ಬೆಂಗಳೂರು : ರಾಜ್ಯ ಸರ್ಕಾರವು ಶೀಘ್ರ 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಮುಂದಾಗಿದ್ದು, ಈ ಸಂಬಂಧ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಈ ವಿಷಯ ಪ್ರಸ್ತಾಪವಾಯಿತು. ಕೆಲವು ಸಚಿವರು ಶೇ.25ರಷ್ಟು ಕೊಡಲು ಒಪ್ಪಿಕೊಳ್ಳಬಹುದು ಎಂದು ಸಲಹೆ ನೀಡಿದರು. ಇನ್ನು ಕೆಲವರು ಶೇ.27ರಷ್ಟು ನೀಡಬಹುದು ಎಂದಿದ್ದಾರೆ. ಅಂತಿಮವಾಗಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಮುಖ್ಯಮಂತ್ರಿಯವರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆಗೂ ಮೊದಲೇ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸಲಾಗುತ್ತಿತ್ತು. ರಾಜ್ಯ ಸರ್ಕಾರಿ ನೌಕರರ ಸಂಘ ಹಲವು ಸಮಯದಿಂದ ಇದಕ್ಕಾಗಿ ಒತ್ತಡ ಹೇರುತ್ತಲೇ ಇತ್ತು. ಅಲ್ಲದೇ ಈ ತಿಂಗಳಾಂತ್ಯಕ್ಕೆ 7ನೇ ವೇತನ ಆಯೋಗದ ವರದಿ ಜಾರಿಗೆ ಗಡುವನ್ನೂ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಸಚಿವ ಸಂಪುಟ ಸಭೆಯಲ್ಲೂ ಈ ಕುರಿತಾಗಿ ಅನೌಪಚಾರಿಕವಾಗಿ ಚರ್ಚೆ ನಡೆಸಲಾಗಿತ್ತು.