ಉಡುಪಿ : ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಕಪಿಲ ಮಹರ್ಷಿಗಳ ಸಾನ್ನಿಧ್ಯವಾದ ಗಾಯತ್ರಿ ಧ್ಯಾನಪೀಠದಲ್ಲಿ ನೂತನವಾಗಿ ನಿರ್ಮಿಸಲಾದ ಶಿಲಾಮಯ ಗುಡಿಯಲ್ಲಿ ನಡೆದ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನಡೆದ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠೆೆ ಪ್ರಯುಕ್ತ ರವಿವಾರ ಪಂಚವಿ ವಿಂಶತಿ ದ್ರವ್ಯ ಮೀಳಿತ ಏಕೋತ್ತರ ತ್ರಿಶತ (301) ಬ್ರಹ್ಮಕುಂಭಾಭಿಷೇಕ ನೆರವೇರಿತು.
ಗಣೇಶ ಸರಳಾಯರ ನೇತೃತ್ವದಲ್ಲಿ, ಗೌರವ ಸಲಹೆಗಾರ ವೇಮೂ ವಿಖ್ಯಾತ್ ಭಟ್ ಸಹಭಾಗಿತ್ವದಲ್ಲಿ ಪ್ರಾಜ್ಞ ಋತ್ವಿಜರ ಸಹಕಾರದೊಂದಿಗೆ ಎಲ್ಲ ಧಾರ್ಮಿಕ ವಿಧಿವಿಧಾನಗಳು ಶಿಸ್ತುಬದ್ಧವಾಗಿ ನೆರವೇರಿತು.
ಬ್ರಹ್ಮಕಲಶೋತ್ಸವ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ, ದಂಪತಿ ಆರಾಧನೆ, ಆಚಾರ್ಯ ಪೂಜೆ, ಕನ್ನಿಕಾ ಪೂಜೆ ನಡೆಸಲಾಯಿತು. ಶಾಸ್ತ್ರೋಕ್ತವಾಗಿ ಗಾಯತ್ರಿ ದೇವಿಯ ಪ್ರತಿಷ್ಠೆೆ ನೆರವೇರಿಸಿದ ಕ್ಷೇತ್ರದ ತಂತ್ರಿಗಳಿಗೆ ಚಿನ್ನದ ಉಂಗುರ ತೊಡಿಸಿ ಗೌರವಿಸಲಾಯಿತು.
ಪಂಚಗವ್ಯ ಪುಣ್ಯಾಹ, ಮಂಗಳ ಗಣಯಾಗ, ಪಂಚಾಮೃತ ಅಭಿಷೇಕ, ಋಕ್‌ಸಂಹಿತ ಅಭಿಮಂತ್ರಿತ ಮಧು ಅಭಿಷೇಕ, ಸೌರ ಸೂಕ್ತ ಹೋಮ, ನ್ಯಾಸ ಪೂಜೆ, ಮಹಾಪೂಜೆ, ಪಲ್ಲಪೂಜೆ ಹಾಗೂ ವಿವಿಧ ಧಾರ್ಮಿಕ ಪ್ರಕ್ರಿಯೆಗಳೊಂದಿಗೆ ಸಹಿತ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ಪಂಚ ವಾದ್ಯ, ವಾದ್ಯ ಗೋಷ್ಠಿಿ, ಚೆಂಡೆ ವಾದನ, ವೇದ ಘೋಷಗಳೊಂದಿಗೆ ಜರಗಿತು.
ಮಧ್ಯಾಹ್ನ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಕ್ಷೇತ್ರದ ಗಾಯತ್ರಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಗ್ರಿ ಪ್ರಕಾಶ್ ನಾಯಕ್ ಮತ್ತು ಬಳಗದವರಿಂದ ಸುಗಮ ಸಂಗೀತ ಮತ್ತು ಭಜನೆ ಸಂಕೀರ್ತನೆ, ಅಮ್ಮ ಕಲಾವಿದೆರ್ ಕುಡ್ಲ ಅವರಿಂದ ‘ಅಮ್ಮೆರ್’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.

