ಬೆಂಗಳೂರು : ಎರಡು ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡುವುದರಿಂದ ಜನಸಂದಣಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂಬ ಮಾತನ್ನು ಪೊಲೀಸರು ಹೇಳಿದರೂ ಸರ್ಕಾರ ಹಠಮಾರಿತನ ತೋರಿತು ಎಂದು ಪ್ರತಿಪಕ್ಷ ಬಿಜೆಪಿ ನಾಯಕರು ಗಂಭೀರ ಆಪಾದನೆ ಮಾಡಿದ್ದಾರೆ.
‘ಆರ್‌ಸಿಬಿ ಕಪ್‌ಗೆದ್ದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಯಾವುದೇ ಪೂರ್ವತಯಾರಿ ಇಲ್ಲದೇ ರಾಜ್ಯ ಸರ್ಕಾರ ಏಕಾಏಕಿಯಾಗಿ ಸಂಭ್ರಮಾಚರಣೆ ಆಯೋಜಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
ವಿಧಾನಸೌಧದ ಮುಂದೆ ಸಂಭ್ರಮಾಚರಣೆಗೆ ಪೊಲೀಸರು ಅನುಮತಿ ಕೊಟ್ಟಿರಲಿಲ್ಲ. ಎರಡೂ ಕಡೆ ಸಂಭ್ರಮಾಚರಣೆ ಬೇಡ; ಜನಸಂದಣಿ ನಿಯಂತ್ರಿಸಲು ಕಷ್ಟವಾಗುತ್ತದೆ ಎಂಬ ಮಾತನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದರೂ ಮುಖ್ಯಮಂತ್ರಿಗಳು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯ ಮಾಡಿ ತಾವು ಹೇಳಿದ್ದೇ ಆಗಲೇಬೇಕೆಂದು ಆದೇಶಿಸಿದ್ದಾರೆ ಎಂದು ಆಕ್ಷೇಪಿಸಿದರು.
ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದು, ಪ್ರಚಾರದ ಹುಚ್ಚಿನ ಪರಿಣಾಮವಾಗಿ ಇದೆಲ್ಲ ನಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಕಾಲ್ತುಳಿತದ ಅನಾಹುತ, ಸಾವುಗಳಿಗೆ ಯಾರು ಹೊಣೆ ಎಂದು ಮುಖ್ಯಮಂತ್ರಿಗಳು ನಿರ್ಧರಿಸಲಿ ಎಂದು ಒತ್ತಾಯಿಸಿದರು.

