲ್ಲಿ ಬೆಳೆದ ವ್ಯಕ್ತಿಯಲ್ಲ. ಹಾಗಾಗಿ ನಮ್ಮಂತ ಸಾಮಾನ್ಯ ಜನರಿಂದ ಹಿಡಿದು ದೊಡ್ಡ ಶ್ರೀಮಂತರು, ರಾಜಕಾರಣಿಗಳವರೆಗೂ ಅವರ ನಡೆ ಮಾದರಿಯಾಗಬೇಕು. ನಮ್ಮ ಮುಂದಿನ ಜನಾಂಗ ಇವರ ತತ್ತ್ವ ಅನುಸರಿಸಿದರೆ ಖಂಡಿತವಾಗಿಯೂ ಇಡೀ ವಿಶ್ವ ಅಹಿಂಸಾ ತತ್ತ್ವವನ್ನು ರೂಢಿಸಿಕೊಳ್ಳಬಹುದು.

20ನೇ ಶತಮಾನದಲ್ಲೇ ಇವರು ಅನ್ಯಾಯದ ನಡುವೆ ನ್ಯಾಯದಿಂದ ಬದುಕುವ ಪಾಠವನ್ನು ಕಲಿಸಿ ಎಂದು ತಮ್ಮ ಮಗುವನ್ನು ಶಾಲೆಗೆ ಕಳುಹಿಸುವಾಗ ಶಿಕ್ಷಕರಿಗೆ ಹೇಳಿದ್ದರು. ನಾವು ಸಹ ನಮ್ಮ ಮಕ್ಕಳಿಗೆ ಯಾವುದೇ ಕಾರಣಕ್ಕೂ ಅನ್ಯಾಯದ ದಾರಿಯಲ್ಲಿ ಹೋಗಬೇಡಿ, ನ್ಯಾಯಯುತವಾಗಿ ಬದುಕಿ ಎಂದು ತಿಳಿಹೇಳೋಣ. ಎಷ್ಟು ಕಲಿತರೆ ಏನಂತೆ ನ್ಯಾಯದ ನಡೆ ಇಲ್ಲದಿದ್ದರೆ, ಕಲಿತ ವಿದ್ಯೆ ನಿಷ್ಪ್ರಯೋಜಕ ಎಂದು ತಿಳಿಹೇಳಿದರೆ, ಒಂದು ಹಂತದವರೆಗೆ ಸಮಾಜವನ್ನು ಸುಧಾರಿಸಬಹುದು. ನಿಜವಾದ ನ್ಯಾಯ ಎಲ್ಲಿದೆಯೋ ಅಲ್ಲಿ ಜಯ ಖಂಡಿತ ಎಂಬುದನ್ನು ಸಾರಿ ಹೇಳೋಣ.

ಮಂಡೇಲಾರವರು ಒಬ್ಬ ಕೂಡುಕುಟುಂಬವನ್ನು ತೂಗಿಸಿದ ವ್ಯಕ್ತಿ. 3 ಪತ್ನಿಯರು, 6 ಮಕ್ಕಳು, 20 ಮೊಮ್ಮಕ್ಕಳು ಹಾಗೂ ಹಲವಾರು ಮರಿಮಕ್ಕಳನ್ನು ಹೊಂದಿದ ತುಂಬು ಸಂಸಾರ ಇವರದು. ನೆಲ್ಸನ್ ಮಂಡೇಲಾ ಜೈಲುವಾಸದ 27 ವರ್ಷಗಳ ಶಿಕ್ಷೆಯಲ್ಲಿ 18 ವರ್ಷಗಳ ಕಾಲ ರಾಬೆಯ ಐಸ್ಲೆಂಡಿನ ಕಾರಾಗೃಹದಲ್ಲಿ ಕಳೆದರು. ಅವರು ಅನುಭವಿಸಿದ ಶಿಕ್ಷೆ ಹಾಗೂ ಆ ಸಂದರ್ಭದಲ್ಲಿ ಅವರು ತಳೆದ ಅಭಿಪ್ರಾಯಗಳಿಂದ ಇಡೀ ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗದ ಅದ್ವಿತೀಯ ಮೇರುನಾಯಕನಾಗಿ ಪ್ರಸಿದ್ಧಿಗೆ ಬಂದರು.

ನಾವು ಇಲ್ಲಿ ಚಿಂತಿಸಬೇಕಾದ ವಿಷಯ ಏನೆಂದರೆ ಮನುಷ್ಯನ ಬಣ್ಣ ಯಾವುದಾದರೇನು ? ಅವನ ಗುಣ, ನಡತೆ, ಸರಿಯಾಗಿದ್ದರೆ ನ್ಯಾಯಯುತವಾಗಿದ್ದರೆ ಎಲ್ಲೇ ಇದ್ದರೂ ಹೇಗೆ ಇದ್ದರೂ ಜಯ ಖಂಡಿತ. ಛಲವೊಂದಿದ್ದರೆ ಬಡವನಾದರೇನು ? ಶ್ರೀಮಂತನಾದರೇನು ? ಮಾಡಿದ ಕಾರ್ಯಕ್ಕೆ ಯಶಸ್ಸು ಖಂಡಿತ ಸಿಗಲು ಸಾಧ್ಯ. ಮನುಷ್ಯನಿಗೆ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಂಡೇಲಾರವರು ಸಾಕ್ಷಿ. ಅರ್ಧಕ್ಕೆ ನಿಂತುಹೋಗಿದ್ದ ತಮ್ಮ ವಿದ್ಯಾಭ್ಯಾಸವನ್ನು, ಜೈಲಿನಲ್ಲೇ ಇದ್ದುಕೊಂಡು ಕಾನೂನು ಪದವಿಯನ್ನು ಪೂರೈಸಿದ ವೀರ ಇವರು. ‘ಮನಸಿದ್ದರೆ ಮಾರ್ಗ’ ಎಂಬ ಗಾದೆಗೆ ಸರಿಯಾಗಿ ಹೊಂದಿದ ವ್ಯಕ್ತಿ ಮಂಡೇಲಾ. ತಮ್ಮ ಉತ್ತಮ ಜೀವನದಲ್ಲಿ ಹಲವಾರು ಪ್ರಶಸ್ತಿ ಪಡೆದ ಇವರು ಮುಖ್ಯವಾಗಿ ಭಾರತ ರತ್ನ, ನೋಬೆಲ್ ಶಾಂತಿ, ಅಂತರ್ರಾಷ್ಟ್ರೀಯ ಗಾಂಧಿ ಶಾಂತಿ ಪುರಸ್ಕಾರ ಪಡೆದು ವಿಶ್ವದಾದ್ಯಂತ ಹೆಸರು ಮಾಡಿದರು.

ಒಟ್ಟಾರೆಯಾಗಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿ ನಾವೆಲ್ಲ ಒಂದೇ, ಕರಿಯರು ಬಿಳಿಯರು ಎಂಬ ತಾರತಮ್ಯ ಇಲ್ಲ, ಎಲ್ಲರಿಗೂ ಸಮನಾದ ನ್ಯಾಯ ಸಿಗಬೇಕು ಎಂದು ಹೋರಾಟ ಮಾಡಿ ಎಲ್ಲರಿಗೂ ಒಂದೇ ನ್ಯಾಯ ದೊರಕಿಸಿಕೊಟ್ಟ ಅಹಿಂಸಾವಾದಿ ವಿಶ್ವನಾಯಕ ನೆಲ್ಸನ್ ಮಂಡೇಲಾ
ಭಾರತೀಯರಾದ ನಾವೂ ಎಲ್ಲ ಭೇದ ಮರೆತು ನಾವೆಲ್ಲರೂ ಒಂದೇ ಎಂಬ ಭಾವ ಬೆಳೆಸಿಕೊಳ್ಳೋಣ.. 

ಸ್ವರ್ಣ ಕುಂದಾಪುರ 
ಆಪ್ತ ಸಮಾಲೋಚಕಿ

 

Related Articles

error: Content is protected !!