ಕೋಟ : ಐತಿಹಾಸಿಕ ಹಿನ್ನಲೆ ಇರುವ ಕೂಟಮಹಾಜಗತ್ತಿನ ಅಧಿದೇವರಾದ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ವಾರ್ಷಿಕ ರಥೋತ್ಸವ ವೈಭವಪೂರಿತವಾಗಿ ಸಂಪನ್ನಗೊಂಡಿತು. ದೇಗುಲದಲ್ಲಿ ಪೂರ್ವಾಹ್ನದಿಂದ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ವಿವಿಧ ಪೂಜಾ ಕೈಂಕರ್ಯ ನೆರವೆರಿಸಿಕೊಂಡರು.
ಪೂರ್ವಾಹ್ನ ಪಾನಕ ಪನಿವಾರ ಸೇವೆ ಅಪರಾಹ್ನ ಅನ್ನಸಂತರ್ಪಣೆ, ಸಂಜೆ ರಥರೋಹಣ ಸಹಸ್ರ ಸಂಖ್ಯೆಯ ಭಕ್ತ ಸಮೂಹದ ನಡುವೆ ಜರಗಿತು. ಸಂಜೆ ಓಲಗಮಂಟಪದಲ್ಲಿ ದಿ.ಪಾರಂಪಳ್ಳಿ ರಾಮಚಂದ್ರ ಐತಾಳ್ ಶಿಷ್ಯ ವೃಂದದಿಂದ ಸಂಗೀತ ಕಾರ್ಯಕ್ರಮ,ನಂತರ ಮಹಾಮಂಗಳಾರತಿ,ಭೂತಬಲಿ,ಶಯನೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ದೇಗುಲದ ಪ್ರಧಾನ ಅರ್ಚಕ ವೇ.ಮೂ ಜನಾರ್ದನ ಅಡಿಗ ಧಾರ್ಮಿಕ ವಿಧಿವಿಧಾನಗಳನ್ನು ನೆರವೆರಿಸಿದರು. ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ದಂಪತಿಗಳು ಪೂಜಾ ವಿಧಿವಿಧಾನಗಳಲ್ಲಿ ಭಾಗಿಯಾದರು. ದೇಗುಲದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ,ಸಿಬ್ಬಂದಿವರ್ಗ ಉಪಸ್ಥಿತರಿದ್ದರು.