Home » ಮಾರ್ಚ್‌ 21 : ವಿಶ್ವ ಕಾವ್ಯ ದಿನ
 

ಮಾರ್ಚ್‌ 21 : ವಿಶ್ವ ಕಾವ್ಯ ದಿನ

- ಸ್ವರ್ಣಾ ಕುಂದಾಪುರ

by Kundapur Xpress
Spread the love

ಮೂಡಣದ ಮನೆಯಲ್ಲಿ ದಿನಕರನು ಉದಯಿಸಲು
ಹಾಡುವವು ಬಾನಾಡಿಗಳು ನೋವ ಮರೆತು
ನೋಡುವ ನೋಟಕ್ಕೆ ಅವನಿರದೆ ಬೆಳಕುಂಟೆ
ಹರಿ ಕರುಣ ಭಿಕ್ಷೆ ತಿಳಿ ಹುಲು ಮಾನವ ||

ಮಾನವ ಜನ್ಮವೆಂಬುದು ಹರಿಕರುಣಸಾರ. ಬದುಕಿನ ಎಲ್ಲಾ ಸ್ಥರಗಳಲ್ಲೂ ಬಣ್ಣಗಳಿವೆ, ಭಾವಗಳಿವೆ ರಾಗ, ತಾಳ, ಲಯಬದ್ಧವಾದ ಒಂದು ಕಾವ್ಯವಿದೆ, ಮಾಧುರ್ಯವಿದೆ.
ಪ್ರಕೃತಿಯ ಗುಣಾತ್ಮಕ ಸೌಂದರ್ಯದ ಜೊತೆಗೆ ಕವಿ ನಿರ್ಮಿತವಾದ ಅಂತರಂಗದ ಭಾವ ಸಮ್ಮಿಲನವೇ ಒಂದು ಸೊಗಸಾದ ಕಾವ್ಯ ಸೃಷ್ಟಿ.
ಭಾರತದ ಕಾವ್ಯಪರಂಪರೆ ಅತ್ಯಂತ ಪುರಾತನವಾದ ಘನ ಇತಿಹಾಸವನ್ನೇ ಕಣ್ಮುಂದೆ ತರುತ್ತದೆ. ಆದಿಕಾವ್ಯಗಳಾದ ರಾಮಾಯಣ, ಮಹಾಭಾರತಗಳಂತೂ ನಮ್ಮ ನಾಡಿನ ಆತ್ಮಗಳೆಂದೇ ಹೇಳಬಹುದಾಗಿದೆ.

ಉಚ್ಚಾರಾಂಶದ ಬಡಿತಗಳ ಮೂಲಕ ಮಹಾನ್ ಕವಿಗಳಾದ ಪಂಪ, ರನ್ನ, ಜನ್ನ, ರಾಘವಾಂಕ, ಕಾಳಿದಾಸ ಮುಂತಾದ ಮಹನೀಯರು ಧ್ವನಿಪೂರ್ಣವಾಗಿ ರಚಿಸಿರುವ ಕಾವ್ಯ ಮಾಲಿಕೆ ಇಂದಿಗೂ ಜೀವಂತವಾಗಿದೆ.
ಕಾವ್ಯ, ಕವನಗಳ ಮೂಲಕ ಪದ ಕಟ್ಟಿ ಚಿಂತನೆಗಳನ್ನು ಹರಿಯಬಿಟ್ಟಾಗ ಜನರು ಜಗ ನೋಡುವ ದೃಷ್ಟಿಕೋನವೇ ಬದಲಾಗಿ ಬಿಡುತ್ತದೆ. ಷಟ್ಪದಿಗಳು, ಗಮಕಗಳು, ರಾಮಾಯಣ ಮಹಾಭಾರತದಂತಹ ಮಹಾ ಕಾವ್ಯಗಳು ದನಿಸಿರುವ ದನಿ ಮಾರ್ದನಿಯಾಗಿ ಮಾಧುರ್ಯದ ಒಂದು ಹನಿ ದನಿಯೂ ಕೆಡದೆ ಮನದ ಪುಟಗಳಲ್ಲಿ ಉನ್ನತ ಸ್ಥಾನ ಪಡೆದಿದೆ.
ಕಗ್ಗಗಳು, ತ್ರಿಪದಿಗಳು, ಚೌಪದಿಗಳು, ವಚನಮಾಲಿಕೆಗಳು ಕವಿಮನದ ದನಿಯಾಗಿ ಹೊರಹೊಮ್ಮಿದೆ. ಸೋಮೇಶ್ವರ ಶತಕದಲ್ಲಿನ ನೂರು ಚರಣಗಳು ಬದುಕಿನ ವಿವಿಧ ಆಯಾಮಗಳಿಗೆ, ಭಾವಗಳಿಗೆ ಕನ್ನಡಿ ಹಿಡಿದಂತಿದೆ. ಬದುಕಿನಲ್ಲಿ ಏನಿರಬೇಕು ? ಯಾವುದರಿಂದ ಬದುಕಿಗೆ ಶೋಭೆ ಎಂಬುದನ್ನು ಬಿಂಬಿಸುವ….
ಉಣದಿರ್ಪಾ ಧನಮಿರ್ದೊಡೇನು ಸುತನಿರ್ದೇಂ ಮುಪ್ಪಿನಲ್ಲಾಗದಾ
ಒಣಗಲ್ ಪೈರಿಗೆ ಬಾರದಿರ್ದ ಮಳೆ ತಾ ಬಂದೇನದಾಪತ್ತಿನೊಳ್
ಮಣಿದುಂ ನೋಡದ ಬಂಧುವೇತಕೆಣಿಸಲ್
ಕಾಲೋಚಿತಕ್ಕೈದಿದಾ
ತೃಣವೇ ಪರ್ವತವಲ್ಲವೇ ಹರಹರಾ ಶ್ರೀಚೆನ್ನ ಸೋಮೇಶ್ವರ ||

ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬಹುದಾದ ಇಂತಹ ಅನೇಕ ಸಾಲುಗಳನ್ನು ನಾವಿಲ್ಲಿ ಓದಿ ಅರ್ಥೈಸಿಕೊಂಡು ಜೀವನದಲ್ಲಿ ಪಾಲಿಸಬಹುದಾಗಿದೆ.

ಕಾವ್ಯ ಮತ್ತು ಕವನಕ್ಕಿರುವ ವ್ಯತ್ಯಾಸ ನೋಡುವುದಾರೆ ಇತಿಹಾಸ ಪ್ರಸಿದ್ಧವಾದ ಪಂಚ ಮಹಾಕಾವ್ಯಗಳಾದ ರಘುವಂಶ, ನೈಷಧೀಯ ಚರಿತೆ, ಕಿರಾತಾರ್ಜುನೀಯ, ಶಿಶುಪಾಲ ವಧ, ಕುಮಾರ ಸಂಭವಗಳಂಥಾ ಮಹಾಕಾವ್ಯಗಳಂತೂ ಒಂದು ಅನೂಹ್ಯ ಅನುಭವದ ಜೊತೆಗೆ ಅನುಭಾವವನ್ನೂ ಉಣಬಡಿಸುತ್ತವೆ. ಹಂತ ಹಂತವಾಗಿ ಕಾವ್ಯಗಳು ನವ್ಯ ಯುಗದ ಸೊಬಗನ್ನು ಮೈಗೂಡಿಸಿಕೊಂಡು ಕವನಗಳ ರೂಪದಲ್ಲಿ ಕಾಣಿಸಿಕೊಂಡವು. ಸರಳಾತಿಸರಳ ಪದ ಮಾಲೆಗಳಿಂದ ಹೊಮ್ಮಿದ ಮಾಧುರ್ಯ ಜನಮನದಲ್ಲಿ ನೆಲೆ ನಿಂತು ಹಬ್ಬವಾದ ಕ್ಷಣಗಳಂತೂ ಅವರ್ಣನೀಯ. ಕನ್ನಡದ ಭೂಮಿಕೆಯಲ್ಲಿ ಮತ್ತೆ ಮರಿದುಂಬಿಯಾಗಿ ಹುಟ್ಟಬೇಕೆನ್ನುವ ಆದಿಕವಿ ಪಂಪನ ಮಹದಾಸೆಯ ಫಲವೆಂಬಂತೆ ರಸಋಷಿ ಕವಿಗಳು ಜನ್ಮ ತಳೆದು ಮತ್ತೆ ಕವನಗಳು, ಭಾವಗೀತೆಗಳು, ಜಾನಪದ ಗೀತೆಗಳು, ರಂಗಗೀತೆಗಳು, ಚಲನಚಿತ್ರ, ದೇಶಭಕ್ತಿ ಗೀತೆಗಳು ರಚಿತವಾಗಿ ದೇಶ ಕಟ್ಟುವ ಕೈಂಕರ್ಯಕ್ಕೆ ದನಿಯಾಗಿ ನಿಂತವು.

ದ.ರಾ. ಬೇಂದ್ರೆಯವರಂತೂ ವರಕವಿ ಎಂದೇ ಖ್ಯಾತಿ ಪಡೆದು ಗಂಗೆಯನ್ನೇ ಕೂಗಿ ಕರೆದು ಭಗೀರಥರಾದರು.

ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ ನುಸುಳಿ ಬಾ
ದೇವ ದೇವರನು ತಣಿಸಿ ಬಾ
ದಿಗ್ ದಿಗಂತದಲಿ ಹನಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಇಳಿದು ಬಾ ತಾಯಿ ಇಳಿದು ಬಾ…

ಈ ಕನ್ನಡದ ಕಂದ ಕರೆದನೆಂದ ಮೇಲೆ ಯಾವ ತಾಯಿ ತಾನೇ ಬಾರದೇ ಸುಮ್ಮನಿರಲು ಸಾಧ್ಯ ??!! ರಸಋಷಿ ಕುವೆಂಪುರವರಿಗಂತೂ ಪ್ರಕೃತಿಯ ಮಡಿಲು ಮಲೆನಾಡಿನ ಮದುಮಗಳಂತೆ ಕಂಡಿತು. ತಮ್ಮ ಪ್ರತೀ ಕವನದಲ್ಲೂ ಪ್ರಕೃತಿಯನ್ನು ವರ್ಣಿಸಿ ಉಳಿಸಿ ಬೆಳೆಸಲು ಮಾಡಿದ ದನಿ ಜನಮನವನ್ನು ಸೂರೆಗೊಂಡಿತು.

ಸದ್ದಿರದೆ ಪಸುರೊಡೆದ ಮಲೆನಾಡ ಬನಗಳಲಿ
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು
ಕಲೆಯುತಲೆಯಲೆಯಾಗಿ ತೇಲಿ ಬರಲಿ

ಭಾವಗೀತೆಗಳಂತೂ ಉಸಿರ ಬಡಿತವಾಗಿ, ಮನದ ಮಿಡಿತವಾಗಿ ಭಾವಗಳ ಅಲೆಗಳಿಗೆ ಜೀವ ತುಂಬಿದವು. ಗೋಪಾಲಕೃಷ್ಣ ಅಡಿಗರು, ಡಿ.ವಿ.ಜಿ., ಜಿ.ಪಿ. ರಾಜರತ್ನಂ, ಕೆ. ಎಸ್. ನರಸಿಂಹ ಸ್ವಾಮಿ ಮೊದಲಾದ ಮಹೋನ್ನತ ಕವಿಗಳು ನವ್ಯ ಸಾಹಿತ್ಯ ರಚನೆಯ ಹರಿಕಾರರಾದರು.
ನವೋದಯ ಕಾಲದಲ್ಲಿನ ಕವಿಗಳಾದ ಬಸವಣ್ಣ, ಅಕ್ಕಮಹಾದೇವಿ, ಜೇಡರ ದಾಸಿಮಯ್ಯನಂಥವರಂತೂ ತಮ್ಮ ವಚನ ಸಾಹಿತ್ಯದ ಸಾಲುಗಳಿಂದ ಲೋಕದ ಡೊಂಕುಗಳನ್ನು, ಡಂಭಾಚಾರಗಳನ್ನು ತಿದ್ದಲು ಮಾಡಿದ ಪ್ರಯತ್ನ ಮುಂದಿನ ಪೀಳಿಗೆಯ ಕವಿಗಳಿಗೆ ವರದಾನವಾಯಿತು. ಅಂದಿನ ವಚನಸಾಹಿತ್ಯವಂತೂ ಸಾಮಾಜಿಕ ಕ್ರಾಂತಿಯನ್ನೇ ಹುಟ್ಟು ಹಾಕಿತು. ಕವಿಯೊಬ್ಬನ ಮನದ ಮಧುರ ಮಾಧುರ್ಯ ಭಾವಗಳಿಗೆ ಭೂತ, ವರ್ತಮಾನ, ಭವಿಷ್ಯಗಳಲ್ಲಿ ನೆಲೆ ನಿಲ್ಲುವಂಥ ಶಕ್ತಿಯಿದೆ. ಇಂತಹ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ವಿಶ್ವಸಂಸ್ಥೆ 1999 ಮಾರ್ಚ್ 21ನ್ನು ವಿಶ್ವ ಕಾವ್ಯ ದಿನ ಎಂದು ಘೋಷಿಸಿತು.
ನಾವು ಕೂಡಾ ನಾಡಿನ ಹಿರಿಯ ಕಿರಿಯ ಕವಿಮನಗಳನ್ನು ಆತ್ಮೀಯವಾಗಿ ಗೌರವಿಸೋಣ. ಕಾವ್ಯಪರಂಪರೆಯ ಜುಳುಜುಳು ನಿನಾದ ಯುಗಯುಗಳಲ್ಲೂ‌ ಮಾರ್ದನಿಸುವಂತಾಗಲಿ.
ನಾಡಿನ ಸಮಸ್ತ ಬಾಂಧವರಿಗೆ ವಿಶ್ವ ಕಾವ್ಯ ದಿನದ ಶುಭಾಶಯಗಳು

 

Related Articles

error: Content is protected !!