ಸಕಲೇಶಪುರ : ಕಳೆದ ಶನಿವಾರ ಹೈದರಾಬಾದ್‌ನಲ್ಲಿ ಅತ್ಮಹತ್ಯೆ ಮಾಡಿಕೊಂಡ ಕನ್ನಡದ ನಟಿ ಶೋಭಿತಾ ಶಿವಣ್ಣ ಅವರ ಅಂತ್ಯಕ್ರಿಯೆ ಮಂಗಳವಾರ ಅವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆಯಿತು.
ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅಂತಿಮ ವಿಧಿ ಪೂಜೆ ನಡೆಸಿ ಮಲೆನಾಡು ಹಾಗೂ ಗಂಗಾಮತಸ್ಥ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ನಡೆಸಿದರು. ಬೆಂಗಳೂರಿನಿಂದ ಮಂಗಳವಾರ ಬೆಳಗ್ಗೆ 7.30ಕ್ಕೆ ಕುಟುಂಬಸ್ಥರು ಮೃತ ದೇಹವನ್ನು ಗ್ರಾಮಕ್ಕೆ ತೆಗೆದುಕೊಂಡು ಬಂದರು. ಶೋಭಿತಾ ಮನೆಯಲ್ಲಿ ಅಂತಿಮ ದರ್ಶನಕ್ಕೆ ಏರ್ಪಡು ಮಾಡಲಾಗಿತ್ತು.
ಮೃತ ದೇಹ ಬರುತ್ತಿದ್ದಂತೆಯೇ ಶೋಭಿತಾ ಮನೆಯಲ್ಲಿ ಹೆತ್ತವರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು, ಸ್ನೇಹಿತರು, ಬಂಧುಗಳು ಅಗಲಿದ ನಟಿಗೆ ಅಶ್ರುತರ್ಪಣ ಸಲ್ಲಿಸಿದರು. ನಂತರ ಶೋಭಿತಾ ಅವರ ತಂದೆಯ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.