ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲಾ ಕೇಂದ್ರವಾದ ಮೈಸೂರಿನಲ್ಲಿ ಶನಿವಾರ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ನಡೆಯಲಿದ್ದು, ವಿರೋಧ ಪಕ್ಷಗಳ ಟೀಕೆಗೆ ಈ ಸಮಾವೇಶ ಉತ್ತರ ನೀಡುವ ರೀತಿಯಲ್ಲಿ ಯಶಸ್ವಿಗೊಳಿಸಲು ಸರ್ಕಾರ ಸಜ್ಜಾಗಿದೆ.
ಮೈಸೂರಿನ ಮಹಾರಾಜ ಮೈದಾನದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ನಡೆಯ ಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಸೇರಿ ಕಾಂಗ್ರೆಸ್ ಹಲವು ರಾಷ್ಟ್ರ ಹಾಗೂ ರಾಜ್ಯಮಟ್ಟದ ನಾಯಕರು ಭಾಗಿಯಾಗಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಾಧನಾ ಸಮಾವೇಶಕ್ಕೆ ಬೃಹತ್ ವೇದಿಕೆ ಸಜ್ಜಾಗಿದ್ದು, ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಮೈಸೂರಿನಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಮಹಾರಾಜ ಮೈದಾನದಲ್ಲಿ ಜರ್ಮನ್ ಮಾದರಿ ಟೆಂಟ್‌ನಲ್ಲಿ ನಿರ್ಮಾಣವಾದ ಬೃಹತ್ ಗಾತ್ರದ ವೇದಿಕೆ ನಿರ್ಮಾಣ ಮಾಡಲಾಗಿದೆ.
ವೇದಿಕೆಯ ಮಧ್ಯದಲ್ಲಿ ಸಿ ಎಂ ಸಿದ್ದರಾಮಯ್ಯ ನಡೆದುಕೊಂಡು ಹೋಗುವುದಕ್ಕೆ ಸುಮಾರು 200 ಮೀಟರ್ ಉದ್ದದ ವಿಶೇಷ ಟ್ರ್ಯಾಕ್ ನಿರ್ಮಿಸಲಾಗಿದೆ. ಸರ್ಕಾರದ 5 ಗ್ಯಾರಂಟಿ ಯೋಜನೆ ಕುರಿತು ಕಲಾಕೃತಿ ತಯಾರಿಸಲಾಗಿದೆ. ಕೃಷಿ ಅಧಿಕಾರಿಗಳಿಂದ ಗ್ಯಾರಂಟಿ ಯೋಜನೆಯನ್ನು ಬಿಂಬಿಸುವ ಚಿತ್ತಾಕರ್ಷಕ ರಂಗೋಲಿ ಬಿಡಿಸಲಾಗಿದೆ

