ಬೆಂಗಳೂರು: 55 ಲಕ್ಷ ಸರ್ಕಾರಿ ಶಾಲೆ ಮಕ್ಕಳ ಮಾನಸಿಕ ದೈಹಿಕ ಆರೋಗ್ಯಕ್ಕಾಗಿ ರಾಗಿ ಮಾಲ್ಟ್ ವಿತರಣೆ ಮಾಡಲು ಪ್ರಾರಂಭ ಮಾಡಿದ್ದೇವೆ. ಇದು ಮಕ್ಕಳ ಉತ್ತಮ ಪೌಷ್ಠಿಕಾಂಶ ಉತ್ತಮ ಶಿಕ್ಷಣಕ್ಕೆ ರಹದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2013 ರಲ್ಲಿ ನಮ್ಮ ಸರ್ಕಾರ ಬಂದಾಗ ನಮ್ಮಲ್ಲಿ ಹಾಲು ಉತ್ಪಾದನೆ ಹೆಚ್ಚಾದ ಹಿನ್ನಲೆ ಅದನ್ನು ಕ್ಷೀರಭಾಗ್ಯ ಯೋಜನೆ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ನೀಡಲಾಯಿತು. ಇದಲ್ಲದೆ ಕಳೆದ ಬಜೆಟ್ ನಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ಕೊಡುವ ಕಾರ್ಯಕ್ರಮ ಶುರು ಮಾಡಿದ್ದೇವೆ ಎಂದು ಸಿಎಂ ವಿವರಿಸಿದರು
ಈ ಬಾರಿ ಅತ್ಯಂತ ಪೌಷ್ಠಿಕವಾದ ರಾಗಿ ಮಾಲ್ಟ್ ಕೊಡುವ ಕಾರ್ಯಕ್ರಮ ಆರಂಭಿಸಲಾಗಿದೆ. ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು