26. ತಡೆಗೋಡೆಯನ್ನು ಕೀಳೋಣ
ಸಾಗರದಾಳದಲ್ಲಿ ಅತ್ಯಮೂಲ್ಯವಾದ ಮುತ್ತು, ರತ್ನ, ಹವಳಗಳಿರುವಂತೆ ನಮ್ಮ ಮನಸ್ಸೆಂಬ ಸಾಗರದಾಳದಲ್ಲಿ ಅದಕ್ಕಿಂತಲೂ ಅಮೂಲ್ಯವಾದ ವಸ್ತುವೊಂದಿದೆ. ಅದು ನಾವು ಬೇಕೆಂದು ಹಂಬಲಿಸುವುದನ್ನು ಪಡೆಯುವ ಶಕ್ತಿ! ಆದರೆ ಅಂತಹ ಒಂದು ಅಮೂಲ್ಯವಾದ ಶಕ್ತಿ ನಮ್ಮ ಮನಸ್ಸೆಂಬ ಸಾಗರದಾಳದಲ್ಲಿ ಇದೆ ಎಂಬ ಅಂಶವೇ ನಮಗೆ ಗೊತ್ತಿಲ್ಲ. ಒಂದು ವೇಳೆ ಗೊತ್ತಿದ್ದರೂ ಅದನ್ನು ಪರೀಕ್ಷಿಸಿ ಹುಡುಕಾಡುವ ಸಾಹಸ ಪ್ರವೃತ್ತಿಯೂ ನಮ್ಮಲಿಲ್ಲ. ‘ನಮ್ಮ ಶಕ್ತಿಸಾಮಥ್ರ್ಯದ ನೆಲೆಯಾಗಿ, ಪರಿಪೂರ್ಣತೆಯ ಗಣಿಯಾಗಿರುವ ಸಂಪತ್ತೆಷ್ಟೋ ನಮ್ಮ ಮನದ ಅಂತರಾಳದಲ್ಲಿ ಇದೆ. ದುರದೃಷ್ಟವೆಂದರೆ ಅವು ಇಂದಿಗೂ ಶೋಧಿಸಲ್ಪಡದೇ ಜಡವಾಗಿ ಅಲ್ಲೇ ಬಿದ್ದಿವೆ’ ಎನ್ನುವ ದಾರ್ಶನಿಕ ಡಾ| ಅಲೆಕ್ಸಿಸ್ ಕೆರೆಲ್ ಅವರ ಮಾತುಗಳು ನಿಜಕ್ಕೂ ನಮ್ಮನ್ನು ಚುಚ್ಚುವಂತಿವೆ. ಸಂಕೋಚ, ಆತಂಕ, ಭಯ, ಕೀಳಿರಿಮೆಗಳಿಂದಾಗಿ ಬದುಕಿನಲ್ಲಿ ಸಾಧನೆಯ ಪಥದಲ್ಲಿ ಸಾಗಲಾರದೆ, ಕೊನೆಗೆ ಪ್ರಯತ್ನಕ್ಕೂ ಮುಂದಾಗದೆ ಸುಮ್ಮಸುಮ್ಮನೆ ಹತ್ತುಹಲವು ನೆಪಗಳನ್ನು ಹೇಳುತ್ತಾ ಕೈಚೆಲ್ಲಿ ಕುಳಿತುಕೊಳ್ಳುವ ಪ್ರವೃತ್ತಿಯನ್ನೇ ಬೆಳೆಸಿಕೊಂಡಿರುವವರಿಗೆ ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಏಳು, ಎದ್ದೇಳು, ನಿನ್ನನ್ನು ನೀನು ಅರಿತುಕೋ. ನಿನ್ನೊಳಗಿನ ಶಕ್ತಿ-ಸಾಮಥ್ರ್ಯವನ್ನು ತಿಳಿದುಕೋ. ಗುರಿ ಮುಟ್ಟುವ ತನಕ ವಿರಮಿಸದಿರು. ನಮ್ಮ ಮನಸ್ಸೇ ನಮ್ಮ ಸಾಧನೆಯ ಪಥಕ್ಕೆ ತಡೆಗೋಡೆ ಕಟ್ಟಿರುವುದನ್ನು ನಾವು ಕಂಡುಕೊಳ್ಳುವುದರಲ್ಲೇ ನಮ್ಮ ಯಶಸ್ಸು ಅಡಗಿದೆ. ಆ ತಡೆಗೋಡೆಯನ್ನು ಒಡೆದು ಹಾಕುವುದೇ ನಮ್ಮ ಮುಂದಿರುವ ಬಹು ದೊಡ್ಡ ಸವಾಲು.