ಉಡುಪಿ : ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಆರ್.ಎಸ್.ಎಸ್. ಮತ್ತು ಭಜರಂಗ ದಳವನ್ನು ನಿಷೇಧಿಸುವ ಬಗ್ಗೆ ಮಾಡಿರುವ ಪ್ರಸ್ತಾಪವನ್ನು ಖಂಡಿಸುವ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ಆಡು ಭಾಷೆಯಲ್ಲಿ ‘ನಾವೇನೂ ಬಳೆ ತೊಟ್ಟಿಲ್ಲ’ ಎಂದಿರುವ ಕ್ಷುಲ್ಲಕ ವಿಚಾರವನ್ನು ದೊಡ್ಡ ವಿವಾದವನ್ನಾಗಿಸಲು ಹೊರಟಿರುವ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆಯವರ ನಡೆಯನ್ನು ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ತೀಕ್ಷ್ಣವಾಗಿ ಖಂಡಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ಬಗ್ಗೆ ಮಾತನಾಡುವ ಮುನ್ನ ಎಚ್ಚರವಿರಲಿ ಎಂದು ತಿರುಗೇಟು ನೀಡಿದ್ದಾರೆ.
ಉಚಿತ ಗ್ಯಾರಂಟಿಗಳನ್ನು ಘೋಷಿಸಿ ಮೋಸದಿಂದ ಚುನಾವಣೆಯನ್ನು ಗೆದ್ದಿರುವ ಕಾಂಗ್ರೆಸ್ ಇದೀಗ ಗ್ಯಾರಂಟಿ ಕಾರ್ಡಿನ ಭರವಸೆಗಳನ್ನು ಜಾರಿ ಮಾಡಲಾಗದೇ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಇಂತಹ ಕ್ಷುಲ್ಲಕ ವಿಚಾರಗಳನ್ನು ಅನಾವಶ್ಯಕವಾಗಿ ಮುನ್ನೆಲೆಗೆ ತರುತ್ತಿದೆ..
ಬಿಜೆಪಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಐದೂ ಕ್ಷೇತ್ರಗಳಲ್ಲಿ ಹೀನಾಯ ಸೋಲನ್ನು ಅನುಭವಿಸುವ ಮೂಲಕ ವಿಚಲಿತಗೊಂಡಿದೆ
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಈಡೇರಿಸುವ ಜೊತೆಗೆ ವಿನೂತನ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಸಿಗಿಲ್ಲ. ಕ್ಷುಲ್ಲಕ ವಿಚಾರಗಳನ್ನು ಕೆದಕುತ್ತಾ ಜನರ ದಾರಿ ತಪ್ಪಿಸುವ ಬದಲು ಕಾಂಗ್ರೆಸ್ ಜನತೆಗೆ ನೀಡಿರುವ 5 ಉಚಿತಗಳ ಗ್ಯಾರಂಟಿಗಳನ್ನು ಅತಿ ಶೀಘ್ರವಾಗಿ ಜಾರಿಗೊಳಿಸಲು ಮುಂದಾಗುವುದು ಸೂಕ್ತ ಎಂದು ವೀಣಾ ಎಸ್. ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ