Home » ನಾಳೆ ಶ್ರೀ ಕ್ಷೇತ್ರ ಆನೆಗುಡ್ಡೆಯಲ್ಲಿ ವಾರ್ಷಿಕ ಬ್ರಹ್ಮರಥೋತ್ಸವ ಸಂಭ್ರಮ
 

ನಾಳೆ ಶ್ರೀ ಕ್ಷೇತ್ರ ಆನೆಗುಡ್ಡೆಯಲ್ಲಿ ವಾರ್ಷಿಕ ಬ್ರಹ್ಮರಥೋತ್ಸವ ಸಂಭ್ರಮ

ನಾಳೆ ಡಿ.05 ಗುರುವಾರ

by Kundapur Xpress
Spread the love

ಕುಂದಾಪುರ : ಕರಾವಳಿ ಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯ ಭಕ್ತಾಭೀಷ್ಟಪ್ರದ ಕ್ಷೇತ್ರ ಎಂದು ಹೆಸರಾಗಿದೆ. ದಿನವೂ ವಿವಿಧೆಡೆಗಳಿಂದ ಸಹಸ್ರಾರು ಮಂದಿ ಇಲ್ಲಿಗೆ ಆಗಮಿಸಿ ವಿನಾಯಕ ದರ್ಶನ ಪಡೆಯುತ್ತಾರೆ. ತಮ್ಮ ಅಳಲನ್ನು ದೇವರೊಂದಿಗೆ ತೋಡಿಕೊಂಡು ಪರಿಹಾರಗಳನ್ನು ಪಡೆದ ನಿದರ್ಶನಗಳೂ ಸಾಕಷ್ಟಿವೆ. ಆದ್ದರಿಂದಲೇ ವಿನಾಯಕನಿಗೆ ಕ್ಷಿಪ್ರಪ್ರಸಾದ ಎಂಬ ಹೆಸರೂ ಇದೆ.ರಾಜ್ಯ, ಹೊರ ರಾಜ್ಯಗಳಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಯಾವ ಅಡೆತಡೆಯಿಲ್ಲದೇ ದೇವರ ದರ್ಶನಕ್ಕೆ ಅನುಕೂಲ ಕಲ್ಪಿಸಲು ಮತ್ತು ಅವರ ಇತರ ಅಗತ್ಯಗಳಿಗಾಗಿ ಇಲ್ಲಿ ವಸತಿ, ಮಧ್ಯಾನ್ಹದ ಪ್ರಸಾದ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗುಡ್ಡದ ಮೇಲಿನ ಎತ್ತರದ ಪ್ರದೇಶ, ಸುಂದರ ಹಸಿರು ಪರಿಸರದ ಈ ಕ್ಷೇತ್ರದ ದರ್ಶನವೇ ಭಕ್ತರಿಗೆ ಒಂದು ಅಲೌಕಿಕ ಆನಂದ ನೀಡುತ್ತದೆ.

ದಟ್ಟ ಅಡವಿ, ಬಂಡೆಗಳ ನಡುವೆ ನಿಂತ ವಿನಾಯಕನಿಗೆ ಚಿಕ್ಕ ಗುಡಿ ಕಟ್ಟಲಾಗುತ್ತದೆ. ಕಾಲ ಸರಿದಂತೆ, ಕ್ಷೇತ್ರ ದರ್ಶಕರ ಸಂಖ್ಯೆ ಬೆಳೆದಂತೆ ಗುಡಿ ವಿಸ್ತಾರವಾಗುತ್ತಾ ಆಗುತ್ತಾ ಇಂದಿನ ಭವ್ಯ ದೇವಾಲಯವೇ ರೂಪುತಳೆಯುತ್ತದೆ.ಪಾಂಡವರು ವನವಾಸ ಕಾಲದಲ್ಲಿ ತೀರ್ಥಕ್ಷೇತ್ರ ಪರ್ಯಟನೆ ಮಾಡುತ್ತಾ, ಗೌತಮ ಕ್ಷೇತ್ರವೆಂಬ ಇಲ್ಲಿಗೆ ಆಗಮಿಸಿದ್ದಾಗ, ಭೀಮಸೇನನು ಪ್ರಜಾಪೀಡಕನಾಗಿದ್ದ ಕುಂಭಾಸುರ ಎಂಬ ರಾಕ್ಷಸನೊಂದಿಗೆ ಹೋರಾಡಿ ಕೊಂದು ಶಾಂತಿ, ಸುರಕ್ಷೆ ನೆಲೆಸುವಂತೆ ಮಾಡುತ್ತಾನೆ. ಅವರ ಹೋರಾಟದಲ್ಲಿ ಸ್ವಯಂ ವಿನಾಯಕ ಆನೆಯ ರೂಪದಲ್ಲಿ ಬಂದು ಭೀಮಸೇನನಿಗೆ ಖಡ್ಗವನ್ನು ಕೊಟ್ಟು ಬಲಾಡ್ಯನಾಗಿದ್ದ ಅಸುರನನ್ನು ವಧಿಸಲು ಹರಸುತ್ತಾನೆ. ಈ ಕಾರಣದಿಂದ ಈ ಕ್ಷೇತ್ರಕ್ಕೆ ಕುಂಭಾಸಿ ಎಂದೇ ಹೆಸರಾಗುತ್ತದೆ. ವಿನಾಯಕನೂ ಸ್ವಯಂಭೂವಾಗಿ ಇಲ್ಲಿ ನೆಲೆ ನಿಲ್ಲುತ್ತಾನೆ ಎಂಬುದು ಪುರಾಣದಿಂದ ತಿಳಿದುಬರುತ್ತದೆ.ದೇವಾಲಯದ ಆಡಳಿತ ಮತ್ತು ಶ್ರೀ ವಿನಾಯಕನ ಪೂಜೆಗಳನ್ನು ಪ್ರತಿಷ್ಠಿತ ಆನೆಗುಡ್ಡೆ ಉಪಾಧ್ಯಾಯ ವಂಶಸ್ಥರು ಅನುವಂಶೀಯ ಹಕ್ಕಿನಿಂದ ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಕೆ. ಶ್ರೀರಮಣ ಉಪಾಧ್ಯಾಯರು ಅನುವಂಶಿಕ ಆಡಳಿತ ಧರ್ಮದರ್ಶಿಯಾಗಿರುವ ಹಾಗೂ ಕೆ. ಪದ್ಮನಾಭ ಉಪಾಧ್ಯಾಯ ಮತ್ತು ಕೆ. ನಿರಂಜನ ಉಪಾಧ್ಯಾಯರು ಅನುವಂಶಿಕ ಜತೆ ಧರ್ಮದರ್ಶಿಗಳಾಗಿರುವ ಧರ್ಮದರ್ಶಿ ಮಂಡಳಿಯು ದೇವಳದ ಉಸ್ತುವಾರಿಯನ್ನು ನಿರ್ವಹಿಸುತ್ತಿದೆ. ಹಿರಿಯ ವಿಶ್ರಾಂತ ಧರ್ಮದರ್ಶಿಗಳಾದ ಕೆ. ಸೂರ್ಯನಾರಾಯಣ ಉಪಾಧ್ಯಯರು ಅಗತ್ಯ ಮಾರ್ಗದರ್ಶಕರಾಗಿರುವರು. ಕೆ. ಕೃಷ್ಣಾನಂದ ಉಪಾಧ್ಯಾಯ ಸಹೋದರರು ಪರ್ಯಾಯ ಅರ್ಚಕ ಸೇವೆಯಲ್ಲಿರುವರು. ಶ್ರೀ ವಿನಾಯಕನ ಭಕ್ತಾಭಿಮಾನಿಗಳು, ದಾನಿಗಳು, ಅರ್ಚಕ – ನೌಕರ ವೃಂದದವರು ಹಾಗೂ ಗ್ರಾಮಸ್ಥರು ದೇವಳದ ಅಭಿವೃದ್ಧಿ, ಭಕ್ತರ ಅನುಕೂಲತೆಗಳಿಗಾಗಿ ಧರ್ಮದರ್ಶಿ ಮಂಡಳಿಗೆ ತುಂಬು ನೆರವು ನೀಡುತ್ತಿದ್ದಾರೆ. ಪರಿಣಾಮವಾಗಿ ಶ್ರೀ ಕ್ಷೇತ್ರವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಶ್ರೀ ಕ್ಷೇತ್ರದ ವತಿಯಿಂದ ವಿವಿಧೆಡೆಗಳ ದೇವಾಲಯಗಳಿಗೆ, ಸ್ಥಳೀಯ ಸರ್ಕಾರಿ ಶಾಲೆಗೆ ಸಹಾಯ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ನೀಡಲಾಗುತ್ತಿದೆ. ಇತ್ತೀಚಿನ ಕೆಲವು ಪ್ರಮುಖ ಅನುಕೂಲತೆಗಳನ್ನು ಹೆಸರಿಸುವುದಾದರೆ, ಸಂಚಾರಿ ಹಾಗೂ ಪ್ರವಾಸಿ ಭಕ್ತರಿಗೆ ಸುಲಭವಾಗಿ ದೇವಸ್ಥಾನದ ಮಾರ್ಗ ಗುರುತಿಸಲು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸ್ವಾಗತಗೊಪುರವನ್ನು ಭಕ್ತರೋರ್ವರ ಸಹಾಯದಿಂದ ನವೀಕರಿಸಲಾಗಿದೆ.ಭಕ್ತರು ಹಾಗೂ ಸೇವಾಕರ್ತರ ಅನುಕೂಲಕ್ಕಾಗಿ ಸಾಮಾನ್ಯ ವಸತಿಗೃಹ ವನ್ನು ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ. ಪರಭಾಷಾ ಹಾಗೂ ಪ್ರವಾಸಿ ಭಕ್ತರಿಗೆ ಅನುಕೂಲವಾಗುವಂತೆ ನವೀನ ಸೇವಾ ಕೌಂಟರ್ ಹಾಗೂ ಬಹುಭಾಷೆಯ ಮಾಹಿತಿ ಕೇಂದ್ರ ತೆರೆಯಲಾಗಿದೆ.
ಎಲ್ಲೆಡೆಯ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಅಧಿಕೃತ ಯೂ ಟ್ಯೂಬ್ ಚಾನಲ್ ಅನ್ನು ಆರಂಭಿಸಲಾಗಿದ್ದು, ಇತ್ತೀಚಿಗೆ ಸಂಗೀತ ವಿದ್ವಾನ್ ಡಾ|ವಿದ್ಯಾಭೂಷಣರಿಂದ ವಿಧ್ಯುಕ್ತವಾಗಿ ಚಾಲನೆಗೊಂಡಿದೆ. ಇದರ ಮೂಲಕ ಶ್ರೀ ಕ್ಷೇತ್ರ ಆನೆಗುಡ್ಡೆಯ ಪ್ರಮುಖ ಕಾರ್ಯಕ್ರಮಗಳು ವಿಶ್ವದಾದ್ಯಂತ ಬಿತ್ತರಗೊಳ್ಳುವುವು.

ಡಿ.5 ರ ಗುರುವಾರ ಅಷ್ಟೊತ್ತರ ಸಹಸ್ರ ನಾಳಿಕೇರ ಗಣಯಾಗ ಮತ್ತು ಬ್ರಹ್ಮ ರಥೋತ್ಸವ ನಡೆಯಲಿವೆ. ಹಬ್ಬದ ಕಾರ್ಯಕ್ರಮಗಳನ್ನು  ನೇರವಾಗಿ ಈ ಚಾನಲ್ ಮೂಲಕ ಬಿತ್ತರಿಸಲಾಗುವುದು.
ಶಿಶು ಪೋಷಣ ಕೊಠಡಿ ಸೌಲಭ್ಯ ಒದಗಿಸಾಲಾಗಿದ್ದು , ಅವಶ್ಯಕತೆ ಇರುವ ಭಕ್ತರು ಬಳಸಿಕೊಳ್ಳಬಹುದಾಗಿದೆ. ಹಿರಿಯ ನಾಗರಿಕರಿಗೆ ಹಾಗೂ ದಿವ್ಯಾಂಗರಿಗೆ ದರ್ಶನ ಹಾಗೂ ಅನ್ನ ಪ್ರಸಾದ ಸ್ವೀಕರಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ದೇವಸ್ಥಾನದ ಪರಿಸರದಲ್ಲಿ, ಸುಮಾರು 1000 ದ್ವಿಚಕ್ರ ಹಾಗೂ 500 ಕಾರ್ ಪಾರ್ಕಿಂಗ್ ನ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲೆಡೆ ಸಿ ಸಿ ಟಿವಿ ಕಣ್ಗಾವಲು, ಭದ್ರತೆ ವ್ಯವಸ್ಥೆಗೊಳಿಸಲಾಗಿದೆ.
ತೀರ್ಥ ಮಂಟಪದ ಮುಂಭಾಗದ ಮುಚ್ಚಿಗೆಗೆ ಅಂದಾಜು 50 ಲಕ್ಷ ವೆಚ್ಚದ ಎರಡನೇ ಹಂತದ ದಾರುಶಿಲ್ಪ ಕೆಲಸ ಶರವೇಗದಿಂದ ಸಾಗುತಿದ್ದು, 2025 ಜನವರಿಯಲ್ಲಿ ಶ್ರೀ ದೇವರಿಗೆ ಸಮರ್ಪಿಸಲಾಗುವುದು. ಈ ಕ್ಷೇತ್ರವು ಗುಡ್ಡದ ಮೇಲಿನ ಪ್ರದೇಶವಾದ್ದರಿಂದ ಇಲ್ಲಿ ನೀರಿಗೆ ದೊಡ್ಡ ಸಮಸ್ಯೆಯಿತ್ತು. ದೇವಳದ ಸಮೀಪ ಪೂರ್ವ ಬಾಗದ ವಕ್ವಾಡಿ ಗ್ರಾಮದಲ್ಲಿ ದಾನಿಗಳ ನೆರವಿನಿಂದ ದೊಡ್ಡ ತೆರೆದ ಬಾವಿಯಿಂದ ಕ್ಷೇತ್ರಕ್ಕೆ ಅಗತ್ಯ ನೀರು ಪೂರೈಕೆಯಾಗುತ್ತಿದ್ದು ಭಾಗಶಃ ಆ ಸಮಸ್ಯೆ ನಿವಾರಣೆಯಾಗಿದೆ.ಶ್ರೀ ವಿನಾಯಕನ ನಿತ್ಯ ಪಂಚಾಮೃತ ಹಾಗೂ ಪಂಚಗವ್ಯಕ್ಕಾಗಿ ಗೋಕುಟೀರದ ನಿರ್ಮಾಣ ಈಗಾಗಲೇ ಪೂರ್ಣಗೊಂಡಿದೆ.
ಯಜ್ಞ ಯಾಗಾದಿಗಳಿಗಾಗಿ ಬೇಕಾಗುವ ಕಟ್ಟಿಗೆ ಸಂಗ್ರಹಾಗಾರದ ಕೊಠಡಿಯನ್ನು ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಪ್ರಸಾದ ತಯಾರಿಕೆ, ವಿಶೇಷ ಸೇವಾಕರ್ತರ ಪ್ರಸಾದ ವಿತರಣೆ, ಮತ್ತು ಹುಂಡಿ ಎಣಿಕೆ ಕಾರ್ಯಗಳಿಗಾಗಿ ದೇವಳದ ಪೂರ್ವ ಭಾಗದಲ್ಲಿ 4 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣದ ಕಾಮಗಾರಿ ಭರದಿಂದ ಸಾಗಿದೆ.
ಪರಿಸರ ಸ್ನೇಹಿ ಸೋಲಾರ್ ಹಾಸುಗಳನ್ನು ಅನ್ನದಾನದ ಕಟ್ಟಡದ ಮೇಲ್ಚಾವಣಿಯಲ್ಲಿ ಹಾಕಲಾಗಿದ್ದು , ವಿದ್ಯುತ್ ಸ್ವಾವಲಂಬಿಯತ್ತ ಕ್ಷೇತ್ರ ಸಾಗುತ್ತಿದೆ. ಭಕ್ತರ ಅನುಕೂಲಕ್ಕಾಗಿ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸ್ನಾನ ಗೃಹ ಹಾಗೂ ಶೌಚಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಹೀಗೆ ನೂರಾರು ವೈವಿಧ್ಯತೆಗಳೊಂದಿಗೆ ಅಭಿವೃದ್ಧಿಯ ಪಥದಲ್ಲಿ ಸಾಗಿರುವ ಶ್ರೀ ಕ್ಷೇತ್ರವು ಬಯಸಿ ಬಂದ ಭಕ್ತರಿಗೆ ಶಾಂತಿ ನೆಮ್ಮದಿ ನೀಡುವ ಕೇಂದ್ರವಾಗಿ ಬೆಳೆಯುತ್ತಿದೆ. ದಿನದಿನವೂ ಜನರನ್ನು ಸೆಳೆಯುತ್ತಿರುವ ಆನೆಗುಡ್ಡೆ ಕ್ಷೇತ್ರದಲ್ಲಿ ಇದೀಗ ವಾರ್ಷಿಕ ಬ್ರಹ್ಮರಥೋತ್ಸವದ ಸಂಭ್ರಮ ಮನೆ ಮಾಡಿದೆ

 

Related Articles

error: Content is protected !!