ವಿಶ್ವಗುರುಗಳಾದ ಶ್ರೀಮಧ್ವಾಚಾರ್ಯರು ಸಜ್ಜನರ ಉದ್ಧಾರಕ್ಕಾಗಿ ಅಪೂರ್ವವಾದ ಕೊಡುಗೆಯನ್ನು ನೀಡಿದ್ದಾರೆ . ಪ್ರಸ್ಥಾನ ತ್ರಯಗಳಿಗೆ ಅತ್ಯದ್ಭುತವಾದ ವ್ಯಾಖ್ಯಾನವನ್ನು ಮಾಡಿದ್ದಾರೆ. ಶ್ರೀಮಧ್ವಾಚಾರ್ಯರು ನೀಡಿದ ಗ್ರಂಥಗಳೆಲ್ಲವೂ ಅತ್ಯಂತ ವಿಮರ್ಶಾತ್ಮಕವಾಗಿದೆ. ಅದರಲ್ಲಿಯೂ ಅವರು ರಚಿಸಿರುವ ಮಹಾಭಾರತ ತಾತ್ಪರ್ಯ ನಿರ್ಣಯವು ಅತ್ಯುತ್ಕೃಷ್ಟ ವಿಮರ್ಶಾತ್ಮಕ ಗ್ರಂಥವಾಗಿದೆ. ಈ ಗ್ರಂಥಗಳ ಅಧ್ಯಯನದಿಂದ ಉತ್ತಮವಾದ ಜ್ಞಾನವನ್ನು ಪಡೆಯಬಹುದು ಎಂದು ಪುತ್ತಿಗೆ ಶ್ರೀಪಾದರು ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿರುವ ಶ್ರೀ ಪ್ರಸನ್ನ ಆಚಾರ್ಯರ ಮನೆಯಲ್ಲಿ ನಡೆದ ತಾತ್ಪರ್ಯ ನಿರ್ಣಯ ಗ್ರಂಥದ ಮಂಗಳೋತ್ಸವದಲ್ಲಿ ಅನುಗ್ರಹ ಸಂದೇಶವನ್ನು ನೀಡಿದರು. ಶ್ರೀ ಪ್ರಸನ್ನ ಆಚಾರ್ಯರ ಮಗನಾದ ಚಿ. ಸಾತ್ವಿಕನಿಗೆ ಪ್ರಸಿದ್ಧ ವಿದ್ವಾಂಸರಾದ ಪ್ರೊ ಹರಿದಾಸ ಭಟ್ಟರು ಕಳೆದ ಕೆಲವು ತಿಂಗಳುಗಳಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥದ ಪಾಠವನ್ನು ಮಾಡುತ್ತಿದ್ದರು. ಅದರ ಮಂಗಳೋತ್ಸವದ ನಿಮಿತ್ತವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ವಾನ್ ಹರಿದಾಸ ಭಟ್ಟರು ಮಧ್ವಾಚಾರ್ಯರ ಗ್ರಂಥಗಳ ಮಹತ್ವವನ್ನು ತಿಳಿಸಿದರು. ಚಿ.ಸಾತ್ವಿಕನು ಗ್ರಂಥದ ಅನುವಾದವನ್ನು ಮಾಡಿದನು.
ಪರಮಪೂಜ್ಯ ಶ್ರೀಪಾದರ ಮುಖ್ಯ ಕಾರ್ಯದರ್ಶಿಗಳಾದ ವಿದ್ವಾನ್ ಎಂ.ಪ್ರಸನ್ನ ಆಚಾರ್ಯರ ಮನೆಯಲ್ಲಿ ಇವತ್ತು ಶ್ರೀಪುತ್ತಿಗೆ ಮಠದ ಸಂಸ್ಥಾನ ಪೂಜೆ, ಯತಿ ಭಿಕ್ಷೆ ಹಾಗೂ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥದ ಮಂಗಳ ಮತ್ತು ಬದರೀಯಾತ್ರೆಯ ಸಮರ್ಪಣಾ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆಯಿತು. ಈ ಸಂದರ್ಭದಲ್ಲಿ 108 ಜನರಿಗೆ ಗೀತಾಲೇಖನ ಯಜ್ಞದ ದೀಕ್ಷೆಯನ್ನು ನೀಡಲಾಯಿತು ಅನೇಕ ಪ್ರಸಿದ್ಧ ವಿದ್ವಾಂಸರು ಹಾಗೂ ಮಠದ ಅಭಿಮಾನಿಗಳು ಉಪಸ್ಥಿತರಿದ್ದರು