ಮಂಗಳೂರು : ಕೋಮು ಸಂಘರ್ಷ ನಿಗ್ರಹಕ್ಕೆ ದೇಶದಲ್ಲೇ ಪ್ರಥಮ ವಿಶೇಷ ಕಾರ್ಯಪಡೆಯನ್ನು ಮಂಗಳೂರಿನಲ್ಲಿ ಸ್ಥಾಪಿಸಲಾಗಿದ್ದು, ಗೃಹಸಚಿವ ಡಾ.ಜಿ.ಪರಮೇಶ್ವರ್ ಶುಕ್ರವಾರ ಇದಕ್ಕೆ ಚಾಲನೆ ನೀಡಿದ್ದಾರೆ. ಕೋಮು ಸಾಮರಸ್ಯ ಕಾಪಾಡಲು ಅಗತ್ಯ ಬಿದ್ದರೆ ಈ ಕಾರ್ಯಪಡೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಇದೇ ಸಂದರ್ಭ ಅವರು ಹೇಳಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಹಿಂಬದಿಯ ಕಟ್ಟಡದಲ್ಲಿ ವಿಶೇಷ ಕಾರ್ಯಪಡೆ ಕಚೇರಿ ಉದ್ಘಾಟನೆ ನೆರವೇರಿಸಿ, ಪೊಲೀಸ್ ವಸತಿಗೃಹ ಉದ್ಘಾಟಿಸಿ ಮಾತನಾಡಿದ ಡಾ.ಪರಮೇಶ್ವರ್, ಪ್ರಸ್ತುತ ದ.ಕ.. ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಸಂಘರ್ಷ ಮಟ್ಟ ಹಾಕಲು ಈ ವಿಶೇಷ ಕಾರ್ಯಪಡೆ ಆರಂಭಿಸಲಾಗಿದೆ. ಅವಶ್ಯಕತೆ ಬಿದ್ದರೆ ರಾಜ್ಯಾದ್ಯಂತ ವಿಸ್ತರಣೆ ಮಾಡುವುದಾಗಿ ತಿಳಿಸಿದರು.
ದೇಶದಲ್ಲೇ ಪ್ರಥಮ :
ದ.ಕ.ದಲ್ಲಿ 6 ತಿಂಗಳ ಹಿಂದೆ ಒಂದು ಕೊಲೆಯಾಗಿತ್ತು. ಆಗ ಮಂಗಳೂರಿಗೆ ಭೇಟಿ ನೀಡಿದಾಗ ಸ್ವಾಭಾವಿಕವಾದ ಭಯ, ಆತಂಕದ ಪರಿಸ್ಥಿತಿಯನ್ನು ಗಮನಿಸಿದ್ದೆ. ಸುಸಂಸ್ಕೃತ ಜಿಲ್ಲೆಯಾಗಿರುವ ದ.ಕ.ದಲ್ಲಿ ಎಲ್ಲೋ ಒಂದು ಕಡೆ ಸಾಮರಸ್ಯ ಹಾಳಾಗಿದೆ. ಇದನ್ನು ಆದಷ್ಟು ಬೇಗ ಹತ್ತಿಕ್ಕದೆ ಇದ್ದರೆ ಈ ಭಾಗ ಹಾಳಾಗುವುದಷ್ಟೇ ಅಲ್ಲ ಬೇರೆಡೆಗೂ ಹರಡುವ ಸಾಧ್ಯತೆಯಿದೆ. ಹಾಗಾಗಿ ಕೋಮು ಸಂಬಂಧಿ ಚಟುವಟಿಕೆಗಳ ನಿಗ್ರಹಕ್ಕಾಗಿ ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಲು ಸಲಹೆ ನೀಡಿದ್ದೆ. ಅದರ ಬಳಿಕ ತಿಂಗಳ ಹಿಂದೆ 2 ಕೊಲೆ ನಡೆದ ಬಳಿಕ ನಕ್ಸಲ್ ನಿಗ್ರಹಪಡೆಯಂತೆ ವಿಶೇಷ ಕಾರ್ಯಪಡೆಯ ಘೋಷಣೆ ಮಾಡಿದ್ದು, ಈಗ ಕಾರ್ಯಗತವಾಗಿದೆ. ಕೋಮು ಸಂಘರ್ಷ ನಿಗ್ರಹಕ್ಕಾಗಿ ಇರುವ ದೇಶದ ಪ್ರಥಮ ವಿಶೇಷ ಕಾರ್ಯಪಡೆ ಇದು. ಮೂರು ಜಿಲ್ಲೆಗಳಲ್ಲಿ ಕೋಮು ಸಾಮರಸ್ಯ ಸ್ಥಾಪನೆಯೇ ಇದರ ಮುಖ್ಯ ಉದ್ದೇಶ ಎಂದರು

