ಉಡುಪಿ : ಪುಣ್ಯಪ್ರದವಾದ ಭಜನೆಯನ್ನು ದೇವರ ಸ್ಮರಣೆಯ ನೆಲೆಯಲ್ಲಿ ಮಾಡಬೇಕೇ ಹೊರತು ಟೈಂಪಾಸ್‌ಗಲ್ಲ. ಕಲಿಯುಗದಲ್ಲಿ ಭಜನೆಯಿಂದ ಭಗವಂತ ಸಂತೃಪ್ತನಾಗಲು ಸಾಧ್ಯ ಎಂದು ಪರ್ಯಾಯ ಶ್ರೀ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಅವರು ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಶಿರೂರು ಮಠದ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಅಧಿಕ ಮಾಸದ ಅಂಗವಾಗಿ 33 ಭಜನಾ ಕೃತಿಗಳ ಸಾಮೂಹಿಕ ಗೀತ ಗಾಯನ ‘ಭಜನಾಮೃತ’ವನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ದೇವರ ಸನ್ನಿಧಾನದಲ್ಲಿ ದೇವರಿಗೆ ಪ್ರಿಯವಾದ ಕೆಲಸ ಮಾಡುವುದು ದೇವರಿಗೆ ತೃಪ್ತಿ ನೀಡುತ್ತದೆ. ಅಧಿಕ ಮಾಸದಲ್ಲಿ ಮಾಡುವ ಭಜನೆಯಿಂದ ಅಧಿಕ ಫಲ ದೊರೆಯಲು ಸಾಧ್ಯ ಎಂದರು.
ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ, ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ಭಜನಾ ಪರಿಷತ್ ದ.ಕ. ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ.ಅಳಿಯೂರು, ವಲಯ ಸಂಯೋಜಕರಾದ ಗಣೇಶ್ ಕುಮಾರ್ ಸಂಪಿಗೆನಗರ, ರೂಪಾಶ್ರೀ ಸಹಿತ ನೂರಾರು ಸಂಖ್ಯೆಯಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.
ಪರಿಷತ್ ಭಜನಾ ತರಬೇತುದಾರೆ ವಿದುಷಿ ಉಷಾ ಹೆಬ್ಬಾರ್, ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ 33 ಭಜನಾ ಕೃತಿಗಳ ಸಾಮೂಹಿಕ ಗೀತಗಾಯನ ‘ಭಜನಾಮೃತ’ ನೆರವೇರಿತು.
ಉಡುಪಿ ತಾಲೂಕು ಭಜನಾ ಪರಿಷತ್ ಪ್ರಧಾನ ಕಾಯದರ್ಶಿ ಶಿವಕುಮಾರ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

