ಮೈಸೂರು :’ನನ್ನ ವಿರುದ್ಧದ ಎಲ್ಲ ಆರೋಪಗಳನ್ನು ಎದುರಿಸಲು ಸನ್ನದ್ಧನಾಗಿದ್ದೇನೆ. ರಾಜಕೀಯ ಹಾಗೂ ಕಾನೂನು ಮೂಲಕವೇ ಈ ಆರೋಪಗಳನ್ನು ಎದುರಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರರ ಜತೆ ಮಾತನಾಡಿ, ಶುಕ್ರವಾರ ನಗರದಲ್ಲಿ ನಡೆದ ಸಮಾವೇಶದಲ್ಲಿ ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರ ಜನರ ಮುಂದಿಡುತ್ತೇನೆ ಎಂದರು. ವಿಜಯೇಂದ್ರ, ಯಡಿಯೂರಪ್ಪ, ಕುಮಾರಸ್ವಾಮಿ, ಆರ್.ಅಶೋಕ್ ಎಲ್ಲರೂ ತಮ್ಮ ಅಧಿಕಾರಾವಧಿಗಳಲ್ಲಿ ಏನೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಈಗಾಗಲೇ ಅವರ ಕೆಲವು ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಈ ಬಗ್ಗೆ ಮಾತನಾಡುತ್ತೇವೆ. ಇನ್ನೂ ಕೆಲವು ಹಗರಣಗಳು ಬಾಕಿ ಇವೆ ಎಂದು ಹೇಳಿದರು. ಬಿಜೆಪಿ ಜೆಡಿಎಸ್ ನಾಯಕರ ಆರೋಪಗಳನ್ನು ಎದುರಿಸಲು ಸಿದ್ದನಿದ್ದೇನೆ. ಬಿಜೆಪಿ-ಜೆಡಿಎಸ್ ಅವರು ಪಾದಯಾತ್ರೆ ಮಾಡಿದ್ದರಿಂದ ನಾವು ಜನಾಂದೋಲನ ಮಾಡಿದೆವು. ಅವರು ನಮ್ಮ ವಿರುದ್ದ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ತಿಳಿಸಲು ಜನಾಂದೋಲನ ಮಾಡಬೇಕಾಯಿತು ಎಂದು ಸ್ಪಷ್ಟಪಡಿಸಿದರು