ಕುಂದಾಪುರ :ದೇಶದಾದ್ಯಂತ ಡ್ರಗ್ಸ್, ಮಧ್ಯಪಾನ, ಧೂಮಪಾನ ಮುಂತಾದ ಮಾದಕ ವ್ಯಸನಗಳಿಂದ ಮುಕ್ತವಾದ ಸ್ವಚ್ಛ ವ್ಯಕ್ತಿತ್ವ, ಸ್ವಚ್ಛ ಕ್ಯಾಂಪಸ್‍ಗಳ ಮೂಲಕ ಸ್ವಚ್ಛ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿ ಯುವ ಜನಾಂಗದ ಪಾತ್ರ ನಿರ್ಣಾಯಕವಾದುದು. ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ಮೆದುಳಿನಲ್ಲಿ ಬದಲಾವಣೆ ತಂದು ಅಪರಾಧಿ ಕೃತ್ಯಗಳಿಗೆ ಪ್ರಚೋದನೆ ನೀಡುತ್ತದೆ ಎಂದು ಕುಂದಾಪುರ ಪೋಲೀಸ್ ಠಾಣೆಯ ಉಪನಿರೀಕ್ಷಕ ಸುಧಾಕರ್ ಹೇಳಿದರು.ಅವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೋವರ್ಸ್ ಮತ್ತು ರೆಂಜರ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಶಮುಕ್ತ ಭಾರತ ಅಭಿಯಾನದಡಿಯಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ರೇಂಜರ್ಸ್ ಲೀಡರ್ ಶ್ರೀಮತಿ ಅರ್ಪಣಾ ಶೆಟ್ಟಿ ವಂದಿಸಿ, ರೋವರ್ಸ್ ಲೀಡರ್ ಶ್ರೀ ಸತೀಶ್ ಶೆಟ್ಟಿ ಹೆಸ್ಕತ್ತೂರ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಕಾಲೇಜಿನ ಎನ್.ಎಸ್.ಎಸ್. ಸ್ವಯಂ ಸೇವಕರಿಗಾಗಿ ಮಾದಕ ವ್ಯಸನದ ದುಷ್ಪರಿಣಾಮಗಳು ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು. ಪ್ರಥಮ ಬಿಬಿಎನ ಶ್ರದ್ಧಾ ಪ್ರಥಮ, ದ್ವಿತೀಯ ಬಿ.ಎಸ್ಸಿ.ಯ ರಕ್ಷತ್ ದ್ವಿತೀಯ, ಪ್ರಥಮ ಬಿಸಿಎ ವಿಭಾಗದ ಪೂಜಾ ಆಚಾರ್ ತೃತಿಯ ಸ್ಥಾನ ಪಡೆದರು. ಎನ್.ಎಸ್.ಎಸ್. ಸಹ ಕಾರ್ಯಕ್ರಮ ಅಧಿಕಾರಿ ದೀಪಾ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದರು.