ಬೆಂಗಳೂರು: ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಳ ಮಾಡಿದ್ದು, ರಾಜ್ಯದಲ್ಲಿ ತೈಲ (ಪೆಟ್ರೋಲ್ ಹಾಗೂ ಡೀಸೆಲ್) ಬೆಲೆ ಹೆಚ್ಚಳವಾಗಿದೆ. ಈ ಮೂಲಕ ಜನತೆಯ ಮೇಲೆ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ‘ಬಾಂಬ್’ ಹಾಕಿದೆ. ತಕ್ಷಣದಿಂದಲೇ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳವಾಗಲಿದೆ ಎಂದು ರಾಜ್ಯ ಸರ್ಕಾರ ಶನಿವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.
ಈ ಮೂಲಕ ಲೋಕಸಭೆ ಹಾಗೂ ವಿಧಾನಪರಿಷತ್ ಚುನಾವಣೆಗಳು ಮುಕ್ತಾಯಗೊಂಡು ಫಲಿತಾಂಶ ಪ್ರಕಟವಾಗಿ ಚುನಾವಣಾ ನೀತಿ ಸಂಹಿತೆ ಕೊನೆಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಇಲಾಖೆಗಳ ಜತೆ ಸಮಾಲೋಚನೆ ನಡೆಸಿದ್ದರು. ಆದಾಯ ಹೆಚ್ಚಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿದ್ದರು. ಸರ್ಕಾರ ಈಗಾಗಲೇ ಮದ್ಯ ಮಾರಾಟದ ಮೇಲೆ ತೆರಿಗೆ ಹೆಚ್ಚಳ ಮಾಡಿದೆ. ವಾಹನ, ರಸ್ತೆ ತೆರಿಗೆ ಹೆಚ್ಚಳದ ಆಯ್ಕೆಯೂ ಸರ್ಕಾರದ ಮುಂದಿಲ್ಲ. ಹೀಗಾಗಿ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ಮಾರಾಟದ ಮೇಲಿನ ತೆರಿಗೆ ಹೆಚ್ಚಳದ ಮೂಲಕ ಬೊಕ್ಕಸ ತುಂಬಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ