ಉಡುಪಿ : ಉಡುಪಿ-ಚಿಕ್ಕಮಗಳೂರು ಕ್ಷೇತ್ರದಾದ್ಯoತ ನಡೆದಿರುವ ಎಲ್ಲಾ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಾನೇ ಮಾಡಿರುವುದು ಎಂದು ಸುಳ್ಳಿನ ಕಂತೆಯನ್ನೇ ಹರಿಯ ಬಿಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮುoದಿನ ಚುನಾವಣೆಗೆ ಯಾವ ಪಕ್ಷದಲ್ಲಿ ಸ್ಪರ್ಧೆಸುತ್ತಾರೆ ಎಂಬ ಜಿಜ್ಞಾಸೆ ಪ್ರಾಯಶ: ಕಾಂಗ್ರೆಸ್ ಕಾರ್ಯಕರ್ತರ ಸಹಿತ ಎಲ್ಲ ಮತದಾರರಲ್ಲಿ ಜಾಗ್ರತವಾಗಿರುವುದು ವಾಸ್ತವ. ಯಾವುದೇ ದಾಖಲೆಗಳಿಲ್ಲದೆ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿರುವ ಹೆಗ್ಡೆ ಮಾತನ್ನು ನಂಬುವಷ್ಟು ಜನತೆ ದಡ್ಡರಲ್ಲ. ಈ ನಿಟ್ಟಿನಲ್ಲಿ ವಿಕಸಿತ ಭಾರತವನ್ನು ವಿಶ್ವ ಗುರು ಮಾಡಲು ಹೊರಟಿರುವ ರಾಷ್ಟ್ರ ಭಕ್ತ ನರೇoದ್ರ ಮೋದಿಯವರನ್ನು ಮಗದೊಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿಯ ಸಮರ್ಥ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬೆoಬಲಿಸಿ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಒಂದು ಕಾಲದಲ್ಲಿ ನಮ್ಮ ಭಾರತ, ದೇಶದ ಚಿನ್ನವನ್ನು ಅಡವಿಟ್ಟು ದೇಶವನ್ನು ನಡೆಸುವ ಸ್ಥಿತಿಯಿಂದ ಪ್ರಸಕ್ತ ಮೋದಿ ಆಡಳಿತಾವಧಿಯಲ್ಲಿ 70ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಸಾಲ ನೀಡುವ ಮಟ್ಟಕ್ಕೆ ಬೆಳೆದಿದೆ. ಪುಲ್ವಾಮ ದಾಳಿಗೆ 24 ಗಂಟೆಯೊಳಗೆ ಪಾಕಿಸ್ಥಾನದ ಗಡಿ ದಾಟಿ ಸರ್ಜಿಕಲ್ ಸ್ರೈಕ್ ಮೂಲಕ ಪ್ರತ್ಯುತ್ತರ ನೀಡಿದೆ. ಪ್ರಧಾನಿ ಮೋದಿ ಮಧ್ಯಸ್ಥಿಕೆಯಿಂದ ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿ ನಮ್ಮ ದೇಶದ ಧ್ವಜದೊಂದಿಗೆ ಭಾರತ ಮತ್ತಿತರ ದೇಶಗಳ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿರುವುದು ದೇಶದ ಕೀರ್ತಿ ಹೆಚ್ಚಿಸಿದೆ. ಭಾರತೀಯರ ಶೃದ್ಧಾ ಕೇಂದ್ರ ರಾಮ ಮಂದಿರ ನಿರ್ಮಾಣ, ಸಂವಿಧಾನದ 370ನೇ ವಿಧಿ ರದ್ದತಿ, ಟ್ರಿಪಲ್ ತಲಾಕ್ ರದ್ಧತಿ ಮುಂತಾದ ಐತಿಹಾಸಿಕ ಸಾಧನೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದಿಂದ ಸಾಧ್ಯವಾಗಿದೆ ಎಂದರು.
ಕಾಂಗ್ರೆಸ್ ದೇಶದ ಬಹುಸಂಖ್ಯಾತರ ಭಾವನೆಗಳ ಸಹಿತ ರಾಷ್ಟ್ರೀಯ ಏಕತೆ ಮತ್ತು ಅಖಂಡತೆಗೆ ಕವಡೆ ಕಿಮ್ಮತ್ತು ನೀಡದೆ ರಾಷ್ಟ್ರ ಹಿತಕ್ಕೆ ಕೊಡಲಿಯೇಟು ನೀಡುತ್ತಾ ಬಂದಿದೆ. ಭಯೋತ್ಪಾದಕರು, ರಾಷ್ಟ್ರ ವಿರೋಧಿಗಳ ಬಗ್ಗೆ ಮೃದು ಧೋರಣೆ ತಾಳಿರುವ ಕಾಂಗ್ರೆಸ್ ನಿಂದ ದೇಶದ ರಕ್ಷಣೆ ಊಹಿಸಲಸಾಧ್ಯ ಎಂಬಂತಾಗಿದೆ ಎಂದರು.
ದೇಶವನ್ನು ವಿಶ್ವದ ಐದನೇ ಆರ್ಥಿಕ ಶಕ್ತಿಯನ್ನಾಗಿಸಿ ಮುಂದಿನ ಅವಧಿಯಲ್ಲಿ ವಿಶ್ವದ ಮೂರನೇ ಆರ್ಥಿಕ ಶಕ್ತಿಯನ್ನಾಗಿಸುವ ಪಣ ತೊಟ್ಟಿರುವ ಪ್ರಧಾನಿ ಮೋದಿ ಕೈ ಬಲಪಡಿಸಲು ಕೋಟ ಶ್ರೀನಿವಾಸ ಪೂಜಾರಿಯವರನ್ನು ದೊಡ್ಡ ಅಂತರದ ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಗುರ್ಮೆ ಮನವಿ ಮಾಡಿದರು.
ರಾಷ್ಟೀಯ ಹೆದ್ದಾರಿ ಅವೈಜ್ಞಾನಿಕ ಯೋಜನೆಗೆ ಕಾಂಗ್ರೆಸ್ ಕಾರಣ : ಕೆ.ರಘುಪತಿ ಭಟ್
ಯುಪಿಎ ಆಡಳಿತಾವಧಿಯಲ್ಲಿ ಉಡುಪಿಯ ಆಸ್ಕರ್ ಫೆರ್ನಾಂಡಿಸ್ ಹೆದ್ದಾರಿ ಸಚಿವರಾಗಿದ್ದ ಸಂದರ್ಭದಲ್ಲಿ ನಡೆದ ರಾ.ಹೆ. 66 ಅವೈಜ್ಞಾನಿಕ ಯೋಜನೆಗೆ ಕಾಂಗ್ರೆಸ್ ನೇರ ಕಾರಣ ಎಂದು ಉಡುಪಿಯ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್ ಆರೋಪಿಸಿದರು.
ಯುಪಿಎ ಅವಧಿಯಲ್ಲಿ ರಾ.ಹೆ. ಯೋಜನೆಯಡಿ ಸಂತೆಕಟ್ಟೆ, ಅಂಬಲಪಾಡಿ, ಕಟಪಾಡಿ, ಪಡುಬಿದ್ರಿಯಲ್ಲಿ ಪ್ರದೇಶದ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ ಅಂದು ದಿವ್ಯ ಮೌನ ವಹಿಸಿದ್ದು, ಸಂಸದೆ ಶೋಭಾ ಕರಂದ್ಲಾಜೆ ಪ್ರಯತ್ನದ ಫಲವಾಗಿ ಇದೀಗ ಈ ಎಲ್ಲಾ ಜಂಕ್ಷನ್ ಗಳ ಸಮಸ್ಯೆ ಪರಿಹರಿಸಲು ಅಂಡರ್ ಪಾಸ್, ಫ್ಲೈ ಓವರ್ ನಿರ್ಮಿಸಲು ಬಿಜೆಪಿ ನೇತೃತ್ವದ ಕೇoದ್ರ ಸರಕಾರ ಕಾರ್ಯಪ್ರವೃತ್ತವಾಗಿದೆ ಎಂದರು.
ಮಾಜಿ ಸಂಸದ ಆಸ್ಕರ್ ಫೆರ್ನಾಂಡಿಸ್ ಮನೆಯಿಂದ ಕೆಲವೇ ಮೀಟರ್ ಪಕ್ಕದಲ್ಲಿರುವ ಅಂಬಲಪಾಡಿ ಜಂಕ್ಷನ್ ನಲ್ಲಿ ಟ್ರಾಫಿಕ್ ಸಮಸ್ಯೆಗೆ ಸಮರ್ಪಕ ಪರಿಹಾರ ಒದಗಿಸಲು ವಿಫಲರಾಗಿರುವ ಹೆಗ್ಡೆಯವರು ತಮ್ಮ ಅವಧಿಯಲ್ಲಿ ನಡೆದ ಪ್ರಮಾಧಗಳನ್ನು ಮುಚ್ಚಿಟ್ಟು ಬಿಜೆಪಿ ಮೇಲೆ ಗೂಬೆ ಕೂರಿಸುವ ವಿಫಲ ಯತ್ನದಲ್ಲಿ ತೊಡಗಿರುವುದು ಹಾಸ್ಯಾಸ್ಪದ ಎಂದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ದಾಖಲೆ ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ತಾನೇ ಮಾಡಿರುವುದು ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿರುವ ಹೆಗ್ಡೆಯವರು ತಮ್ಮ ಅವಧಿಯಲ್ಲಿ ಹಾಗೂ ತಮ್ಮ ಪಕ್ಷದ ಈ ಹಿಂದಿನ ಸಂಸದರ ಸುದೀರ್ಘ ಅವಧಿಯಲ್ಲಿ ನಡೆದ ಅಭಿವದ್ಧಿ ಕಾರ್ಯಗಳ ವಿವರಗಳನ್ನು ದಾಖಲೆ ಸಮೇತ ಬಹಿರಂಗಪಡಿಸಲಿ ಎಂದು ಭಟ್ ಸವಾಲೆಸೆದಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ಪಾಲ್ ಎ. ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಕೆ.ರಾಘವೇಂದ್ರ ಕಿಣಿ, ರೇಷ್ಮಾ ಉದಯ್ ಶೆಟ್ಟಿ, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರು, ಮಂಡಲಗಳ ಅಧ್ಯಕ್ಷರು, ಚುನಾವಣಾ ನಿರ್ವಹಣಾ ಸಮಿತಿಯ ಸದಸ್ಯರು, ಪಕ್ಷದ ಪ್ರಮುಖರು ಹಾಗೂ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.