ಅಯೋಧ್ಯೆ :ರಾಮ ಜನ್ಮಭೂಮಿಯ ಭವ್ಯ ಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆಯ ನಂತರ 1.5 ಕೋಟಿಗೂ ಅಧಿಕ ಭಕ್ತರು ತಮ್ಮ ಆರಾಧ್ಯ ದೇವರ ದರ್ಶನಕ್ಕಾಗಿ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈ ಮಾಹಿತಿ ನೀಡಿದ್ದಾರೆ. ಜನ್ಮಭೂಮಿ ರಾಮ ಮಂದಿರದಲ್ಲಿ ಜ.22 ರಂದು ವಿಗ್ರಹದ ಪ್ರಾಣ ಪ್ರತಿಷ್ಠಾ ದಿನದಿಂದ ಇಲ್ಲಿಯವರೆಗೆ ಅಂದರೆ 90 ದಿನಗಳಲ್ಲಿ 1.5 ಕೋಟಿ ಭಕ್ತರು ರಾಮಲಲಾನ ದರ್ಶನ ಪಡೆದಿದ್ದಾರೆ. ಪ್ರಸ್ತುತ ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ದರ್ಶನಾರ್ಥಿಗಳು ರಾಮ ಮಂದಿರಕ್ಕೆ ಭೇಟಿ ಕೊಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ರಾಮಲಲಾನ ಗರ್ಭಗೃಹವಿರುವ ಮಂದಿರದ ನೆಲ ಮಹಡಿ ಮಾತ್ರ ಪೂರ್ಣಗೊಂಡಿದೆ. ಮೊದಲ ಮಹಡಿಯ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಆವರಣದ ಹೊರಭಾಗದಲ್ಲಿ ಯಾತ್ರಿ ಸುವಿಧಾ ಕೇಂದ್ರ ನಿರ್ಮಾಣವಾಗುತ್ತಿದ್ದು, ಅದೊಮ್ಮೆ ಪೂರ್ಣಗೊಂಡ ನಂತರ ಒಂದೇ ಬಾರಿಗೆ 25,000 ಯಾತ್ರಾರ್ಥಿಗಳಿಗೆ ಅವರ ಎಲ್ಲಾ ಸಾಮಾನುಗಳನ್ನು ಸುರಕ್ಷಿತವಾಗಿಡಲು ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಚಂಪತ್ ರಾಯ್ ಹೇಳಿದ್ದಾರೆ.