ಕೊಪ್ಪಳ : ಚೈನ್ ಲಿಂಕ್ ಕಟ್ಟಾಗಿ ಕೆಳಕ್ಕೆ ಬಿದ್ದಿರುವ ತುಂಗಭದ್ರಾ ಅಣೆಕಟ್ಟಿನ ಗೇಟ್ ನಂ.19ಕ್ಕೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಬುಧವಾರದಿಂದಲೇ ಆರಂಭವಾಗಲಿದೆ. ಈಗಾಗಲೇ ಸಂಬಂಧಿಸಿದ ತಜ್ಞರ ಜೊತೆಗೆ ಚರ್ಚೆ ನಡೆಸಿದ್ದು, ಸೂಕ್ತ ಸಲಹೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ, ಜಲಾಶಯದಲ್ಲಿ 64 ಟಿಎಂಸಿಯಷ್ಟು ನೀರನ್ನು ಉಳಿಸಿಕೊಳ್ಳಲು ಯತ್ನಿಸಲಾಗುತ್ತಿದ್ದು, ರೈತರ ಒಂದು ಬೆಳೆಗೆ ನೀರನ್ನು ಕೊಟ್ಟೇ ಕೊಡುತ್ತೇವೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ಮಂಗಳವಾರ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಸಿಎಂ, ಗೇಟ್ ನಂಬರ್ 19ರ ಸರಪಳಿ ತುಂಡರಿಸಿ ಕಳಚಿ ಬಿದ್ದಿರುವ ಸ್ಥಳವನ್ನು ವೀಕ್ಷಣೆ ಮಾಡಿದರು. ನೀರಾವರಿ ಅಧಿಕಾರಿಗಳಿಂದ ಘಟನೆ ಬಗ್ಗೆ ವಿವರಣೆ ಪಡೆದರು. ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಜೊತೆ ಸುಮಾರು 15 ನಿಮಿಷಗಳ ಕಾಲ ಡ್ಯಾಂನ ಸುರಕ್ಷತೆ, ನಿರ್ವಹಣೆ ಕುರಿತು ಚರ್ಚೆ ನಡೆಸಿದರು. ಆಂಧ್ರದ ನೀರಾವರಿ ಸಚಿವರು, ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತ ಮುಖಂಡರ ಜೊತೆಗೂ ಸಮಾಲೋಚನೆ ನಡೆಸಿದರು
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಪೈಕಿ 19ನೇ ಗೇಟ್ ಕಳಚಿ ಬಿದ್ದಿದೆ. ಈಗಾಗಲೇ ಜಲಾಶಯ ಗೇಟ್ ಗಳ ನಿರ್ಮಾಣ ತಜ್ಞ ಹಾಗೂ ಸುರಕ್ಷತೆ ತಜ್ಞ ಎಂಜಿನಿಯರ್ ಕನ್ನಯ್ಯ ನಾಯ್ಡು ಜೊತೆ ಚರ್ಚಿಸಿರುವೆ. ಅವರ ಸಲಹೆ ಮೇರೆಗೆ ದುರಸ್ತಿ ಕಾರ್ಯ ನಿರ್ವಹಿಸಲಾಗುತ್ತಿದೆ. ಗೇಟ್‌ನ ದುರಸ್ತಿ ಕಾರ್ಯಕ್ಕೆ ಕನಿಷ್ಟ 4 ರಿಂದ 5 ದಿನಗಳು ಬೇಕಾಗುತ್ತವೆ. ಹಿಂದೂಸ್ತಾನ್ ಎಂಜಿನಿಯರಿಂಗ್ಸ್ ಹಾಗೂ ನಾರಾಯಣ ಎಂಜಿನಿಯರಿಂಗ್ಸ್ ಅವರಿಗೆ ಹೊಸ ಗೇಟ್ ತಯಾರಿ ಹೊಣೆ ವಹಿಸಲಾಗಿದೆ ಎಂದು ತಿಳಿಸಿದರು.