116
ಕೊಳ್ಳೇಗಾಲ : ನದಿಯಲ್ಲಿ ತೀರ್ಥಸ್ನಾನ ಮಾಡಲು ತೆರಳಿದಾಗ ಯೋಗ ಮಾಡುತ್ತಲೇ ವೃದ್ಧ ಯೋಗಪಟುಯೊಬ್ಬರು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ದಾಸನಪುರ ಬಳಿಯ ಕಾವೇರಿ ನದಿಯಲ್ಲಿ ನಡೆದಿದೆ.
ಕೊಳ್ಳೇಗಾಲದ ಎನ್.ನಾಗರಾಜನ್ (78) ಮೃತರು. ನಾರಾಯಣಸ್ವಾಮಿ ರಥೋತ್ಸವದ 3ನೇ ದಿನ ಕಾವೇರಿ ನದಿಯಲ್ಲಿ ತೀರ್ಥಸ್ನಾನ ಮಾಡಲು ನಾಗರಾಜನ್ ತೆರಳಿದ್ದರು. ಇವರು ಆಗಾಗ ನೀರಿನಲ್ಲಿ ತೇಲುತ್ತಲೇ ಯೋಗ ಮಾಡುತ್ತಿದ್ದರು. ಅದೇ ರೀತಿ ನದಿಯಲ್ಲಿ ತೇಲುತ್ತಿದ್ದ ನಾಗರಾಜನ್ ಅವರು ಎಷ್ಟು ಹೊತ್ತಾದರೂ ತೇಲುವ ಸ್ಥಿತಿಯಲ್ಲೇ ಇದ್ದರು. ಅವರ ಜೊತೆಗೆ ಬಂದಿದ್ದವರು ಅನುಮಾನಗೊಂಡು ಹತ್ತಿರ ಹೋಗಿ ಪರಿಶೀಲಿಸಿದಾಗ ಮೃತಪಟ್ಟಿರುವುದು ತಿಳಿದಿದೆ. ಇನ್ನೂ ನದಿಯ ಒಂದು ದಡದಿಂದ ಇನ್ನೋಂದು ದಡಕ್ಕೆ ಈಜುತ್ತಾ ಹೋಗಿ ನಿತ್ರಾಣಗೊಂಡಿದ್ದರಿಂದ ನಾಗರಾಜನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

