Home » ಉಡುಪಿಯಲ್ಲಿ ವಿನೂತನ ಶ್ರೀಕೃಷ್ಣ ಜಯಂತಿ
 

ಉಡುಪಿಯಲ್ಲಿ ವಿನೂತನ ಶ್ರೀಕೃಷ್ಣ ಜಯಂತಿ

by Kundapur Xpress
Spread the love

ಉಡುಪಿ : ಶ್ರೀಕೃಷ್ಣ ಜಯಂತಿಯನ್ನು ವಿನೂತನವಾಗಿ ಆಚರಿಸುವ ನಿಟ್ಟಿನಲ್ಲಿ ಆ.27ರಂದು ಸಂಜೆ 4.00 ಗಂಟೆಯಿಂದ ರಾಜಾಂಗಣದಲ್ಲಿ ಸಾಂಪ್ರದಾಯಿಕ ಸ್ಪರ್ಧೆಗಳಾದ ಹುಲಿವೇಷ, ಜಾನಪದ ವೇಷ, ಪೌರಾಣಿಕ ನೃತ್ಯ ಸ್ಪರ್ಧೆಗಳು ನಡೆಯಲಿವೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.

ಅವರು  ಕೃಷ್ಣಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಲಿವೇಷ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 1.15 ಲಕ್ಷ ರೂ. ಮೌಲ್ಯದ ಟಿವಿಎಸ್ ಟ್ಯೂಬ್ ಎಲೆಕ್ಟಿಕಲ್ ಸ್ಕೂಟರ್, ದ್ವೀತಿಯ ಬಹುಮಾನ 50 ಸಾವಿರ ರೂ., ತೃತೀಯ ಬಹುಮಾನ 25 ಸಾವಿರ ರೂ., ಜಾನಪದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 25 ಸಾವಿರ ರೂ., ದ್ವೀತಿಯ ಬಹುಮಾನ 15 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ., ಪೌರಾಣಿಕ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 30 ಸಾವಿರ ರೂ., ದ್ವೀತಿಯ ಬಹುಮಾನ 20 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ. ನಿಗದಿಪಡಿಸಲಾಗಿದೆ ಎಂದರು.

ಮಠದ ದಿವಾನ್ ನಾಗರಾಜ ಆಚಾರ್ಯ ಮಾತನಾಡಿ, ಆ.22ರಂದು ಸಂಜೆ 5.00 ಗಂಟೆಗೆ ಗೀತಾ ಮಂದಿರದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಲಿದ್ದು, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಆ.23ರಂದು 5.00 ಗಂಟೆಗೆ ಲಡ್ಡು ಉತ್ಸವವನ್ನು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಲಿದ್ದಾರೆ. ಆ.24ರಂದು 5.00 ಗಂಟೆಗೆ ಗೀತೋತ್ಸವಕ್ಕೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಚಾಲನೆ ನೀಡಲಿದ್ದಾರೆ. ಆ.25ರಂದು 5.00 ಗಂಟೆಗೆ ರಾಜಾಂಗಣದಲ್ಲಿ ನಡೆಯುವ ನೃತ್ಯೋತ್ಸವವನ್ನು ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಉದ್ಘಾಟಿಸಲಿದ್ದಾರೆ. ಚಿತ್ರನಟ ರಿಷಬ್ ಶೆಟ್ಟಿ ಮುಖ್ಯ ಅತಿಥಿಯಾಗಿರುವರು ಎಂದರು.

ಆ.26ರಂದು ಬೆಳಗ್ಗೆ 9.00 ಗಂಟೆಗೆ ಮಧ್ವ ಮಂಟಪದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಡೋಲೋತ್ಸವ ನಡೆಯಲಿದ್ದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಕಿಶನ್ ರೆಡ್ಡಿ, ಸಂಸದ ಬ್ರಿಜೇಶ್ ಚೌಟ ಪಾಲ್ಗೊಳ್ಳಲಿದ್ದಾರೆ.

ಆ.27ರಂದು ಮಧ್ಯಾಹ್ನ 12ರಿಂದ ರಥಬೀದಿಯಲ್ಲಿ ಮಲ್ಲಕಂಬ ಪ್ರದರ್ಶನ ನಡೆಯಲಿದ್ದು, 2 ಗಂಟೆಗೆ ಶ್ರೀಕೃಷ್ಣ ಲೀಲೋತ್ಸವ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಉದ್ಘಾಟಿಸಲಿದ್ದಾರೆ. ಆ.28ರಂದು ಸಂಜೆ 5 ಗಂಟೆಗೆ ರಾಜಾಂಗಣದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದ್ದು, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಉಪನ್ಯಾಸ ನೀಡಲಿದ್ದಾರೆ ಎಂದರು. ವಿದ್ವಾನ್ ಮಹಿತೋಷ್ ಆಚಾರ್ಯ ಮಾತನಾಡಿ, ಶ್ರೀಕೃಷ್ಣ ಮಾಸೋತ್ಸವ ಅಂಗವಾಗಿ ರಾಜಾಂಗಣದಲ್ಲಿ ವಿವಿಧ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆ.23 ರಂದು ಸಂಜೆ 6 ಗಂಟೆಗೆ ಉಪನ್ಯಾಸಕಿ ಡಾ. ಪ್ರಜ್ಞಾ ಮಾರ್ಪಳ್ಳಿ ‘ವಿದ್ಯಾರ್ಥಿ ಜೀವನಕ್ಕೆ ಭಗವದ್ಗೀತೆಯ ಮಾರ್ಗದರ್ಶನ, 24ರಂದು ಚಕ್ರವರ್ತಿ ಸೂಲಿಬೆಲೆ ‘ದ್ವೇಷಾಸೂಯೆ ಹಿಂಸೆಗಳನ್ನು ಗೀತಾಚಾರ್ಯ ಬೋಧಿಸಿದನೇ’ ಆ.25ರಂದು ಡಾ.ಎಚ್.ಎಸ್ ಪ್ರೇಮಾ ‘ಭಗವದ್ಗೀತೆ ಹೇಳಿದ ಆಹಾರ ಕ್ರಮ ಎಷ್ಟು ಪ್ರಸ್ತುತ’, ಆ.26ರಂದು ಎಸ್.ಎನ್. ಸೇತುರಾಮ್ ‘ಕೃಷ್ಣನ ವ್ಯಕ್ತಿತ್ವದ ಪ್ರಸ್ತುತತೆ’ ವಿಚಾರದ ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.

ಕ್ರೀಡೋತ್ಸವ

ಆ.18ರಂದು ನಶಿಸುತ್ತಿರುವ ತುಳುನಾಡಿನ ಆಟೋಟ ನೆನಪಿಸುವ ಸಲುವಾಗಿ ಸಾಂಪ್ರದಾಯಿಕ ಕ್ರೀಡೋತ್ಸವವನ್ನು ರಥಬೀದಿಯಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9.30ಕ್ಕೆ ಕನಕ ಗೋಪುರ ಮುಂಭಾಗ ಪರ್ಯಾಯ ಶ್ರೀಗಳು ಚಾಲನೆ ನೀಡಲಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಓಡೆಯುವುದು, ಸೊಪ್ಪಿನ ಆಟ, ಜುಬಿಲಿ, ಸೈಕಲ್ ಚಲಾಯಿಸುವುದು, ಕಾಳುಗಳ ವಿಂಗಡಿಸುವಿಕೆ, ಬಂಡಿ ಓಟ, ನಿಧಾನ ಗತಿಯ ಸೈಕಲ್ ರೇಸ್, ಬೆಲೈಂಡು, ತಟ್ಟೆ ಓಟ ಅಥವಾ ನಡಿಗೆ, ಹಗ್ಗ ಗಂಟು ಹಾಕುವಿಕೆ, ಟೊಂಕ ಆಟ, ದೇವರ ನಾಮದಿಂದ ಆಟ, ಗೋಣಿ ಚೀಲ ಓಟ, ವಿಕಲ್ ಚೇರ್ ಮುಂತಾದ ವಿವಿಧ ಕ್ರೀಡೆಗಳು ನಡೆಯಲಿವೆ.

   

Related Articles

error: Content is protected !!