112
ಬೆಂಗಳೂರು : ಮಿಶ್ರಲೋಹವಲ್ಲದ ಮತ್ತು ಮಿಶ್ರಲೋಹದ ಉಕ್ಕಿನಿಂದ ತಯಾರಿಸಿದ ಕೆಲವು ಉತ್ಪನ್ನಗಳ ಆಮದಿನ ಮೇಲೆ ಶೇ.12ರಷ್ಟು ಸುರಕ್ಷತಾ ಸುಂಕ ವಿಧಿಸುವ ಅಧಿಸೂಚನೆಯನ್ನು ಹೊರಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.
ಆಮದು ಹೆಚ್ಚಳದ ಪ್ರತಿಕೂಲಕರ ಪರಿಣಾಮಗಳಿಂದ ದೇಶೀಯ ಉಕ್ಕು ತಯಾರಕರನ್ನು ರಕ್ಷಿಸಲು ಮತ್ತು ಮಾರುಕಟ್ಟೆಯಲ್ಲಿ ನ್ಯಾಯಯುತ ಸ್ಪರ್ಧೆಯನ್ನು ಖಾತ್ರಿಪಡಿಸಿಕೊಳ್ಳಲು ಈ ಕ್ರಮವು ಸಕಾಲಿಕ ಮತ್ತು ಅಗತ್ಯ ಕ್ರಮವಾಗಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಭಾರತ್ ಪರಿಕಲ್ಪನೆಯಲ್ಲಿ ದೇಶೀಯ ವ್ಯೂಹಾತ್ಮಕ ವಲಯಗಳನ್ನು ಬಲಪಡಿಸುವಲ್ಲಿ ಇದು ಅತ್ಯುತ್ತಮ ಹೆಜ್ಜೆಯಾಗಿದೆ. ಅಲ್ಲದೆ, ಈ ನಿಟ್ಟಿನಲ್ಲಿ ಮೋದಿ ಅವರ ನಿರಂತರ ಬೆಂಬಲಕ್ಕಾಗಿ ನಾನು ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

